ವೈದ್ಯರು ದೇವರ ಸ್ವರೂಪ, ವೈದ್ಯಕೀಯ ಸೇವೆ ದೈವಿಕ ಸೇವೆ

ಬೆಂಗಳೂರು : ವೈದ್ಯಕೀಯ ಸೇವೆಯು ಮಾನವೀಯ ಮತ್ತು ದೈವಿಕ ಸೇವೆಯಾಗಿದೆ, ವೈದ್ಯರನ್ನು ದೇವರ ಸ್ವರೂಪವೆಂದು ಪರಿಗಣಿಸಲಾಗಿದ್ದು, ಈ ಕ್ಷೇತ್ರಕ್ಕೆ ಪಾದಾರ್ಪಣ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಮಾನವೀಯ ಸೇವೆಗೆ ಮುಡುಪಾಗಿಸಿಕೊಳ್ಳಬೇಕು ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.

ಬೆಂಗಳೂರಿನ ನಿಮ್ಹಾನ್ಸ್ ಕನ್ವೆಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಅರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಕರ್ನಾಟಕದ 24ನೇ ಘಟಿಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವಿಶ್ವವಿದ್ಯಾಲಯದಲ್ಲಿ ತಮ್ಮ ವ್ಯಾಸಂಗವನ್ನು ಯಶಸ್ವಿಯಾಗಿ ಮುಗಿಸಿ ಇಂದು ಪದವಿಗಳನ್ನು ಪಡೆದು ಗೌರವಾನ್ವಿತ ಮಾನವೀಯ ಸೇವೆಗೆ ಪಾದಾರ್ಪಣೆ ಮಾಡಿದ ಎಲ್ಲಾ ಉಜ್ವಲ ವಿದ್ಯಾರ್ಥಿಗಳಿಗೆ ಅಭಿನಂದನೆ ಎಂದ ಅವರು, ವೈದ್ಯಕೀಯ ಸೇವೆಯು ದೈವಿಕ ಸೇವೆಯಾಗಿದೆ, ವೈದ್ಯರನ್ನು ದೇವರ ಸ್ವರೂಪವೆಂದು ಪರಿಗಣಿಸಲಾಗಿದೆ. ನೀವು ವೈದ್ಯರಾಗಿ ನಿಮ್ಮ ಸೇವೆಯನ್ನು ಸಲ್ಲಿಸಿದಾಗ ಮತ್ತು ಅದನ್ನು ಮಾನವೀಯ ಸೇವೆಯಾಗಿ ಮಾಡಿದಾಗ, ನೀವು ಖಂಡಿತವಾಗಿಯೂ ಯಶಸ್ವಿ ವೈದ್ಯರಾಗುತ್ತೀರಿ ಮತ್ತು ಭವಿಷ್ಯದಲ್ಲಿ ಶ್ರೇಷ್ಠತೆಯನ್ನು ಸಾಧಿಸುವಿರಿ ಎಂದು ಹೇಳಿದರು.

ಕರ್ನಾಟಕದಲ್ಲಿರುವ ಈ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಅದರ ಗುಣಮಟ್ಟ ಮತ್ತು ಶಿಕ್ಷಣದ ಬದ್ಧತೆಗೆ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಭಾರತೀಯ ವೈದ್ಯಕೀಯ ಶಿಕ್ಷಣದಲ್ಲಿ ವಿಶ್ವ ದರ್ಜೆಯ ಗುಣಮಟ್ಟವನ್ನು ತರಲು ನಿರಂತರ ಪ್ರಯತ್ನಗಳನ್ನು ಮಾಡಲಾಗಿದೆ ಮತ್ತು ಗುಣಮಟ್ಟದ ಆರೋಗ್ಯ ಸೇವೆಗಳು ದೇಶದ ಮೂಲೆ ಮೂಲೆಗಳನ್ನು ತಲುಪಲು ಅನೇಕ ಹೊಸ ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ. ಈ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಈ ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸುವ ಮೂಲಕ ಪ್ರಶಸ್ತಿಗಳನ್ನು ತಂದಿರುವುದು ಶ್ಲಾಘನೀಯ. ಇಲ್ಲಿನ ವಿದ್ಯಾರ್ಥಿಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸೇವೆಗಳಲ್ಲಿ ತೊಡಿಗಿಸಿಕೊಂಡು ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಶ್ಲಾಘಿಸಿದರು.

ಪ್ರಾಚೀನ ಭಾರತವು ವೈದ್ಯಕೀಯ ವಿಜ್ಞಾನದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಭಾರತದಲ್ಲಿ ಮಹರ್ಷಿ ಚರಕರನ್ನು ಆಯುರ್ವೇದ ಮತ್ತು ಔಷಧದ ಪಿತಾಮಹ ಎಂದು ಪರಿಗಣಿಸಲಾಗುತ್ತದೆ, ಆದರೆ ಮಹರ್ಷಿ ಸುಶ್ರುತರನ್ನು ಶಸ್ತ್ರಚಿಕಿತ್ಸೆಯ ಪಿತಾಮಹ ಎಂದು ಪರಿಗಣಿಸಲಾಗುತ್ತದೆ. ಇಂದು ವೈದ್ಯಕೀಯ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆ ಹೆಚ್ಚಿದೆ. ನಮ್ಮಲ್ಲಿ ಉತ್ತಮ ತಂತ್ರಜ್ಞಾನ, ಉತ್ತಮ ರೋಗಶಾಸ್ತ್ರಜ್ಞರು, ಉತ್ತಮ ವೈದ್ಯಕೀಯ ಸೌಲಭ್ಯಗಳಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸುವುದರ ಜೊತೆಗೆ ವೈದ್ಯಕೀಯ ಕ್ಷೇತ್ರದ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.

ಭಾರತದ ಸಾಮರ್ಥ್ಯ ಮತ್ತು ಭಾರತದ ಪ್ರತಿಭೆ ಪ್ರಪಂಚದ ಪ್ರತಿಯೊಂದು ಹಂತದಲ್ಲೂ ಪ್ರತಿಧ್ವನಿಸುತ್ತಿದೆ. ಇಂದು ಇಡೀ ಜಗತ್ತು ಲಸಿಕೆ ತಯಾರಿಕೆಯಲ್ಲಿ ಭಾರತದ ಸ್ವಾವಲಂಬನೆಯ ಲಾಭವನ್ನು ಪಡೆಯುತ್ತಿದೆ, ಇದು ಕೊರೊನಾ ಅವಧಿಯಲ್ಲಿ ಸಾಬೀತಾಗಿದೆ. ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯ: ಎಂಬ ಸಂದೇಶವನ್ನು ಪಾಲಿಸಬೇಕು ಎಂದು ಹೇಳಿದರು. ಘಟಿಕೋತ್ಸವದ ಸಂದರ್ಭದಲ್ಲಿ, ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮಿ ಮತ್ತು ಡಾ. ಬಿ. ಎನ್. ಗಂಗಾಧರ್ ಮತ್ತು ಡಾ.ರಾಜನ್ ದೇಶಪಾಂಡೆ ಅವರಿಗೆ ಜ್ಞಾನ-ವಿಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಮತ್ತು ಅನುಪಮ ಕೆಲಸಕ್ಕಾಗಿ ಗೌರವ ಪದವಿಗಳನ್ನು ನೀಡಿ ಗೌರವಿಸಲಾಗಿದ್ದು, ಅವರ ಉಜ್ವಲ ಭವಿಷ್ಯಕ್ಕಾಗಿ ಶುಭಕೋರುತ್ತಾ, ಹೀಗೆ ಯುವಜನತೆಗೆ ಸ್ಪೂರ್ತಿಯಾಗಿರಿ ಎಂದು ಅಪೇಕ್ಷಿಸುತ್ತೇನೆಂದರು.

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣದ ಗೌರವಾನ್ವಿತ ರಾಜ್ಯ ಸಚಿವರಾದ ಡಾ. ಭಾರತಿ ಪ್ರವೀಣ್ ಪವಾರ್ ಘಟಿಕೋತ್ಸವವನ್ನುದ್ದೇಶಿಸಿ ಭಾಷಣ ಮಾಡಿದರು. ಸಚಿವರಾದ ಸನ್ಮಾನ್ಯ ಡಾ.ಕೆ.ಕೆ. ಸುಧಾಕರ್,ಕುಲಪತಿ ಡಾ.ಎಂ.ಕೆ. ರಮೇಶ್, ಸೆನೆಟ್ ಮತ್ತು ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್‌ನ ಸದಸ್ಯರು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

Translate »
Scroll to Top