ದಿವ್ಯ ಸನ್ನಿಧಾನಲೇಖಕರು: ಟಿಎನ್ನೆಸ್ ಚಿತ್ರೋದ್ಯಮ
ದೇವಾಲಯ: ದೊಡ್ಡದಾಳವಾಟ್ಟ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ ದೊಡ್ಡದಾಳವಾಟ್ಟ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ – ಕರ್ನಾಟಕದ ಗಡಿಭಾಗ ಮಧುಗಿರಿ ತಾಲೂಕಿನಲ್ಲಿರುವ ಹೊಯ್ಸಳ ವಿಜಯನಗರ ಶೈಲಿಯಲ್ಲಿ ನಿರ್ಮಾಣವಾದ ಸುಂದರ ದೇವಾಲಯ. ಸುಮಾರು 40 ಕಿಲೋಮೀಟರ್ ಮತ್ತು ಆಂಧ್ರದ ಹಿಂದುಪುರಂನಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿರುವ ಈ ಊರು ಮಾರಮ್ಮ ದೇವಾಲಯ,ಈಶ್ವರ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳ ತವರೂರು. ಇವೆಲ್ಲಕ್ಕೂ ಕಳಶಪ್ರಾಯವಿಟ್ಟಂತೆ ಇಲ್ಲಿನ ಶ್ರೀ ಲಕ್ಷ್ಮೀನರಸಿಂಹ ದೇವಾಲಯ ಪ್ರತಿವರ್ಷ ಸಾವಿರಾರು ಭಕ್ತಾದಿಗಳನ್ನು ಕೈ ಬೀಸಿ ಕರೆಯುತ್ತಿದೆ. ಸ್ಥಳ ಪುರಾಣದ ಪ್ರಕಾರ ದಳ ಮಹರ್ಷಿಯ ತಪಸ್ಸಿಗೆ ಮೆಚ್ಚಿದ ವಿಷ್ಣುವು ನರಸಿಂಹಸ್ವಾಮಿಯಾಗಿ ಪ್ರತ್ಯಕ್ಷನಾಗಿ ಬೇಕಾದ ವರವನ್ನು ಬೇಡೆನ್ನಲು, ಎಂದೆಂದಿಗೂ ನೀನು ಇಲ್ಲಿಯೇ ನೆಲೆಸಿ ಭಕ್ತರ ಕಷ್ಟಗಳನ್ನು ಪರಿಹರಿಸಬೇಕು ಎಂದು ದಳ ಮಹರ್ಷಿಯು ಕೇಳಿದನಂತೆ. ಮಹರ್ಷಿಯ ಮಾತಿಗೆ ಮೆಚ್ಚಿದ ಪರಮಾತ್ಮನು ಕಪ್ಪುಶಿಲೆಯ ರೂಪದಲ್ಲಿ ಲಕ್ಷ್ಮೀನರಸಿಂಹಸ್ವಾಮಿಯಾಗಿ ಇಲ್ಲಿ ಉದ್ಭವನಾಗಿದ್ದಾನೆ. ಕಾಲಕ್ರಮೇಣ, ಈ ರಸ್ತೆಯಲ್ಲಿ ಬರುತ್ತಿದ್ದ ವ್ಯಾಪಾರಿಗಳು ಸಂಜೆ ಕತ್ತಲಾಗಲು ಆ ರಾತ್ರಿಯನ್ನು ಇಲ್ಲಿಯೇ ಕಳೆಯಲು ನಿರ್ಧರಿಸಿ ಅಲ್ಲಿದ್ದ ಕಲ್ಲಿಗೆ ಇನ್ನೆರಡು ಕಲ್ಲುಗಳನ್ನು ಸೇರಿಸಿ ಒಲೆಯನ್ನು ಮಾಡಿ ಅದರ ಮೇಲೆ ಅನ್ನವನ್ನು ಬೇಯಲು ಇಟ್ಟರು. ಆದರೆ ಬೇಯಲು ಈತ ಅನ್ನವು ರಕ್ತದಂತಾಗಲು, ಹೆದರಿದ ವ್ಯಾಪಾರಿಗಳಿಗೆ ಸ್ವಾಮಿಯು ಸ್ವಪ್ನದಲ್ಲಿ ದರ್ಶನ ಕೊಟ್ಟು ನೀವು ಒಲೆಯಾಗಿ ಉಪಯೋಗಿಸಿದ ಕಲ್ಲಿನಲ್ಲಿ ನಾನು ನೆಲೆಸಿದ್ದೇನೆ. ಹಾಗಾಗಿ ಇಲ್ಲಿ ದೇವಾಲಯವನ್ನು ಕಟ್ಟಿಸಿ. ನಿಮಗೆ ಶುಭವಾಗಲಿ. ಎಂದು ಆಶೀರ್ವದಿಸಿ ಅಂತರ್ಧಾನನಾದನು. ಸ್ವಾಮಿಯ ಆಜ್ಞೆಯಂತೆ ವ್ಯಾಪಾರಿಗಳು ಅಲ್ಲಿ ದೇವಾಲಯವನ್ನು ಕಟ್ಟಿಸಿದರು. ಇನ್ನೂ ಕೆಲವು ಜನರ ಪ್ರಕಾರ, ವಿಜಯನಗರದ ಸಾಮಂತರಾಜ ಮಧುಗಿರಿಯ ಪ್ರಭುಗಳು ದಳಗಳೆಂದು ಕರೆಯಲ್ಪಡುವ ದೊಡ್ಡದಾದ ಸೇನಾ ತುಕಡಿಯನ್ನು ಇಲ್ಲಿ ನಿಯೋಜಿಸಿದ್ದರು. ಪೆನುಗೊಂಡ ರಾಜ್ಯದ ಮೇಲೆ ನಡೆದ ಯುದ್ಧದಲ್ಲಿ ಆ ದೊಡ್ಡದಳದ ಸೈನಿಕರು ಹೋರಾಡಿ ಜಯ ಗಳಿಸಿದ್ದಕ್ಕಾಗಿ ಈ ಊರಿಗೆ ದೊಡ್ಡದಾಳವಟ್ಟ ಎಂದು ಹೆಸರಿಟ್ಟರು ಎಂದು ಪ್ರತೀತಿ.


ವಿಶಾಲ ಜಾಗದಲ್ಲಿ ವಿಜಯನಗರ ಹೊಯ್ಸಳ ಶೈಲಿಯಲ್ಲಿ ನಿರ್ಮಿತವಾದ ಈ ದೇಗುಲ 50 ಅಡಿ ಎತ್ತರದ ರಾಜಗೋಪುರವನ್ನು ಹೊಂದಿದೆ. ದೇವಾಲಯದ ಗೋಪುರದ ಒಳಗೆ ಪ್ರವೇಶಿಸಿದರೆ ಸ್ವಾಮಿಯ ಸೇವೆಗಾಗಿ ಸದಾ ಕಾಲ ಸಿದ್ಧನಾಗಿ ಕೂತಿರುವ ಗರುಡ ಸ್ವಾಮಿ ಕಾಣಸಿಗುತ್ತಾನೆ. ಗರುಡನನ್ನು ನಮಸ್ಕರಿಸಿ ಒಳಹೋದರೆ ಗಣೇಶ, ಸರಸ್ವತಿ, ಹನುಮಂತ ಸೇರಿದಂತೆ ಸುತ್ತಲೂ ಸುಂದರವಾದ ದೇವರ ವಿಗ್ರಹಗಳು ಕಾಣಸಿಗುತ್ತವೆ. ದೇವಾಲಯದ ಇನ್ನೊಂದು ಭಾಗದಲ್ಲಿ ನವಗ್ರಹಗಳ ಸನ್ನಿಧಿ ಇದೆ. ದೇವಾಲಯದ ಹೊರ ಆವರಣದಿಂದ, ಗರ್ಭಗುಡಿಗೆ ಹೊಂದಿಕೊಂಡಿರುವ ಒಳ ಆವರಣಕ್ಕೆ ಪ್ರವೇಶಿಸಿದರೆ ಪ್ರಶಾಂತವಾಗಿ ಕುಳಿತಿರುವ ಸ್ವಾಮಿಯ ದಿವ್ಯ ದರ್ಶನ ಕಂಡು ಜೀವನ ಪುಳಕಿತಗೊಳ್ಳುತ್ತದೆ. ದೇಗುಲಕ್ಕೆ ಹೊಂದಿಕೊಂಡಂತೆಯೇ ಇದರ ಪಕ್ಕದಲ್ಲಿ ಇನ್ನೊಂದು ಲಕ್ಷ್ಮಿ ದೇವಾಲಯ ಇದೆ. ದೇವರ ಮುಂದೆ ತಗ್ಗಿ-ಬಗ್ಗಿ ನಡೆಯಬೇಕು ಎಂಬ ಉದ್ದೇಶದಿಂದ ಅಷ್ಟೇನೂ ಎತ್ತರವಿಲ್ಲದ ಕಿರಿದಾದ ಬಾಗಿಲನ್ನು ದಾಟಿ ಲಕ್ಷ್ಮಿ ದೇವಾಲಯಕ್ಕೆ ಪ್ರವೇಶಿಸಿ ಲಕ್ಷ್ಮಿ ದೇವಾಲಯ ದರ್ಶನ ಮಾಡಿದರೆ ಜೀವನ ಧನ್ಯ. ನೂರಾರು ವರ್ಷದಿಂದ ಭಕ್ತರ ಕೋರಿಕೆಗಳನ್ನುತೀರಿಸುತ್ತಾ ಇಲ್ಲಿಯೇ ನೆಲೆಸಿರುವ ಸ್ವಾಮಿಗೆ ಪ್ರತಿವರ್ಷ ಆಷಾಢ ಮಾಸದಲ್ಲಿ ವಿಶೇಷ ಬ್ರಹ್ಮರಥೋತ್ಸವ ನಡೆಯುತ್ತದೆ.
ದೇವಾಲಯದ ಪಕ್ಕದಲ್ಲೇ ಇತಿಹಾಸ ಪ್ರಸಿದ್ಧ ಕಲ್ಯಾಣಿ ಇದೆ. ಸ್ವಲ್ಪ ದೂರದಲ್ಲಿಯೇ ಸುಂದರ ಮೂರ್ತಿಯ ಶಿವನ ದೇವಾಲಯವಿದೆ. ಮಧುಗಿರಿಯಿಂದ ದೊಡ್ಡದಾಳವಟ್ಟಕ್ಕೆ ಬಸ್ ಸಂಚಾರ ಇದೆಯಾದರೂ ಆದಷ್ಟು ಸ್ವಂತ ವಾಹನದಲ್ಲಿ ಬರುವುದು ಉತ್ತಮ.

Leave a Comment

Your email address will not be published. Required fields are marked *

Translate »
Scroll to Top