ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅಕ್ರಮ ಸೈಟು ಹಂಚಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಮುಡಾ ಬದಲಿ ನಿವೇಶನಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ.
ಮುಡಾ ಹಗರಣ ಸಂಬಂಧ ಸಿದ್ದರಾಮಯ್ಯ ಅವರ ವಿರುದ್ಧ ಇತ್ತೀಚಿಗೆ ದಾಖಲಾಗಿದ್ದ ಲೋಕಾಯುಕ್ತ ಎಫ್‍ಐಆರ್ ಅನ್ನು ಆಧರಿಸಿ ಇಡಿ ‘ಜಾರಿ ನಿರ್ದೇಶನಾಲಯದ ಪ್ರಕರಣದ ಮಾಹಿತಿ ವರದಿ‘ (ಇಸಿಐಆರ್) ದಾಖಲಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‍ಎ) ವಿವಿಧ ಸೆಕ್ಷನ್ ಗಳಡಿ ಇಸಿಐಆರ್ ದಾಖಲಿಸಿದೆ. ‘ಇಸಿಐಆರ್’ ಪೆÇಲೀಸ್ ಎಫ್‍ಐಆರ್‍ಗೆ ಸಮಾನವಾಗಿದೆ. ಆದರೆ ಅದನ್ನು ಆರೋಪಿಗಳೊಂದಿಗೆ ಹಂಚಿಕೊಳ್ಳುವ ಅಗತ್ಯವಿಲ್ಲ. ಇಡಿ ದಾಖಲಿಸಿರುವ ಇಸಿಐಆರ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪಿ ನಂಬರ್ 1 (ಎ1 ಆರೋಪಿ) ಆಗಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ, ಅವರ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಜಮೀನು ಮಾರಾಟ ಮಾಡಿದ್ದ ದೇವರಾಜು ಅವರ ವಿರುದ್ಧವೂ ಇಸಿಐಆರ್‍ನಲ್ಲಿ ಆರೋಪಿಗಳೆಂದು ಉಲ್ಲೇಖ ಮಾಡಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪಿಎಂಎಲ್‍ಎ ಕಾಯ್ದೆಯಡಿ ಇಸಿಐಆರ್ ದಾಖಲಿಸಿದ್ದು, ಇದು ಇತರ ಕೆಲವು ಕ್ರಮಗಳ ಜೊತೆಗೆ ಸಿಎಂ ಮತ್ತು ಅವರ ಕುಟುಂಬಕ್ಕೆ ಸೇರಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಅಲ್ಲದೆ ಆರೋಪಿಗಳಿಗೆ ಸಮನ್ಸ್ ನೀಡಿ ವಿಚಾರಣೆಗೆ ಕರೆಯಬಲ್ಲ ಅಧಿಕಾರ ‘ಇಡಿ’ಗೆ ಇದೆ.
‘ಸಿದ್ದರಾಮಯ್ಯ ಕುಟುಂಬವು ಅಧಿಕಾರ ದುರುಪಯೋಗಪಡಿಸಿಕೊಂಡು ಮುಡಾದಿಂದ ಅಕ್ರಮವಾಗಿ ನಿವೇಶನಗಳನ್ನು ಪಡೆದಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಬೇಕು’ ಎಂದು ಕೋರಿ ಮೈಸೂರಿನ ಸ್ನೇಹಮಯಿ ಕೃಷ್ಣ ಎಂಬವರು ಖಾಸಗಿ ದೂರು ಸಲ್ಲಿಸಿದ್ದರು. ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಜನಪ್ರತಿನಿಧಿಗಳ ಪ್ರಕರಣಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿತ್ತು. ಲೋಕಾಯುಕ್ತದ ಮೈಸೂರು ಜಿಲ್ಲಾ ಘಟಕದ ಪೆÇಲೀಸರು ನ್ಯಾಯಾಲಯದ ಆದೇಶದಂತೆ ಶನಿವಾರ ಎಫ್‍ಐಆರ್ ದಾಖಲಿಸಿದ್ದರು. ಅದನ್ನು ಆಧಾರವಾಗಿ ಟ್ಟುಕೊಂಡು ಇ.ಡಿ ಬೆಂಗಳೂರು ಪ್ರಾದೇಶಿಕ ಕಚೇರಿಯ ಅಧಿಕಾರಿಗಳು ‘ಜಾರಿ ನಿರ್ದೇಶನಾಲಯದ ಪ್ರಕರಣದ ಮಾಹಿತಿ ವರದಿ‘ (ಇಸಿಐಆರ್) ದಾಖಲಿಸಿದ್ದಾರೆ.
ಮತ್ತೊಂದು ಕಡೆ ಸಿಬಿಐ ತೂಗುಗತ್ತಿ
ಲೋಕಾಯುಕ್ತ ತನಿಖೆ ಜೊತೆಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಡಬಲ್ ಟೆನ್ಷನ್ ಶುರುವಾಗಿದೆ. ಒಂದು ಕಡೆ ಸಿಬಿಐ ತನಿಖೆಗೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೊರೆ ಹೋಗಿದ್ದಾರೆ. ಲೋಕಾಯುಕ್ತ ರಾಜ್ಯ ಸರ್ಕಾರದ ಅಧೀನದಲ್ಲಿ ನಡೆಯುವ ಸಂಸ್ಥೆಯಾಗಿದೆ. ಹೀಗಾಗಿ ಪಾರದರ್ಶಕ ತನಿಖೆಯಾಗಬೇಕು ಅಂದ್ರೆ ಸಿಬಿಐಗೆ ಕೊಡಿ ಎಂದು ಮನವಿ ಮಾಡಿದ್ದಾರೆ.
ಈ ಸಂಬಂಧ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ದಸರಾ ರಜೆ ಬಳಿಕ ಈ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಗಳಿವೆ. ಮತ್ತೊಂದಡೆ ಇಡಿ ಅಧಿಕಾರಿಗಳು ಇಸಿಐಆರ್ ದಾಖಲಿಸಿದ್ದಾರೆ.