ಈಶ್ವರ ಖಂಡ್ರೆ ಕ್ರಿಯಾಶೀಲ ಮಂತ್ರಿ: ಸಿದ್ದರಾಮಯ್ಯ

ಮೈಸೂರು: ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಕ್ರಿಯಾಶೀಲ ಸಚಿವರಾಗಿದ್ದು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಶ್ಲಾಘಿಸಿದ್ದಾರೆ.

          ಮೈಸೂರಿನ ಪೊಲೀಸ್ ಅಕಾಡೆಮಿ ಸಭಾಂಗಣದಲ್ಲಿ ಇಂದು ನಡೆದ 69ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ಅರಣ್ಯ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡುತ್ತಿರುವ ಸಚಿವರು ಇಲಾಖೆಯನ್ನು ಸರಿದಾರಿಯಲ್ಲಿ ನಡೆಸುತ್ತಿದ್ದಾರೆ ಎಂದು ಬಹಿರಂಗವಾಗಿ ಮುಕ್ತ ಕಂಠದಿಂದ ಪ್ರಶಂಸಿಸಿದರು.

          ಅರಣ್ಯ ಇಲಾಖೆಯಲ್ಲಿರುವವರಿಗೆ ಅರಣ್ಯ ಬೆಳೆಸಬೇಕು ಎಂಬ ಕಾಳಜಿ ಇದ್ದರೆ, ಅಧಿಕಾರಿಗಳು ಎಲ್ಲ ಕೆಳ ಹಂತದ ಸಿಬ್ಬಂದಿಯನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದರೆ ಖಂಡಿತಾ ಅರಣ್ಯ ಪ್ರದೇಶ ಹೆಚ್ಚಿಸಬಹುದು ಎಂದರು.

 

          ಮಾನವ ಮತ್ತು ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದು ಇದನ್ನು ನಿಗ್ರಹಿಸಲು ಅರಣ್ಯದೊಳಗೆ ವನ್ಯಜೀವಿಗಳಿಗೆ ಅದರಲ್ಲೂ ಆನೆಗಳಿಗೆ ಸೂಕ್ತ ಆಹಾರ ಮತ್ತು ನೀರು ದೊರಕುವಂತೆ ಕ್ರಮ ಕೈಗೊಳ್ಳಲು ಸಲಹೆ ನೀಡಿದ ಅವರು ಸರ್ಕಾರ ಅಗತ್ಯ ಬೆಂಬಲ ನೀಡಲಿದೆ ಎಂಬ ಭರವಸೆ ನೀಡಿದರು.

ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಸರಿಯಾದ ಕ್ರಮ:

          ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರ ಎಂದು ಮೈಸೂರನ್ನು ಘೋಷಿಸಿರುವುದು ಸರಿಯಾದ ಕ್ರಮ. ಅದನ್ನು ಮಾಡಲೇಬೇಕು. ಪ್ಲಾಸ್ಟಿಕ್ ನಿಂದ ಪರಿಸರ ಹಾಳಾಗುತ್ತಿದೆ. ಇದರಿಂದ ಮಾನವರು ಮತ್ತು ಪಶು, ಪಕ್ಷಿಗಳ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದೆ. ಹೀಗಾಗಿ  ಏಕ ಬಳಕೆ ಪ್ಲಾಸ್ಟಿಕ್ ತ್ಯಜಿಸಿ ಪರ್ಯಾಯ ವಸ್ತು ಬಳಸಬೇಕು ಎಂದರು.

 

          ಮೈಸೂರು ಪ್ರವಾಸೋದ್ಯಮ ಕ್ಷೇತ್ರ. ಹೀಗಾಗಿ ಮೈಸೂರು  ನಗರವನ್ನು ಪ್ಲಾಸ್ಟಿಕ್ ಮುಕ್ತ ಮಾಡುವುದು ಅತ್ಯಂತ ಅವಶ್ಯ. ಹೀಗಾಗಿ ಮೈಸೂರು ಮತ್ತು ಸುತ್ತಮುತ್ತಲಿನ ಜನರು ಈ ನಿಟ್ಟಿನಲ್ಲಿ ಸಹಕಾರ ಮಾಡಬೇಕು ಎಂದು ಕರೆ ನೀಡಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top