ಮಂಡ್ಯ : ಕೆ.ಆರ್.ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚುವರಿ ಹೊರ ಹರಿವಿನಿಂದ ಜಿಲ್ಲೆಯಲ್ಲಿ ಪ್ರಸ್ತುತ ಪ್ರವಾಹ ಪರಿಸ್ಥಿತಿ ಉದ್ಬವಾಗಿದ್ದು ಆದಕಾರಣ ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಾದ ಜಿ. ಲಕ್ಷ್ಮೀ ಕಾಂತ ರೆಡ್ಡಿ ಅವರು ತಿಳಿಸಿದ್ದಾರೆ.
ಪ್ರವಾಹ ಪೀಡಿತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ವಾಸವಿದ್ದು ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು.
ಸೇತುವೆ ಮುಳುಗಡೆಯಾಗುವ ಕಡೆ ವಾಹನಗಳ ಹಾಗೂ ಸಾರ್ವಜನಿಕರ ಪ್ರವೇಶ ನಿರ್ಭಂಧಿಸಲು ಸೂಕ್ತ ಬ್ಯಾರಿಕೇಡ್ ಅಳವಡಿಸಿ ನಿಗಾ ವಹಿಸಲು ಪೊಲೀಸ್ ಹಾಗೂ ಸ್ಥಳೀಯ ಸಂಸ್ಥೆಗಳ ಸಿಬ್ಬಂಧಿಯನ್ನು ಕರ್ತವ್ಯಕ್ಕೆ ನಿಯೋಜಿಸುವಂತೆ ತಿಳಿಸಿದ್ದಾರೆ.
ಪ್ರವಾಹದ ಸಮಯದಲ್ಲಿ ನದಿಪಾತ್ರಗಳಲ್ಲಿ ಮುಳುಗಡೆಯಾಗಬಹುದಾದ/ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿ ಅವರ ಮನವೊಲಿಸಿ ಸ್ಥಳಾಂತರಿಸುವುದು. ಒಂದು ವೇಳೆ ಒಪ್ಪದಿದ್ದಲ್ಲಿ ಒತ್ತಾಯ ಪೂರ್ವಕ ವಾಗಿ ಸುರಕ್ಷಿತ ಸ್ಥಳಗಳಿಗೆ / ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲು ಕ್ರಮ ವಹಿಸುವುದು. ಈ ಬಗ್ಗೆ ಡಂಗೂರ ಸಾರುವ ಮೂಲಕ ಹೆಚ್ಚು ಪ್ರಚಾರ ಮಾಡತಕ್ಕದ್ದು ಹಾಗೂ ಯಾವುದೇ ಪರಿಸ್ಥಿತಿಯಲ್ಲೂ ಜೀವ ಹಾನಿಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.