ಜೂ.26 ರಂದು ದಸರಾ ಉನ್ನತ ಮಟ್ಟದ ಸಭೆ: ಅದ್ದೂರಿ ದಸರಾ ಆಚರಣೆ ನಿರೀಕ್ಷೆ
ಬೆಂಗಳೂರು,ಜೂ,20: ಐತಿಹಾಸಿಕ ದಸರಾ ಮಹೋತ್ಸವ ಆಚರಣೆ ಸಂಬಂಧ ಮುಖ್ಯಮಂತ್ರಿಗಳ ಅಧ್ಯಕ್ಷತೆಯ ದಸರಾ ಉನ್ನತ ಮಟ್ಟದ ಸಮಿತಿ ಸಭೆ ಜೂನ್ 26 ರ ಗುರುವಾರ ನಡೆಯಲಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ನಡೆಯಲಿರುವ ಉನ್ನತ ಮಟ್ಟದ ಸಮಿತಿ ಸಭೆ,ಅದ್ಧೂರಿ ದಸರಾ ಆಚರಣೆ ಸಾಧ್ಯತೆಯಿದೆ.
ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು ನಲವತ್ತೈದು ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕೆ.ಆರ್.ಎಸ್.ಆಣೆಕಟ್ಟು ಜೂನ್ ತಿಂಗಳಲ್ಲೇ ಭರ್ತಿಯಾಗುವ ಲಕ್ಷಣ ಕಂಡು ಬಂದಿರುವುದು ಸರ್ಕಾರದ ಉತ್ಸಾಹಕ್ಕೆ ಕಾರಣವಾಗಿದೆ.
ಈ ಬಾರಿ ಉತ್ತಮ ಮಳೆಯಾಗುತ್ತಿದ್ದು,ಜುಲೈ,ಆಗಸ್ಟ್ ತಿಂಗಳಲ್ಲಿ ಇದು ಮುಂದುವರಿಯಲಿರುವುದರಿಂದ ರಾಜ್ಯದಲ್ಲಿ ಈ ವರ್ಷ ವಿದ್ಯುತ್ ಕೊರತೆ ಕಾಣಿಸಿಕೊಳ್ಳುವ ಲಕ್ಷಣಗಳಿಲ್ಲ.
ಇದೇ ರೀತಿ ತಮಿಳುನಾಡಿಗೆ ನಿಗದಿತ ಪ್ರಮಾಣದ ನೀರು ಹರಿದು ಹೋಗುವ ವಿಶ್ವಾಸವೂ ಇದ್ದು ಒಟ್ಟಾರೆಯಾಗಿ ಉತ್ತಮ ಮಳೆಯಿಂದಾಗಿ ಬಹುತೇಕ ಸಮಸ್ಯೆಗಳುನಿವಾರಣೆಯಾಗಿವೆ.
ಹೀಗಾಗಿ ಈ ಬಾರಿ ದಸರೆಯನ್ನು ಅದ್ಧೂರಿಯಾಗಿ ಆಚರಿಸುವ ಚಿಂತನೆ ಸರ್ಕಾರದ ಪ್ರಮುಖರಲ್ಲಿದ್ದು ಜೂನ್ ಇಪ್ಪತ್ತಾರರ ಗುರುವಾರ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಅದು ವ್ಯಕ್ತವಾಗಲಿದೆ ಎಂದು ಹೇಳಲಾಗಿದೆ.
ಈ ಮಧ್ಯೆ ದಸರೆಯ ಉದ್ಘಾಟನೆಗೆ ಯಾರನ್ನು ಕರೆಸಬೇಕು ಎಂಬ ವಿಷಯದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡುವುದು ಬಹುತೇಕ ಖಚಿತವಾಗಿದೆ.
ಈ ಮಧ್ಯೆ ದಸರೆಯಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಬೇಕು ಎಂಬುದೂ ಸೇರಿದಂತೆ ಹಲವು ವಿಷಯಗಳ ಬಗ್ಗೆ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಪ್ರಸ್ತಾಪವಾಗಲಿದ್ದು,ಉತ್ಸವ ಆಚರಣೆಗೆ ಈ ಬಾರಿ ಹಿಂದೆಂದಿಗಿಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.