ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣ, ಮೂಡ ಹಗರಣ ಮತ್ತು ಎಸ್ಸಿ, ಎಸ್ಟಿಗಳಿಗೆ ಮೀಸಲಿಟ್ಟ ಹಣವನ್ನು ಬೇರೆ ಉದ್ದೇಶಕ್ಕೆ ಬಳಸಿದ ಪ್ರಕರಣದಲ್ಲಿ ತಪ್ಪಿತಸ್ಥರು ಮುಖ್ಯಮಂತ್ರಿಯೇ ಇರಲಿ; ಅಥವಾ ಯಾರೇ ಇರಲಿ. ಅವರಿಗೆ ಸರಿಯಾದ ಶಿಕ್ಷೆ ಆಗಲೇಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ಪರಿಶಿಷ್ಟರ ಸಮುದಾಯಕ್ಕೆ ಮೀಸಲಿಟ್ಟ ಒಂದು ರೂಪಾಯಿ ಲೂಟಿ ಮಾಡಲೂ ಹಿಂದೆ ಮುಂದೆ ನೋಡುತ್ತಾರೆ. ಇವರಿಗೆ ಶಿಕ್ಷೆ ಲಭಿಸಿದಾಗ ಬುದ್ಧಿ ಬರಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ, ಮುಖಂಡರ ಜೊತೆ ಇಂದು ಮಾತುಕತೆ ನಡೆಸುವ ವೇಳೆ ಅವರು ಈ ಮಾಹಿತಿ ಕೊಟ್ಟರು. ನಾಡಿನ ದೀನದಲಿತರು, ಪರಿಶಿಷ್ಟ ಜಾತಿ, ಪಂಗಡಗಳಿಗೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅನ್ಯಾಯ ಮಾಡಿದೆ. ಅವರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದ್ದಾರೆ. ಅಂಥ ಸಮುದಾಯಗಳಿಗೆ ಹಣವನ್ನು ವಾಪಸ್ ತರಬೇಕು. ಅವರ ಅಭಿವೃದ್ಧಿಗಾಗಿಯೇ ಹಣ ಬಳಕೆ ಆಗಬೇಕು ಎಂಬ ಉದ್ದೇಶ ತಮ್ಮದು ಎಂದರು.
ರಾಜ್ಯದ ಬಿಜೆಪಿ ಅಧ್ಯಕ್ಷನಾಗಿ ಪರಿಶಿಷ್ಟ ಸಮುದಾಯಗಳಿಗೆ ನ್ಯಾಯ ದೊರಕಿಸಿಕೊಡಲು ಈ ಹೋರಾಟ ಕೈಗೆತ್ತಿಕೊಂಡಿದ್ದೇವೆ. ನಿಮ್ಮ ಧ್ವನಿಯಾಗಿ ನಾವು ಇವತ್ತು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ದಲಿತ ಸಮುದಾಯ, ದಲಿತ ಸಂಘಟನೆಗಳು ಧ್ವನಿ ಎತ್ತದೆ ಇರುವ ಕಾರಣ ಅನಿವಾರ್ಯವಾಗಿ ನಾವು ಹೋರಾಟಕ್ಕೆ ಇಳಿದಿದ್ದೇವೆ. ದಲಿತ ಸಮುದಾಯದಲ್ಲಿ ಮುಗ್ಧರಿದ್ದಾರೆ. ಅವರಿಗೆ ಅನ್ಯಾಯ ಆಗಬಾರದು. ವಿಪಕ್ಷವಾಗಿ ಬಿಜೆಪಿ- ಜೆಡಿಎಸ್ ಹೋರಾಟಕ್ಕೆ ಇಳಿಯದೆ ಇದ್ದಲ್ಲಿ ದೇವರು ಮೆಚ್ಚುವುದಿಲ್ಲ ಎಂಬ ಉದ್ದೇಶದಿಂದ ಹೋರಾಟವನ್ನು ಕೈಗೆತ್ತಿಕೊಂಡಿದ್ದಾಗಿ ವಿವರಿಸಿದರು.
ನಮ್ಮ ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ಇರಬೇಕು. ಇದೇ 10ರಂದು ಬೆಳಿಗ್ಗೆ 10.30ಕ್ಕೆ ಮೈಸೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತೇವೆ. ರಾಜ್ಯದ ಮೂಲೆಮೂಲೆಗಳಿಂದ ಜನರು ಬರಲಿದ್ದಾರೆ. ಆ ದಿನ ಪರಿಶಿಷ್ಟ ಸಮುದಾಯಗಳ ಪ್ರತಿನಿಧಿಗಳು, ಸಂಘ, ಸಂಸ್ಥೆಗಳು ದೊಡ್ಡ ಸಂಖ್ಯೆಯಲ್ಲಿ ಬಂದು ಹೋರಾಟಕ್ಕೆ ಬೆಂಬಲ ಕೊಡಬೇಕು. ನಮಗೆ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು.
ದಲಿತ ಸಮುದಾಯಗಳ ಪರವಾಗಿ ದೇವರು ಮೆಚ್ಚುವಂತೆ ಇಂದು ಮತ್ತು ಭವಿಷ್ಯದಲ್ಲೂ ಧ್ವನಿ ಎತ್ತುತ್ತೇವೆ ಎಂದು ಅವರು ಪ್ರಕಟಿಸಿದರು. ನಿಮ್ಮ ಜೊತೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತೇವೆ ಎಂದು ಭರವಸೆ ನೀಡಿದರು.
ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿನಾರಾಯಣಸ್ವಾಮಿ, ಮಾಜಿ ಸಚಿವ ಕೊಳ್ಳೇಗಾಲ ಮಹೇಶ್, ಪಕ್ಷದ ಪ್ರಮುಖರು, ದಲಿತ ಸಂಘಟನೆಗಳ ಪ್ರಮುಖರು ಈ ಸಭೆಯಲ್ಲಿ ಭಾಗವಹಿಸಿದ್ದರು.