ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್/ಉಪಮೇಯರ್ ಚುನಾವಣೆ

ಬಳ್ಳಾರಿ, ಮಾ.19 : ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾಂಗ್ರೆಸ್ ಪಕ್ಷದ 34ನೇ ವಾರ್ಡ್ ನ ಎಂ.ರಾಜೇಶ್ವರಿ, ಉಪಮೇಯರ್ ಆಗಿ 37ನೇ ವಾರ್ಡ್‌ನ ಮಾಲನ್ ಬಿ ಆಯ್ಕೆಯಾಗಿದ್ದಾರೆ. 39ವಾರ್ಡ್ ಗಳ ಸದಸ್ಯರು ಹಾಗೂ ಇಬ್ಬರು ಎಂಎಲ್ಎ,ಇಬ್ಬರು ಸಂಸದರು ಹಾಗೂ ಓರ್ವ ವಿಧಾನಪರಿಷತ್ ಸದಸ್ಯರು ಸೇರಿದಂತೆ 44 ಸದಸ್ಯ ಬಲದ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಎಂ.ರಾಜೇಶ್ವರಿ ಹಾಗೂ ಮಾಲನ್‌ ಬಿ ಅವರು ಕ್ರಮವಾಗಿ ತಲಾ 29 ಮತಗಳನ್ನು ಪಡೆಯುವುದರ ಮೂಲಕ ಮೇಯರ್ ಮತ್ತು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿಗಳು ಆಗಿರುವ ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್ ಅವರು ಫಲಿತಾಂಶ ಪ್ರಕಟಿಸಿದರು.


ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸಿದ್ದ 21ನೇ ವಾರ್ಡ್ ನ ಸುರೇಖಾಗೌಡ ಹಾಗೂ ಉಪಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ 25ನೇ ವಾರ್ಡ್ ನ ಎಂ.ಗೋವಿಂದರಾಜಲು ಅವರು 15ಮತಗಳನ್ನಷ್ಟೇ ಪಡೆಯಲು ಶಕ್ತರಾದರು. ಮೇಯರ್ ಮತ್ತು ಉಪಮೇಯರ್ ಕಣದಲ್ಲಿ ತಲಾ ಇಬ್ಬರು ನಾಮಪತ್ರಗಳು ಸಲ್ಲಿಸಿದ ಹಿನ್ನೆಲೆಯಲ್ಲಿ ನಾಮಪತ್ರಗಳನ್ನು ವಾಪಸ್ ಪಡೆಯಲು ಎರಡು ನಿಮಿಷಗಳ ಕಾಲವಕಾಶವನ್ನು ಚುನಾವಣಾಧಿಕಾರಿಗಳಾದ ಡಾ.ಎನ್.ವಿ.ಪ್ರಸಾದ್ ಅವರು ನೀಡಿದ್ದರು;ಯಾರು ನಾಮಪತ್ರ ವಾಪಸ್ ಪಡೆಯದ ಹಿನ್ನೆಲೆ ಚುನಾವಣೆ ನಡೆಸಲು ನಿರ್ಧರಿಸಲಾಯಿತು. ನಂತರ ನಾಲ್ಕು ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್ ಮತ್ತಿತರರು ಇದ್ದರು.

Leave a Comment

Your email address will not be published. Required fields are marked *

Translate »
Scroll to Top