ಮತದಾನದ ಬಗ್ಗೆ ಅರಿವು ಮೂಡಿಸುವ ದರ್ಬಾರ್

      ಸಂಗೀತ ನಿರ್ದೇಶಕ ವಿ.ಮನೋಹರ್  ಅವರು  23 ವರ್ಷಗಳ‌  ನಂತರ ಮತ್ತೆ ನಿರ್ದೇಶನ ಮಾಡಿರುವ ‘ದರ್ಬಾರ್’ ಚಿತ್ರದ ರಾಜ್ಯದ್ಯಂತ ತೆರೆಕಂಡಿದೆ.    “ಮ್ಯೂಸಿಕ್ ಮಾಡುವುದು ಇನ್ನೊಬ್ಬರ ಕನಸಿಗೆ, ಸಿನಿಮಾ ಮಾಡುವುದು ನಮ್ಮ‌ ಕನಸಿಗೆ. ದರ್ಬಾರ್ ಚಿತ್ರದ ನಾಯಕ-ನಿರ್ಮಾಪಕ ಸತೀಶ್ ನಮ್ಮ‌ ಕನಸಿಗೆ ಜೊತೆಯಾದರು. ಈಚೆಗೆ ಚಿತ್ರದ ಟೆಸ್ಟ್ ಷೋ‌ ಮಾಡಿದಾಗ ಒಳ್ಳೆಯ ಅಭಿಪ್ರಾಯ ಬಂತು. ಥಿಯೇಟರಿಗೆ ಬಂದ ಪ್ರೇಕ್ಷಕರಿಗೆ ಮನರಂಜನೆ ಖಚಿತ” ಎಂದು ವಿ ಮನೋಹರ್ ತಿಳಿಸಿದ್ದಾರೆ.

ನಾಯಕ ಸತೀಶ್ “ನಮ್ಮ  ಚಿತ್ರವು  ಖಂಡಿತ ಮನರಂಜನೆ ನೀಡುತ್ತದೆ. ಸಾಂದರ್ಭಿಕ ಹಾಸ್ಯ ದೃಶ್ಯಗಳನ್ನು ಜಾಸ್ತಿ ಇಟ್ಟಿದ್ದೇವೆ. ನಾನು ಸಿನಿಮಾದಲ್ಲಿ ದುಡ್ಡು ಮಾಡಲು ಬಂದಿಲ್ಲ. ಜನರಿಗೆ  ಒಳ್ಳೆಯ ಸಿನಿಮಾ ಕೊಡಬೇಕು ಅಂತ ಬಂದಿದ್ದೇನೆ. ಹತ್ತು ಜನ ಬಂದು ಸಿನಿಮಾ ನೋಡಿದರೆ, ಅವರು ನೂರು ಜನಕ್ಕೆ ಖಂಡಿತ ಹೇಳ್ತಾರೆ. ಸಿನಿಮಾ‌ ಕಮರ್ಷಿಯಲಿ ಏನಾಗುತ್ತೋ ಗೊತ್ತಿಲ್ಲ. ಒಳ್ಳೆಯ ಸಿನಿಮಾ ಟೀಮ್ ನೊಂದಿಗೆ ಕೆಲಸ ಮಾಡಿದ ತೃಪ್ತಿಯಿದೆ” ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. 

 

     ಕಾಮಿಡಿ ಕಿಲಾಡಿ  ನಟ ಸಂತು “ಅದ್ಭುತವಾದ ಸಿಚುಯೇಶನ್ ಕಾಮಿಡಿ ಇರುವಂಥ ಚಿತ್ರ. ಟೆಕ್ನಿಕಲ್ ಪ್ರೀಮಿಯರ್ ಷೋ ಮಾಡಿದಾಗ ಬಂದ ರಿಯಾಕ್ಷನ್ ಕಂಡು ನಿಜಕ್ಕೂ ಖುಷಿ ಆಯ್ತು. ಜನ ದುಡ್ಡು ಇಸ್ಕೊಂಡು ಓಟ್ ಹಾಕಿದರೆ ಏನಾಗುತ್ತೆ ಅನ್ನೋದು ಈ ಸಿನಿಮಾದಲ್ಲಿದೆ. ಪ್ರಾಮಾಣಿಕ‌ ವ್ಯಕ್ತಿಗೆ‌ ನಮ್ಮ ಮತ ಹಾಕಬೇಕು ಎಂಬ ಅರಿವು ಮೂಡಿಸುತ್ತದೆ. ನನ್ನದು ವೈರ ಎಂಬ ಪಾತ್ರ ತುಂಬಾ ನಗಿಸುತ್ತದೆ “ಎಂದು ಹೇಳಿದರು. ಅವರು, ನಾಯಕಿ ಜಾಹ್ನವಿ,  ಹುಲಿ ಕಾರ್ತೀಕ್ ಚಿತ್ರದಲ್ಲಿ  ಪ್ರಧಾನ ಪಾತ್ರ ವಹಿಸಿದ್ದಾರೆ. 

       ಚಿತ್ರದ  ಕಥೆ, ಚಿತ್ರಕಥೆ ಹಾಗೂ  ಸಂಭಾಷಣೆಗಳನ್ನು ಸತೀಶ್ ಅವರೇ  ಬರೆದಿದ್ದು, ದರ್ಬಾರ್ ಪ್ರೊಡಕ್ಷನ್ಸ್ ಮೂಲಕ  ಬಿ.ಎನ್. ಶಿಲ್ಪ ಅವರು  ನಿರ್ಮಾಣ ಮಾಡಿದ್ದಾರೆ. ಮಾಸ್ ಮಾದ, ವಿನೋದ್ ಸಾರಥ್ಯದ 3 ಸಾಹಸ ದೃಶ್ಯಗಳು  ಚಿತ್ರದಲ್ಲಿವೆ.  ಹಿರಿಯ ಕಲಾವಿದರಾದ ಎಂ.ಎನ್.ಲಕ್ಷ್ಮಿದೇವಿ, ಅಶೋಕ್ ಹೀಗೆ ಸಾಕಷ್ಟು ಜನ ಅಭಿನಯಿಸಿದ್ದಾರೆ. ಮೂರು ಹಾಡುಗಳು ಚಿತ್ರದಲ್ಲಿದ್ದು, ಟೈಟಲ್ ಸಾಂಗನ್ನು ಚಂದನ್ ಶೆಟ್ಟಿ ಹಾಡಿದ್ದಾರೆ, ರಾಜಕೀಯ ವಿಡಂಬನೆಯ ಹಾಡನ್ನು ಉಪೇಂದ್ರ ಹಾಡಿದ್ದಾರೆ ಹಾಗು ಡ್ಯುಯೆಟ್ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top