ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯಲ್ಲಿ ಇರುವ 1.5 ಕೋಟಿ ಜನಸಂಖ್ಯೆಯಲ್ಲಿ ಶೇ. 50% ರಷ್ಟು ಮಹಿಳೆಯರು ಇದ್ದಾರೆ. ಮಹಿಳೆಯರ ನೆರವಿಗಾಗಿ ಸ್ಥಾಪಿಸಲಾಗಿರುವ ಸಖಿ ಒನ್ ಸ್ಟಾಪ್ ಕೇಂದ್ರಗಳಲ್ಲಿ ಒಂದು ವರ್ಷದಲ್ಲಿ ಕೇವಲ 438 ಕೌಟುಂಬಿಕ ದೌರ್ಜನ್ಯ ದೂರುಗಳು ದಾಖಲಾಗಿವೆ. ಇದು ಸಾರ್ವಜನಿಕ ವಲಯದಲ್ಲಿ ಮಹಿಳಾ ಸಹಾಯವಾಣಿ ಮತ್ತು ದೌರ್ಜನ್ಯ ವಿರುದ್ಧ ಪರಿಹಾರ ಪ್ರಕ್ರಯೆ ಕುರಿತು ಹೆಚ್ಚಿನ ಜಾಗೃತಿ ಅಗತ್ಯವಿರುವುದನ್ನು ಬಿಂಬಿಸುತ್ತದೆ ಎಂದು ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ಅಭಿಪ್ರಾಯ ಪಟ್ಟರು. ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ‘ಸಖಿ’ (ಒನ್ ಸ್ಟಾಪ್ ಸೆಂಟರ್) ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ನೊಂದಿರುತ್ತಾರೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಮಾತ್ರವಲ್ಲ, ಮೊದಲಿಗೆ ಅವರ ಅಳಲನ್ನು ಕೇಳುವ ಸೂಕ್ಷ್ಮತೆಯನ್ನು ಹೊಂದಿರಬೇಕು. ಇಂತಹ ಪ್ರಕರಣಗಳ ಬಗ್ಗೆ ದೂರು ಸಲ್ಲಿಸಲು ಧೈರ್ಯದಿಂದ ಮುಂದೆ ಬರುವಂತೆ ಸರ್ವಜನಿಕ ವಲಯದಲ್ಲಿ ಜಾಗೃತಿ ಹೆಚ್ವಿಸಬೇಕು ಎಂದು ಸೂಚಿಸಿದರು.

ವರದಕ್ಷಿಣೆ ಕಿರುಕುಳ, ಸಾವು, ಆಸಿಡ್ ದಾಳಿ ಮತ್ತು ಇತರೆ ದೌರ್ಜನ್ಯದಿಂದಾಗಿ ಸರ್ಕಾರಿ ಆಸ್ಪತ್ರೆಗಳೊಂದಿಗೆ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುವ ಮಹಿಳೆಯರ ಪ್ರಕರಣಗಳೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಕಾಲದಲ್ಲಿ ವರದಿಯಾಗಬೇಕು. ಇಲ್ಲವಾದಲ್ಲಿ ಪ್ರಕರಣಗಳ ನೈಜ ಅಂಕಿಅಂಶ ದೊರೆಯುವುದಿಲ್ಲವೆಂದು ಅವರು ತಿಳಿಸಿದರು. ಸಖಿ ಕೇಂದ್ರ, ಆಸ್ಪತ್ರೆಗಳು, ತಾಲ್ಲೂಕು ಮಟ್ಟದ ಇಲಾಖಾ ಕಚೇರಿಗಳು ಸೇರಿದಂತೆ ಪೊಲೀಸ್ ದೂರುಗಳನ್ನು ಕ್ರೋಢೀಕರಿಸಿ ಮುಂದಿನ ಸಭೆಯಲ್ಲಿ ಒಟ್ಟರೆ ಅಂಕಿಅಂಶವನ್ನು ಪ್ರಸ್ತುತ ಪಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಈ ಬಗ್ಗೆ ಖಾಸಗಿ ಆಸ್ಪತ್ರೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುವಂತೆ ಹಾಗೂ ಎಲ್ಲ ಆಸ್ಪತ್ರೆ, ಸರ್ಕಾರಿ ಕಚೇರಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಅರಿವು ಮೂಡಿಸಬೇಕು ಎಂದು ಸೂಚಿಸಿದರು. ಮಹಿಳೆಯರು ಸುಲಭವಾಗಿ ತಲುಪಲು ಸಖಿ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಸಲಹೆ ನೀಡಿದ ಜಿಲ್ಲಾಧಿಕಾರಿಗಳು ಸಖಿ ಕೇಂದ್ರಗಳ ಬಗ್ಗೆ ಜನರಲ್ಲಿರುವ ಅರಿವಿನ ಬಗ್ಗೆ ಸಮೀಕ್ಷೆ ನಡೆಸಿ, ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸೂಚಿಸಿದರು.
ಹೆಚ್ಚುವರಿಯಾಗಿ ಒಂದು ಸಖಿ ಕೇಂದ್ರವನ್ನು ತೆರೆಯಲು ಸರ್ಕಾರದಿಂದ ಸೂಚನೆ ಬಂದಿದ್ದು ಸ್ಥಳದ ಆಯ್ಕೆ ಮಾಡಬೇಕಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಡಾ. ನಿಶ್ಚಲ್ ಸಭೆಯ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಿ ಎ ಶ್ರೀನಿವಾಸ್ ಅವರು ಆನೇಕಲ್ ತಾಲೂಕು ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳಿದ್ದು, ತಮಿಳುನಾಡಿನ ಗಡಿಯಲ್ಲಿರುವುದರಿಂದ ಅಲ್ಲಿ ಸಖಿ ಒನ್ ಸ್ಟಾಪ್ ಕೇಂದ್ರವನ್ನು ಆರಂಭಿಸುವುದು ಸೂಕ್ತ ಎಂದು ಸಲಹೆ ನೀಡಿದರು. ಸಭೆಯಲ್ಲಿ ಆರ್ ಸಿ ಹೆಚ್ ಅಧಿಕಾರಿ ಡಾ. ಸಯ್ಯದ್ ಮದಿನಿ, ತಾಲ್ಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.