“HSRP” ನಂಬರ್ ಪ್ಲೇಟ್  ಯಾತಕ್ಕೆ ಹಾಕಿಸಬೇಕು ಗೊತ್ತಾ..?

ಕರ್ನಾಟಕ ರಾಜ್ಯ ಸರಕಾರದ ಸಾರಿಗೆ ಇಲಾಖೆಯ ಅಧಿಕೃತ ಜಾಲತಾಣದಲ್ಲಿ ಹೀಗೊಂದು ಸುತ್ತೋಲೆಯನ್ನು ಹೊರಡಿಸಲಾಗಿದೆ. ಏನೆಂದರೆ “ದಿನಾಂಕ : 01-04-2019 ಕ್ಕಿಂತ ಮೊದಲು ನೋಂದಣಿಯಾಗಿರುವ ವಾಹನಗಳಿಗೆ “HSRP” ನಂಬರ್ ಪ್ಲೇಟ್ಗಳನ್ನು ಅಳವಡಿಸಲು ಕೊನೆಯ ದಿನಾಂಕ 17-11-2023” ಎಂದು .. ಇದು ಕೇಂದ್ರ ಮೋಟಾರು ವಾಹನ ಖಾಯಿದೆ ತಿದ್ದುಪಡಿಯ ಒಂದು ಭಾಗ.

 

ಬಹಳಷ್ಟು ಜನರಿಗೆ ಇದರ ಬಗ್ಗೆ ಮಾಹಿತಿ ಇಲ್ಲ ಮತ್ತು ಈ ಒಂದು ನಿಯಮದ ಬಗ್ಗೆ ಜಾಗೃತಿಯು ಕಡಿಮೆ. ಈ ನಂಬರ್ ಪ್ಲೇಟ್ ನಿಯಮವು ಕರ್ನಾಟಕದಲ್ಲಷ್ಟೇ ಅಲ್ಲದೆ ಇನ್ನೂ 12 ರಾಜ್ಯಗಳಲ್ಲಿ ಜಾರಿಯಲ್ಲಿದೆ. ಈತರದ ನಂಬರ್ ಪ್ಲೇಟ್ಗಳು ಶಾಶ್ವತ ಅಚ್ಚಿನ ಗುರುತಿನ ಸಂಖ್ಯೆಗಳೊಂದಿಗೆ ಕ್ರೋಮಿಯಂ ಆಧಾರಿತ ಅಶೋಕಚಕ್ರದ ಹೊಲೊಗ್ರಾಮ್ ಸೇರಿದಂತೆ ವಿಶಿಷ್ಟ ಲಕ್ಷಣಗಳನ್ನು ಹೊಂದಿವೆ. ಈ ಗುಣಲಕ್ಷಣಗಳು ನಂಬರ್ ಪ್ಲೇಟ್ ಗಳನ್ನ ಟ್ಯಾಂಪರಿಂಗ್ ಮಾಡುವುದನ್ನು ವಾಸ್ತವಿಕವಾಗಿ ಅಸಾಧ್ಯವಾಗಿಸುತ್ತದೆ. ಇಂತಹ ನಂಬರ್ ಪ್ಲೇಟ್ಗಳನ್ನು ಬಳಸುವ ಪ್ರಮುಖ ಉದ್ದೇಶ ವಾಹನ-ಸಂಬಂಧಿತ ಅಪರಾಧಗಳನ್ನು ನಿಗ್ರಹಿಸುವುದು, ನಂಬರ್ ಪ್ಲೇಟ್ಗಳನ್ನು ತಿದ್ದುವುದು ಮತ್ತು ನಕಲಿ ಮಾಡುವುದನ್ನು ತಡೆಯುವ ಮೂಲಕ, ರಸ್ತೆಯಲ್ಲಿರುವ ಎಲ್ಲಾ ವಾಹನಗಳನ್ನು ಗುರುತಿಸುವಲ್ಲಿ ಸಹಾಯ ಮಾಡುತ್ತವೆ.

ಏನಿದು “HSRP” ನಂಬರ್ ಪ್ಲೇಟ್..

“ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್” ಇದೊಂದು ಅಲ್ಯೂಮಿನಿಯಂ ಲೋಹದಿಂದ ನಿರ್ಮಿತವಾದ ನಂಬರ್ ಪ್ಲೇಟ್ ಆಗಿದ್ದು, ಅದನ್ನು ವಾಹನದ ಮೇಲೆ ಮರುಬಳಕೆ ಮಾಡಲಾಗದ ಸ್ನ್ಯಾಪ್-ಆನ್ ಲಾಕ್‌ಗಳ ಮೂಲಕ ಜೋಡಿಸಲಾಗುತ್ತದೆ. ನಂಬರ್ ಪ್ಲೇಟಿನ ಮೇಲಿನ ಎಡ ಮೂಲೆಯಲ್ಲಿ 20mm x 20mm ಗಾತ್ರದ ಕ್ರೋಮಿಯಂ ಆಧಾರಿತ ಹಾಲೋಗ್ರಾಮ್ ಅಶೋಕ ಚಕ್ರ ಇದೆ. ಕೆಳಗಿನ ಎಡ ಮೂಲೆಯಲ್ಲಿ ವಿಶಿಷ್ಟವಾದ ಲೇಸರ್-ಬ್ರಾಂಡ್ 10-ಅಂಕಿಯ ಶಾಶ್ವತ ಗುರುತಿನ ಸಂಖ್ಯೆ ಇದೆ. ಎಡ ಮೂಲೆಯ ಮಧ್ಯಭಾಗದಲ್ಲಿ ‘IND’ ಎಂದು ನೀಲಿ ಬಣ್ಣದಿಂದ ಬರೆದಿರುತ್ತಾರೆ. ವಾಹನದ ನೋಂದಣಿ ಸಂಖ್ಯೆಯ ಮೇಲೆ ಹಾಟ್-ಸ್ಟ್ಯಾಂಪ್ಡ್ ಫಿಲ್ಮ್ ನಿಂದ ಸಂಖ್ಯೆಗಳನ್ನ ಸ್ಟಾಂಪಿಂಗ್ ಮಾಡಿರುತ್ತಾರೆ.

ನಂಬರ್ ಪ್ಲೇಟ್ಗಳನ್ನು ಅಳವಡಿಸಲು ಸರಕಾರ ಕೆಲವು ಅಧಿಕೃತ ವಿತರಕರಿಗೆ ಮಾತ್ರ ಪರವಾನಿಗೆ ನೀಡಿದೆ. ಆ ವಿತರಕರು ಸರಕಾರದ “ವಾಹನ್ ಪೋರ್ಟಲ್‌”ನಲ್ಲಿ ಲೇಸರ್ ಕೋಡಿಂಗ್ ಅನ್ನು ನವೀಕರಿಸಬೇಕಾಗುತ್ತದೆ. ಆದಾಗ್ಯೂ, ನೋಂದಣಿ ಪ್ರಮಾಣಪತ್ರಗಳು, ಫಿಟ್ನೆಸ್ ಪ್ರಮಾಣಪತ್ರಗಳು ಇಲ್ಲದ ಮತ್ತು ಮಿತಿಮೀರಿದ ರಸ್ತೆ ತೆರಿಗೆ ಬಾಕಿ ಹೊಂದಿರುವ ವಾಹನಗಳು “HSRP” ನಂಬರ್ ಪ್ಲೇಟ್ ಸ್ಥಾಪನೆಗೆ ಅರ್ಹರಾಗಿರುವುದಿಲ್ಲ. 

 

          ದಿನಾಂಕ : 01-04-2019 ರ ನಂತರ ನೋಂದಾವಣಿಗೊಂಡ ವಾಹನಗಳಿಗೆ ಈಗಾಗಲೇ “HSRP” ನಂಬರ್ ಪ್ಲೇಟ್ಗಳನ್ನು ಕಡ್ಡಾಯಗೊಳಿಸಲಾಗಿತ್ತು. ಆದಾಗ್ಯೂ ವಾಹನ ಡೀಲರ್ ಗಳ ನಿರ್ಲಕ್ಷ್ಯದಿಂದ ಅಂತಹ ನಂಬರ್ ಪ್ಲೇಟ್ಗಳನ್ನು ಅಳವಡಿಸದ ವಾಹನಗಳಲ್ಲಿ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ಗಳನ್ನು ಅಳವಡಿಸಬೇಕು.

ನಂಬರ್ ಪ್ಲೇಟ್ಗಳನ್ನು ಯಾವುದೇ ಅನಧಿಕೃತ ನಂಬರ್ ಪ್ಲೇಟ್ ತಯಾರಕರ ಬಳಿ ಮಾಡಿಸುವಹಾಗಿಲ್ಲ. ಸರಕಾರ ಅಧಿಕೃತವಾಗಿ ನಿಗದಿಪಡಿಸಿದ ಕೆಲ ವಿತರಕರು ಮಾತ್ರ ಇಂತಹ ನಂಬರ್ ಪ್ಲೇಟ್ ವಿತರಣೆಗೆ ಅರ್ಹರು. ಅರ್ಹ ವಿತರಣದಾರರ ವಿವರಗಳು ಸರಕಾರದ ಇಲಾಖೆಯ ಜಾಲತಾಣದಲ್ಲಿ ಲಭ್ಯವಿರುತ್ತದೆ. ಅಲ್ಲದೆ https://bookmyhsrp.com/Index.aspx ಜಾಲತಾಣದಲ್ಲಿ ಆನ್ ಲೈನ್ ಮುಖಾಂತರ “HSRP” ನಂಬರ್ ಪ್ಲೇಟ್ ಅನ್ನು ಪಡೆಯಬಹುದು,

ಮೇಲಿನ ಜಾಲತಾಣದಲ್ಲಿ “ಬುಕ್” ಲಿಂಕ್ ಅನ್ನು ಬಳಸಿ ನಂತರದ ಪುಟದಲ್ಲಿ ನಿಮ್ಮ ರಾಜ್ಯ ವನ್ನು ಸೆಲೆಕ್ಟ್ ಮಾಡಿ ನಿಮ್ಮ ವಾಹನದ ನೋಂದಣಿ ಸಂಖ್ಯೆ, ಇಂಜಿನ್ ಸಂಖ್ಯೆ ಮತ್ತು ಚಾಸಿ ಸಂಖ್ಯೆ ನಮೂದಿಸಿ ಮುಂದಿನ ಪುಟಕ್ಕೆ ಹೋದಲ್ಲಿ ಅಲ್ಲಿ ನಿಮ್ಮ ವಾಹನದ ರಿಜಿಸ್ಟ್ರೇಷನ್ ದಿನಾಂಕ ಕಾಣಸಿಗುತ್ತದೆ. ಅಲ್ಲಿ ಮತ್ತೊಮ್ಮೆ ನಿಮ್ಮ ಮೊಬೈಲ್ ನಂಬರ್ ಮತ್ತು ವಿಳಾಸವನ್ನು ನಮೂದಿಸಿ ಮುಂದಿನ ಪುಟಕ್ಕೆ ಹೋದರೆ ಅಲ್ಲಿ “ಹೋಂ ಡೆಲಿವರಿ” ಮತ್ತು “ಡೀಲರ್ ಅಪಾಯಿಂಟ್ಮೆಂಟ್” ಅನ್ನುವ ಎರಡು ಆಯ್ಕೆ ಕಾಣಸಿಗುತ್ತೆ. ಆದರೆ ನಂಬರ್ ಪ್ಲೇಟ್ಗಳನ್ನು ಮರುಬಳಕೆ ಮಾಡಲಾಗದ ಲಾಕ್ ಮುಖಾಂತರ ಜೋಡಿಸಬೇಕಾದ ಕಾರಣ ವಾಹನವನ್ನು ಡೀಲರ್ಗಳ ವರ್ಕ್ ಶಾಪಿಗೆ ಕೊಂಡು ಹೋಗಬೇಕಾಗಿರುವುದರಿಂದ “ಹೋಂ ಡೆಲಿವರಿ” ಆಯ್ಕೆ ಬಹುತೇಕ ಕಡೆಗಳಲ್ಲಿ ಸೇವೆಗೆ ಲಭ್ಯವಿರುವುದಿಲ್ಲ.

 

ಹಾಗಾಗಿ “ಡೀಲರ್ ಅಪಾಯಿಂಟ್ಮೆಂಟ್” ಸೆಲೆಕ್ಟ್ ಮಾಡಿಕೊಂಡು ಮುಂದಿನ ಪುಟದಲ್ಲಿ ನಿಮ್ಮ ಸ್ಥಳದ ಪಿನ್ ಕೋಡ್ ನಮೂದಿಸಿದಲ್ಲಿ ನಿಮ್ಮ ಹತ್ತಿರದ ಡೀಲರ್ ವಿವರಗಳು ಗೋಚರಿಸುತ್ತದೆ. ನಂತರ ನಿಮಗೆ ಸೂಕ್ತವಾದ ದಿನ ಮತ್ತು ಸಮಯದ ಸ್ಲಾಟ್ ನಿಗದಿಪಡಿಸಿದ ನಂತರ ಪೇಮೆಂಟ್ ಮಾಡಿದಲ್ಲಿ “HSRP” ನಂಬರ್ ಪ್ಲೇಟ್ ಆನ್ ಲೈನ್ ನೊಂದಣಿ ಪೂರ್ಣಗೊಳ್ಳುತ್ತದೆ. ನಂತರ ನೀವು ನಿಗದಿ ಪಡಿಸಿದ ದಿನಾಂಕ ಮತ್ತು ಸಮಯಕ್ಕೆ ಡೀಲರ್ ಬಳಿ ಹೋದಲ್ಲಿ ನಿಮ್ಮ “HSRP” ನಂಬರ್ ಪ್ಲೇಟ್ ಅನ್ನು ಬದಲಾಯಿಸಲಾಗುತ್ತದೆ.

ಸಾಮಾನ್ಯವಾಗಿ ನಾಲ್ಕು ಚಕ್ರಗಳ ವಾಹನಗಳಿಗೆ ಬೆಲೆಯು ರೂ. 600 ರಿಂದ ರೂ. 800 ರವರೆಗೂ ಇರಬಹುದು, ಮತ್ತು ದ್ವಿಚಕ್ರ ವಾಹನಗಳಿಗೆ ರೂ. 300 ರಿಂದ ರೂ. 500 ರ ನಡುವೆ ಬೆಲೆ ಇರಬಹುದು.

 

ನೆನಪಿರಲಿ ಸದ್ಯದ ಮಟ್ಟಿಗೆ ನಂಬರ್ ಪ್ಲೇಟ್ ಅಳವಡಿಸಲು ಕೊನೆಯ ದಿನಾಂಕ 17 ನವೆಂಬರ್ 2023 ಆಗಿರುತ್ತದೆ. ತಪ್ಪಿದ್ದಲ್ಲಿ ರೂಪಾಯಿ 500 ರಿಂದ 1000 ದವರೆಗೆ ದಂಡ ವಿಧಿಸಲಾಗುತ್ತದೆ. ಹೆಚ್ಚಿಗೆ ಇದರ ಬಗ್ಗೆ ಮಾಹಿತಿಯ ಕೊರತೆಯ ಕಾರಣ ಕೊನೆಯ ದಿನಾಂಕ ಮುಂದೂಡುವ ಸಾಧ್ಯತೆಗಳು ದಟ್ಟವಾಗಿದೆ. ಆದರೆ ಒಂದಲ್ಲ ಒಂದು ದಿನ “HSRP” ನಂಬರ್ ಪ್ಲೇಟ್ ಅಳವಡಿಕೆ ಮಾಡಲೇಬೇಕು. ಸಾವಿರ ರೂಪಾಯಿ ದಂಡದ ಬದಲು ಅದಕ್ಕಿಂತ ಕಡಿಮೆ ಮೊತ್ತದಲ್ಲಿ ನಂಬರ್ ಪ್ಲೇಟ್ ಬದಲಾಯಿಸುವುದು ಸೂಕ್ತ . 

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top