ಎಲ್ಲರೂ ಭೂಗ್ರಹದ ರಕ್ಷಕರಾಗಬೇಕು: ಈಶ್ವರ ಖಂಡ್ರೆ

ಬೆಂಗಳೂರು: ಪ್ರಕೃತಿ, ಪರಿಸರ ಸಂರಕ್ಷಣೆ ಮಾಡುತ್ತಲೇ ಅಭಿವೃದ್ಧಿ ಸಾಧಿಸುವುದೇ ಸುಸ್ಥಿರ ಅಭಿವೃದ್ಧಿಯಾಗಿದ್ದು, ಜೀವರಾಶಿಯೂ ಉಳಿಯಬೇಕು, ಜೀವನೋಪಾಯವೂ ಇರಬೇಕು, ಇದರ ಜೊತೆಗೆ ಪ್ರಗತಿ ಸಾಧಿಸಬೇಕು ಎಂಬುದು ಸರ್ಕಾರದ ನಿಲುವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪ್ರತಿಪಾದಿಸಿದ್ದಾರೆ,

ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿಂದು ನಡೆದ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯಲ್ಲಿ ಬೆಂಗಳೂರು ಘೋಷಣೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಕೃತಿ ಮತ್ತು ಪರಿಸರ, ಅರಣ್ಯ ಉಳಿದಾಗ ಮಾತ್ರ ಮಾನವ ಕುಲ ಉಳಿಯಲು ಸಾಧ್ಯ. ಹೀಗಾಗಿ ನಾವು ನೀವೆಲ್ಲರೂ ಭೂಗ್ರಹದ ರಕ್ಷಕರಾಗಬೇಕು ಎಂದು ಕರೆ ನೀಡಿದರು.

 

ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತವಾದ ಬೆಂಗಳೂರು, ತಾಂತ್ರಿಕ ನಾವೀನ್ಯತೆಯ ಕೇಂದ್ರ ಮಾತ್ರವಲ್ಲ, ಸುಸ್ಥಿರ ಅಭಿವೃದ್ಧಿಯ ಅನ್ವೇಷಣೆಯಲ್ಲಿಯೂ ಮುಂಚೂಣಿಯಲ್ಲಿದೆ. ಜಗತ್ತು ಇಂದು ಎದುರಿಸುತ್ತಿರುವ ಸವಾಲುಗಳಿಗೆ ಕರ್ನಾಟಕ ಅದರಲ್ಲೂ ಬೆಂಗಳೂರಿನ ಉದ್ಯಮಿಗಳು ಪರಿಹಾರ ಸಂಶೋಧಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಈ ಶೃಂಗಸಭೆ ಸಕಲ ಜೀವರಾಶಿಗಳೂ ಬದುಕಲು ಇರುವ ಏಕೈಕ ಭೂಗ್ರಹ ಮತ್ತು ಅದರ ಎಲ್ಲಾ ನಿವಾಸಿಗಳಿಗೆ ಸುಸ್ಥಿರ ಭವಿಷ್ಯದ ಭರವಸೆಗಳನ್ನು ಖಾತ್ರಿಪಡಿಸಬೇಕು. ನಗರೀಕರಣ, ಸಂಚಾರ ದಟ್ಟಣೆ, ಮಾಲಿನ್ಯದಿಂದಾಗಿ ಇಂದು ಶುದ್ಧ ಗಾಳಿ, ಶುದ್ಧ ನೀರಿನ ಲಭ್ಯತೆಯ ಸಮಸ್ಯೆಗಳು ಎದುರಾಗಿವೆ. ಈ ಶೃಂಗಸಭೆಯ ವಸ್ತು ವಿಷಯ, ” ಸುಸ್ಥಿರ ಅಭಿವೃದ್ಧಿ ನಾಯಕತ್ವ,” ಎಂಬುದಾಗಿದ್ದು, ದೂರದೃಷ್ಟಿಯ ನಾಯಕತ್ವದ ಅಗತ್ಯವನ್ನು ಪ್ರತಿಪಾದಿಸಬೇಕು ಎಂದರು.

ಸುಸ್ಥಿರ ಅಭಿವೃದ್ಧಿ ಎಂಬುದು ಕೇವಲ ಒಂದು ಪರಿಕಲ್ಪನೆಯಲ್ಲ; ಇದು ನೈತಿಕತೆಯಾಗಬೇಕು. ಬದ್ಧತೆಯಾಗಬೇಕು. ಇಂದು ನಾವು ಕೈಗೊಳ್ಳುವ ನಿರ್ಧಾರ, ಕ್ರಮಗಳಿಂದ ಭವಿಷ್ಯದ ಕ್ಷೇಮದೊಂದಿಗೆ ರಾಜೀ ಮಾಡಿಕೊಳ್ಳದಂತಿರಬೇಕು. ಭವಿಷ್ಯದ ಪೀಳಿಗೆಗೆ ಸಮೃದ್ಧ ಭೂಮಿಯನ್ನು ಸುಸ್ಥಿರ ಅಭಿವೃದ್ಧಿಯ ಪ್ರಯೋಜನಗಳು ಕಟ್ಟಕಡೆಯ ವ್ಯಕ್ತಿಗೂ ಲಭ್ಯವಾಗಬೇಕು, ನಾವು ಅಂತರ್ಗತ ಬೆಳವಣಿಗೆಗೆ ಆದ್ಯತೆ ನೀಡಬೇಕು,  ಸಾಮಾಜಿಕ ನ್ಯಾಯ, ಅಸಮಾನತೆಯನ್ನು ನಿವಾರಣೆಗೆ ಒತ್ತು ನೀಡಬೇಕು ಎಂದರು.

 

ಇಂಗಾಲದ ಹೊರಸೂಸುವಿಕೆ ತಗ್ಗಿಸಲು ಶುದ್ಧ ಇಂಧನಕ್ಕೆ ಹೆಚ್ಚು ಒತ್ತು ನೀಡಬೇಕು.  ಸುಸ್ಥಿರ ಅಭಿವೃದ್ಧಿಗೆ ನಾವೀನ್ಯಪೂರ್ಣ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಕೃಷಿ, ಇಂಧನ ಮತ್ತು ಆರೋಗ್ಯ ಆರೈಕೆ ಕ್ಷೇತ್ರದಲ್ಲೂ ಉತ್ತಮ ರೂಢಿಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣದ ಹಂತದ್ಲೇ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆಯನ್ನು ಮೂಡಿಸಬೇಕು ಎಂದು ಹೇಳಿದರು.

ಸುಸ್ಥಿರ ಅಭಿವೃದ್ಧಿಗೆ ದೀರ್ಘಕಾಲೀನ ದೃಷ್ಟಿಕೋನದ ಅಗತ್ಯವಿದೆ ಎಂದು ಪ್ರತಿಪಾದಿಸಿದ ಈಶ್ವರ ಖಂಡ್ರೆ, ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನದ ಪರಿಣಾಮವನ್ನು ತಗ್ಗಿಸುವ ಮತ್ತು ನಮ್ಮ ಪರಿಸರವನ್ನು ರಕ್ಷಿಸುವ ಕಾರ್ಯತಂತ್ರಗಳು ಈ ಶೃಂಗಸಭೆಯಲ್ಲಿ ಹೊರಹೊಮ್ಮಲಿ ಎಂದು ಆಶಿಸಿದರು.

ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಜನರ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಹೇಳಿದ ಅವರು,

ಜೀವವೈವಿಧ್ಯತೆಯನ್ನು ರಕ್ಷಿಸುವ ಮತ್ತು ಪುನಃಸ್ಥಾಪಿಸುವ ತಕ್ಷಣದ ಅಗತ್ಯವನ್ನು ಚರ್ಚಿಸುವತ್ತ ಈ ಶೃಂಗಸಭೆ ಗಮನ ಹರಿಸಬೇಕು ಎಂದು ಸಲಹೆ ಮಾಡಿದರು.

 

ಶೃಂಗದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ನಿವೃತ್ತ ಮುಖ್ಯಕಾರ್ಯದರ್ಶಿ ಎ. ರವೀಂದ್ರ ಮತ್ತಿತರರು ಪಾಲ್ಗೊಂಡಿದ್ದರು

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top