ಬೆಂಗಳೂರು : ರಾಜ್ಯದ 5 ವಿದ್ಯುತ್ ವಿತರಣ ಕಂಪನಿಗಳು ಸಾಲ ಮತ್ತು ನಷ್ಟದಲ್ಲಿ ಮುಳುಗಿ ಹೋಗಿವೆ. ಇದಕ್ಕೆ ರಾಜ್ಯ ಸರ್ಕಾರ ಕಾರಣವಲ್ಲ. ಸಕಾಲಕ್ಕೆ ಎಲ್ಲ ಕಂಪನಿಗಳಿಗೆ ಸಹಾಯಧನ ಹೋಗಿದೆ.
ಆದರೂ ನಷ್ಟದ ಲ್ಲಿರಲು ವಿದ್ಯುತ್ ಇಲಾಖೆ ಆಡಳಿತವೇ ಕಾರಣ. ಜನವರಿಯಲ್ಲಿ ವಿದ್ಯುತ್ ಹಣ ಕಾಸು ನಿಗಮ (ಪಿಎಫ್‍ಸಿ) ವಾರ್ಷಿಕ ವರದಿ ಬಿಡುಗಡೆ ಮಾಡಿದ್ದು ಹಿಂದೆ ಲಾಭದಲ್ಲಿದ್ದ ಮಂಗಳೂರು ಕೂಡ ಈಗ ನಷ್ಟದ ಪಟ್ಟಿಗೆ ಸೇರ್ಪಡೆಗೊಂಡಿದೆ. ಅತಿ ಹೆಚ್ಚು ನಷ್ಟ ಇರುವುದು ಬೆಸ್ಕಾಂ. ಕಳೆದ ವರ್ಷ ಇದರ ನಷ್ಟ 5476 ಕೋಟಿ ರೂ. ಒಟ್ಟು ಕ್ರೋಡೀಕೃತ ನಷ್ಟ 13819 ಕೋಟಿ ರೂ. ಒಟ್ಟು ಇದುವರೆಗೆ ಮಾಡಿರುವ ಸಾಲ 22,611 ಕೋಟಿ ರೂ. ವಿದ್ಯುತ್ ವಿತರಣ ನಷ್ಟ ಶೇ.8.52. ಪ್ರತಿ ಯೂನಿಟ್ ಖರೀದಿ ದರ 9.04 ರೂ. ಮಾರಾಟದಿಂದ ಬರುವ ದರ 7.82 ರೂ. ಅಂದರೆ ಪ್ರತಿ ಯೂನಿಟ್ ಅಂತರ 1.21 ರೂ. ಇದನ್ನು ಸರಿತೂಗಿಸುವುದೇ ಕಷ್ಟ.
ರಾಜ್ಯದಲ್ಲಿ ಈಗ ಪ್ರತಿದಿನ 17,056 ಮೆಗಾವ್ಯಾಟ್ ಬಳಕೆಯಾದರೆ ಅದರಲ್ಲಿ ಬೆಸ್ಕಾಂ 7444 ಮೆಗಾವ್ಯಾಟ್ ಪಾಲು ಹೊಂದಿದೆ. ಬೆಸ್ಕಾಂ ಹಾದಿಯಲ್ಲೇ ಇತರ ಕಂಪನಿಗಳು ಸಾಗಿವೆ. ಮೈಸೂರು ಕಂಪನಿಯ ಈ ವರ್ಷದ ನಷ್ಟ 1030 ಕೋಟಿರೂ. ಇದುವರೆಗೆ ಇರುವ ನಷ್ಟ 4064 ಕೋಟಿ ರೂ. ಒಟ್ಟು ಸಾಲ 5410 ಕೋಟಿರೂ. ವಿದ್ಯುತ್ ವಿತರಣ ನಷ್ಟ ಶೇ. 8.76. ಗುಲ್ಬರ್ಗ ಕಂಪನಿಯ ನಷ್ಟ 766 ಕೋಟಿ, ಒಟ್ಟು ನಷ್ಟ 5661 ಕೋಟಿ, ಸಾಲ 6147 ಕೋಟಿರೂ. ಹುಬ್ಬಳ್ಳಿ ಕಂಪನಿಯ ವಿದ್ಯುತ್ ವಿತರಣ ನಷ್ಟ ಶೇ.12.14, ಒಟ್ಟು ನಷ್ಟ 11398 ಕೋಟಿ ರೂ. ಸಾಲ 12251 ಕೋಟಿರೂ.
ರಾಜ್ಯದ ವಿದ್ಯುತ್ ಕಂಪನಿಗಳ ನಷ್ಟವನ್ನು ನೋಡಿದರೆ ಇವುಗಳು ಬೆಳವಣಿಗೆ ಕಾಣುವುದು ಕಷ್ಟ. ಸರ್ಕಾರಿ ಕಂಪನಿಗಳಾಗಿರುವುದರಿಂದ ಉಳಿದಿವೆ. ಇವುಗಳ ಆರ್ಥಿಕ ಪುನರ್ ರಚನೆಗೆ ಹಲವು ಪ್ರಯತ್ನಗಳು ನಡೆದಿವೆ. ಗುರುಚರಣ್ ವರದಿಯಿಂದ ಹಿಡಿದು ಹಲವು ಮಾರ್ಗಸೂಚಿಗಳಿದ್ದರೂ ಆರ್ಥಿಕ ಚೇತರಿಕೆ ಕಂಡು ಬಂದಿಲ್ಲ. ವಿದ್ಯುತ್ ಖರೀದಿ ದರವೇ ಅಧಿಕವಾಗಿದೆ. ಪ್ರತಿ ವರ್ಷ ಏಪ್ರಿಲ್‍ನಲ್ಲಿ ಕೆಇಆರ್‍ಸಿ ಹೊಸ ದರವನ್ನು ನೀಡುತ್ತ ಬಂದಿದ್ದರೂ ಕಂಪನಿಗಳು ಉತ್ತಮಗೊಳ್ಳುವ ಲಕ್ಷಣ ಕಂಡು ಬಂದಿಲ್ಲ. ಕೇಂದ್ರ ಸರ್ಕಾರ ಈಗ ಹೊಸ ಕಾಯ್ದೆಯನ್ನು ಹಲವಾರು ತಿದ್ದುಪಡಿಗಳೊಂದಿಗೆ ತರಲು ಸಿದ್ಧತೆ ಮಾಡಿಕೊಂಡಿದೆ. ಸರ್ಕಾರದ ನೆರವು ನಿಂತಲ್ಲಿ ಈ ಕಂಪನಿಗಳು ವಿಲೇವಾರಿಗೆ ಬರುವುದಂತೂ ನಿಶ್ಚಿತ. ಆಗ ಖಾಸಗೀಕರಣ ಅನಿವಾರ್ಯವಾಗಲಿದೆ.
ಖಾಸಗಿ ಕಂಪನಿಗಳು ದೇಶದ ಇತರ ಭಾಗಗಳಲ್ಲಿ ಉತ್ತಮವಾಗಿ ನಡೆಯುತ್ತಿವೆ. ಸೂರತ್ ನಗರದಲ್ಲಿ ಟಾರೆಂಟ್ ಖಾಸಗಿ ಕಂಪನಿ ಉತ್ತಮವಾಗಿ ನಡೆಯುತ್ತಿದ್ದು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ಒಟ್ಟು ಲಾಭ 686 ಕೋಟಿ ರೂ. ಸಾಲ 208ಕೋಟಿ ರೂ. ಮಾತ್ರ. ಇದರ ವಿದ್ಯುತ್ ನಷ್ಟ ಶೇ.2.81 ಮಾತ್ರ.
ಕರ್ನಾಟಕದ ಕಂಪನಿಗಳೂ ಈ ಕಂಪನಿಯ ರೀತಿಯಲ್ಲಿ ಜನರಿಗೆ ಸೇವೆ ಸಲ್ಲಿಸಿದರೆ ಜನರ ಮೇಲಿನ ಹೊರೆಯನ್ನು ಕಡಿಮೆ ಮಾಡಬಹುದು. ಪಿಎಫ್‍ಸಿ ಸಂಸ್ಥೆ ಒಟ್ಟು 72 ವಿತರಣ ಕಂಪನಿಗಳ ಆರ್ಥಿಕ ಪರಿಸ್ಥಿತಿ ಅಧ್ಯಯನ ಮಾಡಿ ವರದಿ ನೀಡಿದೆ. ಇದರಲ್ಲಿ ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ಸೇರಿವೆ. ಅಲ್ಲದೆ ವಿದ್ಯುತ್ ಇಲಾಖೆಗಳ ಮೌಲ್ಯಮಾಪನವೂ ನಡೆದಿದೆ. ಈ ವರದಿ ನಮ್ಮ ವಿದ್ಯುತ್ ಕಂಪನಿಗಳ ಅಧಿಕಾರಿಗಳ ಕಣ್ತೆರಸಬೇಕಿದೆ.
ಸರ್ಕಾರದಿಂದ ಸಬ್ಸಿಡಿ ಸಿಕ್ಕರೂ ವಿದ್ಯುತ್ ಕಂಪನಿಗಳು ನಷ್ಟದಲ್ಲಿ.. ಆಡಳಿತದಲ್ಲಿನ ನಿರ್ಲಕ್ಷ್ಯವೇ ನಷ್ಟಕ್ಕೆ ದಾರಿಯಾಯಿತೇ?



