ಆರೋಗ್ಯ ಸುಧಾರಣೆಗಳ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಒತ್ತು

ಬಳ್ಳಾರಿ,ಮಾ.06: ಆರೋಗ್ಯ ಕ್ಷೇತ್ರದಲ್ಲಿ ಬಹಳಷ್ಟು ಸುಧಾರಣೆಗಳನ್ನು ತರುವುದರ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಸರಕಾರ ಒತ್ತು ನೀಡಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಹೇಳಿದರು. ನಗರದ ವಿಮ್ಸ್ ಆವರಣದಲ್ಲಿ ನೂತನವಾಗಿ 40 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಶಸ್ತ್ರಚಿಕಿತ್ಸಾ ಸಂಕೀರ್ಣ, ಆಕ್ಸಿಜನ್ ಪ್ಲಾಂಟ್, ಹೃದ್ರೋಗ ವಿಭಾಗವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯ ಕ್ಷೇತ್ರಕ್ಕಾಗಿ ಕೇಂದ್ರ-ರಾಜ್ಯ ಸರಕಾರಗಳು ಬಹಳಷ್ಟು ಖರ್ಚು ಮಾಡುತ್ತಿವೆ. 40 ಸಾವಿರ ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಇರುವಂತೆ ಯೋಜನೆ ರೂಪಿಸಲಾಗುತ್ತಿದೆ. ಆಂಬ್ಯುಲೆನ್ಸ್‍ನಲ್ಲಿ ಸಮಗ್ರ ಸುಧಾರಣೆ ತರಲಾಗುತ್ತಿದೆ. ಆರೋಗ್ಯ ಸೇವೆಗಳು ಸಮಯಕ್ಕೆ ಸರಿಯಾಗಿ ದೊರಕಿಸುವ ನಿಟ್ಟಿನಲ್ಲಿ ಸರಕಾರ ಸಕಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಹೃದಯದ ಬಗ್ಗೆ ಕಾಳಜಿ ಇರಲಿ;ನಿರ್ಲಕ್ಷ್ಯ ಬೇಡ ಎಂಬ ಮಾತನ್ನು ಅನೇಕ ಬಾರಿ ಪ್ರಸ್ತಾಪಿಸಿದ ಸಚಿವ ಡಾ.ಸುಧಾಕರ್ ಅವರು ಹೃದ್ರೋಗ ಚಿಕಿತ್ಸೆ ಆಯಾ ಪ್ರದೇಶದಲ್ಲಿಯೇ ಒದಗಿಸುವ ದೃಷ್ಟಿಯಿಂದ ಹುಬ್ಬಳ್ಳಿಯಲ್ಲಿ ಜಯದೇವ ಹ್ರದ್ರೋಗ ಆಸ್ಪತ್ರೆಯನ್ನು ಆರಂಭಿಸಲು ಉದ್ದೇಶಿಸಲಾಗಿದ್ದು, ಬಜೆಟ್‍ನಲ್ಲಿ ಘೋಷಿಸಲಾಗಿದೆ ಎಂದರು.
ಉತ್ತರ ಕರ್ನಾಟಕದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಹಾಗು ಯಾದಗಿರಿ ಜಿಲ್ಲೆಗಳಿಂದ ಹಾಗು ಗಡಿ ಭಾಗದ ಆಂಧ್ರ ಪ್ರದೇಶದ ರಾಯದುರ್ಗ, ಕಲ್ಯಾಣದುರ್ಗ, ಗುಂತಕಲ್ಲು, ಉರವಕೊಂಡ, ಅನಂತಪುರ ಹಾಗು ಕರ್ನೂಲು ಜಿಲ್ಲೆಯಿಂದ ಹಲವಾರು ರೋಗಿಗಳು ಈ ಭಾಗದ ಪ್ರಸಿದ ಆಸ್ಪತ್ರೆಯಾದ ವಿಮ್ಸ್‍ನಲ್ಲಿ ಚಿಕಿತ್ಸಾ ಸೌಲಭ್ಯ ಪಡೆಯುತ್ತಿದ್ದಾರೆ. ಈ ಹೊಸ ಶಸ್ತ್ರ ಚಿಕಿತ್ಸಾ ಕಟ್ಟಡವು ಸುಮಾರು ರೂ.39.98 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಸುಮಾರು 11 ಅತ್ಯಾಧುನಿಕ ಸೌಲಭವುಳ್ಳ ಸಂಪೂರ್ಣ ಹವಾನಿಯಂತ್ರಿತ ಶಸ್ತ್ರಚಿಕಿತ್ಸಾ ಕೊಠಡಿಗಳು, ಸುಮಾರು 80 ಹಾಸಿಗೆಗಳ ತೀವು ನಿಗಾ ಘಟಕ,ಪ್ರಿ ಅಪರೇಟಿವ್,ಪೋಸ್ಟ್ ಅಪರೇಟಿವ್ ವಾರ್ಡ್‍ಗಳು, ಸೆಮಿನಾರ್ ರೂಮ್‍ಗಳು,ಸಿಬ್ಬಂದಿ ಕೊಠಡಿಗಳು, ಪೇಯಿನ್ ಕ್ಲಿನಿಕ್ ಮತ್ತು ಪ್ರಿ ಅನಸ್ತೇಟಿಕ್ ಚೆಕ್‍ಅಪ್ ಸೌಲಭ್ಯಗಳನ್ನು ಒಳಗೊಂಡಿದ್ದು, ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.


ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆಸ್ಪತ್ರೆಯಲ್ಲಿ ಹೃದಯರೋಗ ವಿಭಾಗ ಇಂದಿನಿಂದ ಕಾರ್ಯಾರಂಭವಾಗುತ್ತಿರುವುದು ಖುಷಿ ತಂದಿದೆ.
ಉತ್ತರ ಕರ್ನಾಟಕದ ವಿಶೇಷವಾಗಿ ಬಳ್ಳಾರಿ, ವಿಜಯನಗರ, ರಾಯಚೂರು, ಕೊಪ್ಪಳ ಹಾಗು ಯಾದಗಿರಿ ಜಿಲ್ಲೆಗಳು ಹಾಗೂ ನೆರೆಯ ಆಂಧ್ರಪ್ರದೇಶದ ಗುಂತಕಲ್ಲು, ರಾಯದುರ್ಗ, ಕಲ್ಯಾಣದುರ್ಗ ಹಾಗೂ ಉರವಕೊಂಡ ಜನರ ಅನುಕೂಲಕ್ಕಾಗಿ ವಿಮ್ಸ್ ಆಸ್ಪತ್ರೆಯಲ್ಲಿ ಹೃದಯ ರೋಗ ವಿಭಾಗವನ್ನು ಪ್ರಾರಂಭಿಸಲಾಗುತ್ತಿದೆ ಎಂದು ವಿವರಿಸಿದ ಸಚಿವ ಡಾ.ಸುಧಾಕರ್ ಅವರು ಈ ವಿಭಾಗದಲ್ಲಿ ಸುವಿಶೇಷ ತರಬೇತಿ ಹೊಂದಿದ 4 ಹೃದಯ ರೋಗ ತಜ್ಞರು ಲಭ್ಯವಿದ್ದು, ಸದ್ಯ ನಾನ್ ಇನ್‍ವ್ಯಾಸಿವ್ ಕಾರ್ಡಿಯಾಲಜಿ ಸೌಲಭ್ಯಗಳಾದ ಇಸಿಜಿ,ಇಸಿಎಚ್‍ಒ ಹಾಗೂ ಟಿಎಂಟಿಗಳನ್ನು ಒದಗಿಸಲಾಗುತ್ತದೆ.10 ಹಾಸಿಗೆಗಳ ಮತ್ತು ತೀವ್ರ ಹೃದಯ ರೋಗ ನಿಗಾ ಘಟಕ ಐಸಿಸಿಯು ಅನ್ನು ಪ್ರಾರಂಭಿಸಲಾಗುತ್ತಿದೆ, ಲಭ್ಯವಿರುವ ಸೇವೆಗಳನ್ನು ರೋಗಿಗಳು ಉಪಯೋಗಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ಮಾತನಾಡಿದರು.


ರಾಜ್ಯಸಭಾ ಸದಸ್ಯರಾದ ಸೈಯದ್ ನಾಸೀರ್ ಹುಸೇನ್ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಮಾತನಾಡಿದರು. ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಸತೀಶ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಎಸ್ಪಿ ಸೈದುಲು ಅಡಾವತ್, ಬುಡಾ ಅಧ್ಯಕ್ಷ ಪಾಲನ್ನ,ಎಪಿಎಂಸಿ ಅಧ್ಯಕ್ಷ ಉಮೇಶ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ, ಡಿಎಚ್‍ಒ ಡಾ.ಜನಾರ್ಧನ್, ಮಹಾನಗರ ಪಾಲಿಕೆ ಸದಸ್ಯರುಗಳು,ಮಾಜಿ ಸಂಸದರುಗಳು ವೇದಿಕೆ ಮೇಲಿದ್ದರು.

Leave a Comment

Your email address will not be published. Required fields are marked *

Translate »
Scroll to Top