ಹುಟ್ಟುಹಬ್ಬದ ಆಚರಣೆಯಲ್ಲಿ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ನುಡಿ
ಬಳ್ಳಾರಿ: ನಾನು ಚುನಾವಣೆಗೆ ಸ್ಪರ್ಧೆ ಮಾಡಿದಾಗ ಕೆಲವು ನಾಯಕರು ನನ್ನ ಬೆನ್ನಿಗೆ ಚೂರಿ ಹಾಕಿದರು, ಆದರೆ ನನ್ನ ಕ್ಷೇತ್ರದ ಮತದಾರರು ನನ್ನ ಕೈ ಹಿಡಿದು ಗೆಲ್ಲಿಸಿದರು ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ಶಾಸಕ ನಾರಾ ಭರತ್ ರೆಡ್ಡಿ ಅಭಿಮಾನಿಗಳ ವತಿಯಿಂದ ಎಪಿಎಂಸಿಯ ಗಣೇಶ ಗುಡಿ ಬಳಿ ಏರ್ಪಡಿಸಿದ್ದ ಶಾಸಕ ಭರತ್ ರೆಡ್ಡಿ ಅವರ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಾನು ಚುನಾವಣೆಗೆ ನಿಂತಾಗ ಒಬ್ಬ ಯುವಕ, ಇಂದು ಈ ಭರತ್ ರೆಡ್ಡಿ ಶಾಸಕನಾಗಲು ನೀವೆಲ್ಲ ಮತದಾರರು ಕಾರಣ. ಯಾವ ಜನ್ಮದ ಪುಣ್ಯವೋ ನೀವು ನನ್ನನ್ನು ನಿಮ್ಮ ಮನೆಯ ಸದಸ್ಯನಂತೆ ಭಾವಿಸಿದಿರಿ, ಚುನಾವಣೆ ಸಂದರ್ಭ ಕೆಲವರು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದರು, ಆದರೆ ಕಾಂಗ್ರೆಸ್ ಪಕ್ಷ, ಮತದಾರರು, ಕಾರ್ಯಕರ್ತರು, ಕನಕದುರ್ಗಮ್ಮ ದೇವಿಯ ಆಶೀರ್ವಾದ ನನ್ನನ್ನು ಕಾಪಾಡಿತು ಎಂದರು.

ಅತಿ ಚಿಕ್ಕ ವಯಸ್ಸಿನಲ್ಲಿ ನಾನು ಅತಿ ಹೆಚ್ಚು ಮತ ಪಡೆದಿದ್ದರೆ ಅದಕ್ಕೆ ಕ್ಷೇತ್ರದ ಮತದಾರರು ಕಾರಣ ಎಂದು ಹೇಳಿದ ಶಾಸಕ ನಾರಾ ಭರತ್ ರೆಡ್ಡಿ, ನಾನು ಏನೇ ಕೆಲಸ ಮಾಡಿದರು ಕೂಡ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದರು.
ಬಹಳ ಜನ ನಾನು ನನ್ನ ಜನ್ಮ ದಿನ ನಾನು ವಿದೇಶದಲ್ಲಿ ಆಚರಿಸುತ್ತೀರಾ? ಎಂದು ಕೇಳಿದರು, ಆದರೆ ನಾನು ಬಳ್ಳಾರಿಯ ಮತದಾರರ ಮಧ್ಯೆ ನನ್ನ ಜನ್ಮ ದಿನ ಆಚರಿಸಿಕೊಳ್ಳುತ್ತೇನೆಂದು ಹೇಳಿದೆ ಎಂದು ತಿಳಿಸಿದರು.
ಬಳ್ಳಾರಿಯ ಎಪಿಎಂಸಿ, ಶ್ರೀರಾಂಪುರ ಕಾಲೋನಿಯಲ್ಲಿ ಭೋಜನಕೂಟ ಏರ್ಪಡಿಸಿದರೆ ಅಲ್ಲಿಗೆ ಜಾತಿಯ ಜನ ಬರುವುದಿಲ್ಲ ಎಂದು ಕೆಲವರು ಹೇಳಿದರು ಆದರೆ ನಾನು ಅವರಿಗೆ ಹೇಳಿದೆ; ಯಾರು ಬಂದರೂ ಬಾರದಿದ್ದರೂ ನಾನು ಅಲ್ಲೇ ಊಟ ಏರ್ಪಡಿಸುವುದಾಗಿ ಪಟ್ಟು ಹಿಡಿದು ಇಲ್ಲಿ ನಿಮಗಾಗಿ ಭೋಜನಕೂಟ ಏರ್ಪಡಿಸಿರುವೆ ಎಂದರು.

ಡಿಸಿಸಿ ಕಾರ್ಯಾಧ್ಯಕ್ಷ ವಿಷ್ಣು ಬೋಯಪಾಟಿ, ಮುಖಂಡರುಗಳಾದ ಬೆಣಕಲ್ ಬಸವರಾಜ, ಅಲಿವೇಲು ಸುರೇಶ, ವಿಶ್ವ, ಕಾರ್ತಿಕ್, ಚಾನಾಳ್ ಶೇಖರ್, ಮಿಂಚು ಶ್ರೀನಿವಾಸ್, ಪ್ರಭಂಜನಕುಮಾರ್, ವೆಂಕಟೇಶ್ ಪ್ರಸಾದ್, ಪಿ.ಜಗನ್, ಶಿವರಾಜ್, ಮುಂಡ್ರಿಗಿ ನಾಗರಾಜ್, ಬಾಪೂಜಿ ನಗರ ವೆಂಕಟೇಶ್, ಸತೀಶ್ ರೆಡ್ಡಿ, ವಿ.ಕುಬೇರಾ, ರಾಮಾಂಜನೇಯ, ಸಿದ್ದೇಶ್, ಸಿದ್ದು ಹಳ್ಳೇಗೌಡ ಸೇರಿದಂತೆ ಹಲವರು ಹಾಜರಿದ್ದರು.
ಸನ್ಮಾನ: ಶಾಸಕ ನಾರಾ ಭರತ್ ರೆಡ್ಡಿ ಅವರಿಗೆ ವಿವಿಧ ನಾಯಕರು ಸನ್ಮಾನ ಮಾಡಿರುವ ತದನಂತರ ಕೇಕ್ ಕತ್ತರಿಸಲಾಯಿತು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅವಳಿ ಜಿಲ್ಲೆಗಳ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್, ಸತೀಶ್ ರೆಡ್ಡಿ, ಶ್ರೀನಿವಾಸ್ ರೆಡ್ಡಿ ಹಾಗೂ ಸ್ನೇಹಿತರು ಶಾಸಕ ಭರತ್ ರೆಡ್ಡಿ ಅವರಿಗೆ ಬೆಳ್ಳಿಯ ಖಡ್ಗವನ್ನು ಕಾಣಿಕೆಯಾಗಿ ನೀಡಿದರು. ಖಡ್ಗ ಸ್ವೀಕರಿಸಿದ ಶಾಸಕ ನಾರಾ ಭರತ್ ರೆಡ್ಡಿ ಖಡ್ಗವನ್ನು ಎತ್ತಿ ಜನರಿಗೆ ತೋರಿಸಿದಾಗ ಜನರು ಅಭಿಮಾನದಿಂದ ಜೈಕಾರ ಹಾಕಿದರು.
ಇದೇ ವೇಳೆ ಮಹಾನಗರ ಪಾಲಿಕೆಯ 35ನೇ ವಾರ್ಡ್ ಸದಸ್ಯ ಮಿಂಚು ಶ್ರೀನಿವಾಸ್ ಅವರು ಶಾಸಕ ನಾರಾ ಭರತ್ ರೆಡ್ಡಿ ಅವರಿಗೆ ಸನ್ಮಾನಿಸಿ, ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ರಾಹುಲ್ ಗಾಂಧಿಯವರ ರಾಜಕೀಯ ಜೀವನದ ಕುರಿತು ಬರೆದಿರುವ, ಇತ್ತೀಚೆಗಷ್ಟೇ ಬಿಡುಗಡೆಗೊಂಡ ಸ್ಟ್ರೇಂಜ್ ಬರ್ಡನ್ಸ್ ಎಂಬ ಪುಸ್ತಕವನ್ನು ಕಾಣಿಕೆಯಾಗಿ ನೀಡಿದರು. ಪುಸ್ತಕವನ್ನು ಎರಡು ಕೈಗಳಲ್ಲಿ ಎತ್ತಿ ಹಿಡಿದು ನೆರೆದಿದ್ದ ಜನರಿಗೆ ತೋರಿಸಿದರು.

ಶ್ರೀರಾಂಪುರ ಕಾಲೋನಿಯಲ್ಲಿ ಆಚರಣೆ
ಬಳ್ಳಾರಿ ನಗರದ ಶ್ರೀರಾಂಪುರ ಕಾಲೋನಿಯಲ್ಲಿ ಕೂಡ ಶಾಸಕ ನಾರಾ ಭರತ್ ರೆಡ್ಡಿ ಅವರ ಜನ್ಮ ದಿನಾಚರಣೆಯನ್ನು ಏರ್ಪಡಿಸಲಾಗಿತ್ತು.
ಈ ವೇಳೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ನಾರಾ ಭರತ್ ರೆಡ್ಡಿ, ಕಳೆದ ಚುನಾವಣೆಯಲ್ಲಿ ನನ್ನ ಜೊತೆ ಸೈನ್ಯದ ಹಾಗೆ ಶ್ರೀರಾಂಪುರ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶದ, ವಾರ್ಡ್ ಗಳ ಮತದಾರರು ನನ್ನ ಬೆನ್ನಿಗೆ ನಿಂತರು ಎಂದು ಹೇಳಿದರು.
ನನ್ನ ಚುನಾವಣೆಯಲ್ಲಿ ನನ್ನ ಬೆನ್ನಿಗೆ ಚೂರಿ ಹಾಕಿದವರಿಗೆ ನನ್ನ ಮತದಾರರು ನೀವು ಆ ನಾಯಕರನ್ನು ಬೆಳಿಗ್ಗೆ ಕಸಗುಡಿಸುವ ಹಾಗೆ ಕಸ ಗುಡಿಸಿ ಒದ್ದು ಹೊರಗೆ ಹಾಕಿದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನ ಜನ್ಮ ದಿನ ಶ್ರೀರಾಂಪುರ ಕಾಲೋನಿಯಲ್ಲಿ ಮಾಡಿಕೊಳ್ಳುವ ಬಗ್ಗೆ ಕೆಲವರು ತಕರಾರು ತೆಗೆದರು ಆದರೆ, ನಾನು ಯಾರ ಮಾತಿಗೂ ಬಗ್ಗದೇ ಇಲ್ಲಿ ಜನ್ಮ ದಿನ ಆಚರಿಸುತ್ತಿರುವೆ, ನಾನು ಮೃತನಾದರೆ ನನ್ನನ್ನು ಶ್ರೀರಾಂಪುರ ಕಾಲೋನಿಯಲ್ಲಿ ಹೂಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿಮ್ಮ ಆಶೀರ್ವಾದದಿಂದ ನಾನು ಇಂದು ಶಾಸಕನಾದೆ, ನಿಮ್ಮ ಋಣ ತೀರಿಸಲಾಗದು, ನನ್ನ ಮತದಾರರು ನನ್ನ ತಾಯಿಯಿದ್ದಂತೆ, ನಾನು ನಿಮಗೆ ಮೋಸ ಮಾಡಿದರೆ ತಾಯಿಗೆ ಮೋಸ ಮಾಡಿದಂತೆ ಎಂದು ಹೇಳಿದರು.
ಇಂದು ಶ್ರೀರಾಂಪುರ ಕಾಲೋನಿಯ ಜನರು, ಅಕ್ಕ ತಂಗಿಯರು ತಮ್ಮ ಸ್ವಂತ ಸಹೋದರನನ್ನು ಕಾದಂತೆ ಕಾದು ನನ್ನನ್ನು ಸ್ವಾಗತಿಸಿದ್ದೀರಿ, ನಿಮ್ಮ ಋಣ ತೀರಿಸಿಯೇ ಸಾಯುವೆ ಎಂದು ಭರತ್ ರೆಡ್ಡಿ ಹೇಳಿದರು.

ಶ್ರೀರಾಂಪುರ ಕಾಲೋನಿಯಲ್ಲಿ ವಿವಿಧ ವಾರ್ಡ್ ಗಳ ಪಾಲಿಕೆ ಸದಸ್ಯರು, ಮುಖಂಡರು ಶಾಸಕ ಭರತ್ ರೆಡ್ಡಿ ಅವರನ್ನು ಸನ್ಮಾನಿಸಿದರು. ಡಿಸಿಸಿ ಕಾರ್ಯಾಧ್ಯಕ್ಷ ವಿಷ್ಣು ಬೋಯಪಾಟಿ, ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ, ಬಿಆರ್ ಎಲ್ ಸೀನಾ, ಪಾಲಿಕೆ ಸದಸ್ಯರಾದ ಮುಲ್ಲಂಗಿ ನಂದೀಶ್, ನೂರ್ ಅಹ್ಮದ್, ಪೇರಂ ವಿವೇಕ್, ಅಭಿ, ಮಿಂಚು ಶ್ರೀನಿವಾಸ್, ಅರುಣ್ ಕುಮಾರ್, ಚಾನಾಳ್ ಶೇಖರ್, ಸತೀಶ್ ರೆಡ್ಡಿ, ಟಿಲ್ಲು, ಬೆಣಕಲ್ ರಘು, ಅರ್ಷದ್, ನಾಗರಾಜ, ಬಾಲರಾಜು, ಜೆಡಿಎಸ್ ನಾಗರಾಜ್ ಸೇರಿದಂತೆ ಹಲವರು ಹಾಜರಿದ್ದರು.