ಪರಿಸರ ಸಂರಕ್ಷಣೆಯು ಸರ್ವರ ನಿತ್ಯದ ಹೊಣೆಗಾರಿಕೆಯಾಗಬೇಕು

ದೇವನಹಳ್ಳಿ: ಪರಿಸರ ಸಂರಕ್ಷಣೆಯನ್ನು ಎಲ್ಲರೂ ತಮ್ಮ ಹೊಣೆಗಾರಿಕೆ ಎಂದು ಭಾವಿಸಿ ಸಸಿಗಳನ್ನು ನೆಟ್ಟು ಪೋಷಿಸಬೇಕು. ಪರಿಸರವನ್ನು ಸ್ವಚ್ಚವಾಗಿರಿಸಿಕೊಳ್ಳಬೇಕು. ಸುತ್ತಮುತ್ತಲೂ ನೈರ್ಮಲ್ಯ ಕಾಪಾಡಲು ಮುಂದಾಗಬೇಕು. ಆಧುನಿಕ ವ್ಯಾಮೋಹದಿಂದ ಪರಿಸರದ ಸಂರಕ್ಷಣೆಗಿಂತ ಸ್ವಾರ್ಥಕ್ಕಾಗಿ ನಾಶ ಮಾಡುವುದೇ ಹೆಚ್ಚಾಗಿದ್ದು, ಪ್ಲಾಸ್ಟಿಕ್ ಮುಕ್ತವಾಗಿಸಲು ಯುವಪೀಳಿಗೆ ಪಣತೊಡಬೇಕು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಅಭಿಯಂತರ ಎನ್.ದಿನೇಶ್ ತಿಳಿಸಿದರು. ಸಮೀಪದ ಸುಗಟೂರು ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸುಂದರಲಾಲ್ ಬಹುಗುಣ ಇಕೋಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮ, ವಿಶ್ವ ಕೈ ತೊಳೆಯುವ ದಿನಾಚರಣೆ, ಪ್ಲಾಸ್ಟಿಕ್ ವರ್ಜನೆ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ,
ಸಸ್ಯಗಳು ಅಂತರ್‌ ಜಲ ಹೆಚ್ಚಿಸುವ ಎಟಿಎಂಗಳಿದ್ದಂತೆ. ನೀರನ್ನು ಇಂಗಿಸಿ ಅಂತರ್ಜಲ ಮಟ್ಟವನ್ನು ಕಾಯ್ದಿರಿಸಿಕೊಳ್ಳಬಲ್ಲವು. ಪರಿಸರದ ಘಟಕಗಳಾದ ನೀರು, ಮಣ್ಣು, ಗಾಳಿಯನ್ನು ಮುಂದಿನ ಪೀಳಿಗೆಗೆ ಯಥಾವತ್ತಾಗಿ ಉಳಿಸುವ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ ಎಂದರು.

ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಪೂರ್ವಜರಿಗೆ ತಾಂತ್ರಿಕತೆಯ ಅರಿವಿಲ್ಲದ್ದರಿಂದ ಪರಿಸರ ಸಂರಕ್ಷಣೆಯ ಜ್ಞಾನಹೊಂದಿದ್ದರು. ಬುದ್ದಿವಂತರಾದಂತೆಲ್ಲಾ ಪರಿಸರದ ಮೇಲಿನ ದಬ್ಬಾಳಿಕೆ ಹೆಚ್ಚಾಗಿದೆ. ಪರಿಸರವನ್ನು ದೇವರ ರೂಪದಲ್ಲಿ ನೋಡುತ್ತಿದ್ದ ಹಿರಿಯರ ಗುಣವು ಅನುಕರಣೀಯವಾದುದು. ಆಹಾರ ಸೇವನೆಯಲ್ಲಿ ಶುಚಿತ್ವ, ಶುಭ್ರತೆ, ಪೌಷ್ಟಿಕತೆಗೆ ಮಹತ್ವದ ಸ್ಥಾನವಿದೆ ಎಂದರು. ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ ದೇವರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು. ಪರ್ಯಾಯವಾಗಿ ಬಟ್ಟೆ, ಕಾಗದ, ಅಡಿಕೆಪಟ್ಟೆಯಂತಹ ಕೊಳೆಯುವ ವಸ್ತುಗಳಿಂದ ಮಾಡಿದ ವಸ್ತುಗಳನ್ನು ಬಳಸಲು ಮುಂದಾಗಬೇಕು. ಪರಿಸರದ ಕಾಳಜಿ ಪ್ರತಿ ಮನೆಯಿಂದಲೂ ಆರಂಭವಾಗಬೇಕು ಎಂದರು.

ಎಸ್‌ ಡಿಎಂಸಿ ಅಧ್ಯಕ್ಷ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಪಂಚಾಯಿತಿ ಸದಸ್ಯ ಎ.ಸತೀಶ್‌ ಕುಮಾರ್, ಶಿವಶಂಕರಪ್ಪ, ಎಂ.ನಾಗರಾಜು, ಮಾಜಿ ಸದಸ್ಯ ಎನ್.ಅಶ್ವತ್ಥಪ್ಪ, ದೇವರಾಜು, ಎಸ್‌ ಡಿಎಂಸಿ ಸದಸ್ಯೆ ರತ್ನಮ್ಮ, ನಂದಿನಿ, ಗ್ರಾಮಸ್ಥರಾದ ದೊಡ್ಡಮುನಿವೆಂಕಟಶೆಟ್ಟಿ, ಜಯರಾಮಪ್ಪ, ಚಿಕ್ಕಮುನಿವೆಂಕಟಶೆಟ್ಟಿ, ಬಚ್ಚೇಗೌಡ, ಶ್ರೀನಿವಾಸ್, ಪುರುಷೋತ್ತಮ್, ಸುಬ್ರಮಣಿ, ಮತ್ತಿತರರು ಇದ್ದರು.ಕೈತೊಳೆಯುವ ವಿಧಾನ ಮತ್ತು ಹಂತಗಳ ಕುರಿತು ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. ಶಾಲಾ ಆವರಣದಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.

Leave a Comment

Your email address will not be published. Required fields are marked *

Translate »
Scroll to Top