ಪರಿಸರ ಹೋರಾಟ ಅಭಿವೃದ್ಧಿಯ ಪಥ ತಪ್ಪಿಸದಿರಲಿ – ಜಗದೀಶ್ ಶೆಟ್ಟರ್

ಉಡುಪಿ : ರಾಜ್ಯದ ಎಲ್ಲಾ ಜಿಲ್ಲೆಗಳು ಸಮಗ್ರವಾಗಿ ಅಭಿವೃದ್ಧಿಯಾಗಬೇಕಾಗಿದೆ , ಇಂತಹ ಸಂದರ್ಭದಲ್ಲಿ ಪರಿಸರ ಹೋರಾಟ ಅಭಿವೃದ್ಧಿಯ ಪಥ ತಪ್ಪಿಸುವಂತಾಗಬಾರದು , ನಮ್ಮಲ್ಲಿ ಅಭಿವೃದ್ಧಿಯ ಪರ ಚಿಂತನೆ ಇರಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರು ಹೇಳಿದರು. ಉಡುಪಿಯಲ್ಲಿ ಶನಿವಾರದಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯು ಆಯೋಜಿಸಿದ್ದ ಮಾಲಿನ್ಯ ನಿಯಂತ್ರಿತ ಕೈಗಾರೀಕರಣ ಹಾಗೂ ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಜಗದೀಶ್ ಶೆಟ್ಟರ್ ಅವರು ಮಾತನಾಡಿದರು. ಹುಬ್ಬಳ್ಳಿ ಅಂಕೋಲ ರೈಲು ಮಾರ್ಗ ಅಭಿವೃದ್ಧಿಯಾಗಬೇಕಾಗಿದೆ , ಬೇಲಿಕೇರಿ ಬಂದರು ಅಭಿವೃದ್ಧಿ ಬಗ್ಗೆ ಕೂಡ ಕ್ರಮ ಆಗಬೇಕಾಗಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಚಿವ ಹಾಗೂ ಶಾಸಕ   ಆರ್.ವಿ.ದೇಶಪಾಂಡೆ ಅವರು ಮಾತನಾಡಿ ಮಾತನಾಡಿ, ಸರಕಾರ ವ್ಯಾಪಾರ , ವ್ಯವಹಾರ , ಉದ್ದಿಮೆ ನಡೆಸಬಾರದು , ಅವುಗಳಲ್ಲಿ  ಖಾಸಗಿ ಅವರಿಗೆ ಮುಕ್ತ ಅವಕಾಶ ಕೊಡಬೇಕು , ಸರಕಾರದ್ದು ಪ್ರಜಾ ಕಲ್ಯಾಣ ಕೆಲಸದ ಉದ್ದೇಶ ಮಾತ್ರ ಇರಬೇಕು ಎಂದು ಹೇಳಿದರು.  

ಅಭಿವೃದ್ಧಿಯ ಸಂದರ್ಭದಲ್ಲಿ ಯಾವುದೇ ಸಂಘಟನೆಯವರು ವಿರೋಧಕ್ಕಾಗಿ ವಿರೋಧ ಮಾಡಬಾರದು ಎಂದರು. ಸಣ್ಣ ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಸರಕಾರ ಉತ್ತೇಜನ ನೀಡಬೇಕೆಂದು ಅವರು ಮನವಿ ಮಾಡಿದರು. ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್  ಅವರು ಮಾತನಾಡಿ , ಅಭಿವೃದ್ಧಿ ಸಂದರ್ಭದಲ್ಲಿ ಪರಿಸರ ಕಾಳಜಿ ವಹಿಸಬೇಕು, ಯಾವುದೇ ಅಭಿವೃದ್ಧಿಯು ಜನರ ಬದುಕಿಗೆ ಹಾನಿ ತರಬಾರದು ಹಾಗೂ ಪರಿಸರಕ್ಕೂ ಹಾನಿ ಎಸಗಬಾರದು ಎಂದು ಖಾದರ್ ಅವರು ಹೇಳಿದರು.  ಈ ಭೂಮಿ ನಮಗೆ ಹಾಗೂ ನಮ್ಮ ಮಕ್ಕಳಿಗೆ ಮಾತ್ರವಲ್ಲ ಇನ್ನೂ ಮುಂದಿನ ಪೀಳಿಗೆಗೂ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಯು.ಟಿ.ಖಾದರ್ ಹೇಳಿದರು .

 

ಜಯಶ್ರೀಕೃಷ್ಣ ಪರಿಸರ ಸಮಿತಿಯವರು ಕರಾವಳಿ ಹಾಗೂ ರಾಜ್ಯದ ಅಭಿವೃದ್ಧಿ ಹಿನ್ನೆಲೆಯಲ್ಲಿ ನೀಡಿದ ನೀಲನಕ್ಷೆಯ ವರದಿಯನ್ನು ಸರಕಾರದ ಮಟ್ಟದಲ್ಲಿ ತಜ್ಞರ ಸಮಿತಿಯ ಮೂಲಕ ಚರ್ಚೆ ನಡೆಸಲಾಗುವುದು ಎಂದು ಖಾದರ್ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾಜಿ ಸಚಿವ ನಾಗರಾಜ ಶೆಟ್ಟಿ , ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿದರು . ಜಯಶ್ರೀಕೃಷ್ಣ ಪರಿಸರ ಸಮಿತಿಯ ಸ್ಥಾಪಕ ಅಧ್ಯಕ್ಷ ತೋನ್ಸೆ ಜಯಕೃಷ್ಣ ಶೆಟ್ಟಿ  ಪ್ರಸ್ತಾವಿಕವಾಗಿ ಮಾತನಾಡಿದರು .  ಸಮಿತಿಯ ಅಧ್ಯಕ್ಷ ಎಲ್.ವಿ.ಅಮೀನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಉಡುಪಿ‌ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ , ಜಿಲ್ಲಾ ಬಿಜೆಪಿ ಅಧ್ಯಕ್ಷ ಕೊಯಿಲಾಡಿ ಸುರೇಶ್ ನಾಯಕ್, ಸಮಿತಿಯ ಗೌರವ ಅಧ್ಯಕ್ಷ ಮುಂಡ್ಕೂರ್ ಸುರೇಂದ್ರ ಸಾಲ್ಯಾನ್ , ಉಪಾಧ್ಯಕ್ಷರಾದ ಜಗದೀಶ್ ಅಧಿಕಾರಿ, ರಾಮಚಂದ್ರ ಬೈಕಂಪಾಡಿ , ಕೋಶಾಧಿಕಾರಿ ತುಳಸಿದಾಸ್ ಅಮೀನ್  ಉಪಸ್ಥಿತರಿದ್ದರು. ಸಮಿತಿಯ ಉಪಾಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಸ್ವಾಗತಿಸಿದರು, ಮಾಧ್ಯಮ ವಕ್ತಾರ ದಯಾಸಾಗರ ಚೌಟ ಕಾರ್ಯಕ್ರಮ ನಿರ್ವಹಿಸಿದರು , ಸುರೇಂದ್ರ ಮೆಂಡನ್ ವಂದಿಸಿದರು.

Facebook
Twitter
LinkedIn
WhatsApp
Telegram
Tumblr
Email

Leave a Comment

Your email address will not be published. Required fields are marked *

Translate »
Scroll to Top