ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಜಾರಿ

Kannada Nadu
ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸುಗ್ರೀವಾಜ್ಞೆ ಜಾರಿ

ಬೆಂಗಳೂರು: ಬಲವಂತವಾಗಿ ಸಾಲದ ಮೇಲಿನ ಬಡ್ಡಿ ವಸೂಲಿ ಮಾಡುವ ವ್ಯಕ್ತಿಗಳಿಗೆ 10 ವರ್ಷ ಕಾರಾಗೃಹ ಸೆರೆವಾಸ ಹಾಗೂ 5 ಲಕ್ಷ ರೂವೆರೆಗೂ ದಂಡ ವಿಧಿಸಲು ಹೊಸ ಕಾನೂನಿನಲ್ಲಿ ಅವಕಾಶ ಮಾಡಿಕೊಡಲಾಗಿದೆ.

ಮೈಕ್ರೊ ಫೈನಾನ್ಸ್ ಸಂಸ್ಥೆಗಳು ಮತ್ತು ಇತರೆ ಸಾಲ ನೀಡಿಕೆ ಏಜೆನ್ಸಿಗಳು ಅಥವಾ ಲೇವಾದೇವಿಗಾರರು ವಿಧಿಸುವ ಹೆಚ್ಚಿನ ಬಡ್ಡಿ ದರಗಳಿಂದ ಸಾಲ ಪಡೆದವರಿಗೆ ಆಗುವ ಹೊರೆ ಮತ್ತು ಬಲವಂತದ ವಸೂಲಾತಿ ತಪ್ಪಿಸಲು ರಾಜ್ಯಪಾಲರ ಅಂಕಿತದೊಂದಿಗೆ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ಞೆಯಲ್ಲಿ ಈ ಅಂಶಗಳು ಒಳಗೊಂಡಿವೆ.ಇಂತಹ ಅಪರಾಧ ಎಸಗುವರಿಗೆ ಜಾಮೀನು ಇರುವುದಿಲ್ಲ, ಯಾವುದೇ ಪೋಲಿಸ್ ಅಧಿಕಾರಿ ಇಂತಹ ಪ್ರಕರಣಗಳನ್ನು ನೋಂದಣಿ ಮಾಡಿಕೊಳ್ಳಲು ನಿರಾಕರಿಸುವಂತಿಲ್ಲ.

ಸಂಕಷ್ಟಕ್ಕೊಳಗಾದ ವ್ಯಕ್ತಿ ನೀಡದಿದ್ದರೆ, ಡಿವೈಎಸ್‌ಪಿ ಹಾಗೂ ಮೇಲಿನ ಅಧಿಕಾರಿಗಳು ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ.ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಮಾತ್ರ ಈ ಆಧ್ಯಾದೇಶ ಅನ್ವಯವಾಗುತ್ತದೆ.

ಈ ಸುಗ್ರೀವಾಜ್ಞೆಯಿಂದ ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೋಂದಾಯಿತವಲ್ಲದ ಮೈಕ್ರೊ ಫೈನಾನ್ಸ್ ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು ಹೆಚ್ಚುತ್ತದೆ ಮತ್ತು ಸಾಲ ಪಡೆದವರಿಗೆ ಕಿರುಕುಳ, ಬಲವಂತದ ವಸೂಲಿ ಕ್ರಮಗಳಿಂದ ಮುಕ್ತಿ ದೊರೆಯುತ್ತದೆ.ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪತ್ರಿಕಾ ಹೇಳಿಕೆ ನೀಡಿ, ಸುಗ್ರೀವಾಜ್ಞೆಯಲ್ಲಿರುವ ಪ್ರಮುಖ ಅಂಶಗಳನ್ನು ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಿದ್ದಾರೆ.

ಕರ್ನಾಟಕ ಕಿರು (ಮೈಕ್ರೊ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಆಧ್ಯಾದೇಶ-2025 ಫೆಬ್ರವರಿ 12 ರಿಂದಲೇ ಜಾರಿಗೆ ಬಂದಿದೆ. ಇದರಿಂದ ವಿಶೇಷವಾಗಿ ದುರ್ಬಲರು, ಮಹಿಳೆಯರು ಮತ್ತು ರೈತರು, ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಮರುಪಾವತಿ ವಿಷಯದಲ್ಲಿ ಕಿರುಕುಳ ತಪ್ಪಿಸಲು ಸಹಾಯಕವಾಗಿರುತ್ತದೆ.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ನೀಡುವ ವೇಳೆ ಯಾವುದೇ ಭದ್ರತೆ ಪಡೆಯುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಗ್ರಾಹಕರಿಗೆ ವಿಧಿಸುವ ಬಡ್ಡಿ ದರದ ಬಗ್ಗೆ ಪಾರದರ್ಶಕವಾಗಿ ಸಾಲಗಾರರಿಗೆ ಲಿಖಿತ ರೂಪದಲ್ಲಿ ತಿಳಿಸುವಂತೆ ಆದೇಶಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೋಂದಾಯಿತ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಅಂದಾಜು 60,000 ಕೋಟಿ ರೂ. ಸಾಲವನ್ನು ಸುಮಾರು 1.09 ಕೋಟಿ ಸಾಲಗಾರರು ಪಡೆದಿದ್ದು, ನೋಂದಣಿಯಾಗದ ಸಂಸ್ಥೆಗಳಿಂದ ಸಾಲ ಪಡೆದವರ ಪೂರ್ಣ ವಿವರವಾಗಿ ಇಲ್ಲವಾದರೂ, ಅಂದಾಜು 40,000 ಕೋಟಿ ರೂ.ವರೆಗೆ ಸಾಲ ಪಡೆದಿರಬಹುದು ಎಂದು ಅಂದಾಜಿಸಲಾಗಿದೆ.

ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆಯಾ ಜಿಲ್ಲಾಧಿಕಾರಿಗಳಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ, ಸದರಿ ಸಂಸ್ಥೆಗಳು ತಾವು ವಿಧಿಸುವ ಬಡ್ಡಿ ದರ, ಸಾಲಗಾರರ ಮಾಹಿತಿ, ಸುಸ್ಥಿ ಸಾಲಗಳ ವಿವರ ಮುಂತಾದವುಗಳನ್ನು ಜಿಲ್ಲಾಧಿಕಾರಿಗೆ ನೀಡಬೇಕಾಗಿರುತ್ತದೆ.ಜಿಲ್ಲಾಧಿಕಾರಿಗಳಿಗೆ ತ್ರೈಮಾಸಿಕ ಮತ್ತು ವಾರ್ಷಿಕ ವ್ಯವಹಾರದ ವಿವರಗಳನ್ನು ಈ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಲ್ಲಿಸಬೇಕು, ಮಾಹಿತಿ ಸಲ್ಲಿಸದಿದ್ದಲ್ಲಿ, 6 ತಿಂಗಳ ಕಾರಾಗೃಹ ವಾಸ ಅಥವಾ 10,000 ರೂ.ಗಳವರೆಗೆ ವಿಸ್ತರಿಸಬಹುದಾದ ದಂಡ (ಜುಲ್ಮಾನೆ) ಅಥವಾ ಅವೆರಡರಿಂದಲೂ ದಂಡಿತರಾಗುತ್ತಾರೆ.

ಸಾಲ ವಿವಾದಗಳ ಇತ್ಯರ್ಥ್ಯಕ್ಕೆ ಒಂಬುಡ್ಸ್‌ಮನ್‌ಗಳನ್ನು ಅಧಿಸೂಚನೆ ಮೂಲಕ ಸರ್ಕಾರ ನೇಮಕ ಮಾಡಬಹುದಾಗಿದೆ. ಈ ಅಪರಾಧಗಳು ಸಂಜ್ಞೇಯ ಹಾಗೂ ಜಾಮೀನುರಹಿತ ಅಪರಾಧ (ಕಾಗ್ನೆಸೆಬಲ್ ಮತ್ತು ನಾನ್‌ಬೇಲೆಬಲ್) ಆಗಿರುತ್ತವೆ, ಯಾವುದೇ ಪೋಲೀಸ್ ಅಧಿಕಾರಿ ಇಂತಹ ಪ್ರಕರಣಗಳ ನೋಂದಣಿಯನ್ನು ನಿರಾಕರಿಸುವಂತಿಲ್ಲ.ಪೋಲೀಸ್ ಉಪಅಧೀಕ್ಷಕರ ದರ್ಜೆಗೆ ಕಡಿಮೆಯಿಲ್ಲದ ಅಧಿಕಾರಿಯು ಸ್ವಪ್ರೇರಿತ ಪ್ರಕರಣ ದಾಖಲಿಸಬಹುದು. ಸರ್ಕಾರ ಕಾಲಕಾಲಕ್ಕೆ ಆಧ್ಯಾದೇಶದ ಅನುಷ್ಠಾನಕ್ಕಾಗಿ ನಿರ್ದೇಶನಗಳನ್ನು ನೀಡುವ ಅಧಿಕಾರ ಹೊಂದಿರುತ್ತದೆ.

ಈ ಆಧ್ಯಾದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ನೋಂದಾಯಿತವಲ್ಲದ ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು ಹೆಚ್ಚುತ್ತದೆ ಮತ್ತು ಸಾಲಗಾರರಿಗೆ ಕಿರುಕುಳ, ಬಲವಂತದ ವಸೂಲಿ ಕ್ರಮಗಳಿಂದ ಮುಕ್ತಿ ದೊರೆಯುತ್ತದೆ ಎಂಬುದು ಸರ್ಕಾರದ ವಿಶ್ವಾಸವಾಗಿದೆ.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";