ಕೊಪ್ಪಳ : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್ ತಂಗಡಗಿ ಅವರು ಆಗಸ್ಟ್ 2ರಂದು ಗ್ರಾಮೀಣ ಭಾಗದಲ್ಲಿ ಪ್ರವಾಸಕೈಗೊಂಡರು.
ತುಂಗಭದ್ರಾ ಡ್ಯಾಮನಿಂದ ನೀರನ್ನು ನದಿಗೆ ಬಿಟ್ಟಿದ್ದರಿಂದ ಉಂಟಾದ ಹಾನಿಯನ್ನು ಪರಿಶೀಲಿಸಿದರು. ಮೊದಲಿಗೆ ಕಾರಟಗಿ ತಾಲೂಕಿನ ಬೆನ್ನೂರ, ಹುಲೇನೂರ ಗ್ರಾಮಗಳಿಗೆ ಭೇಟಿ ನೀಡಿದರು. ನದಿ ದಂಡೆಯ ಮೇಲಿನ ಈ ಗ್ರಾಮಗಳಲ್ಲಿನ ಜಮೀನಿಗೆ ನದಿ ನೀರು ಹರಿದು ಅಗಿರುವ ಹಾನಿಯನ್ನು ಪರಿಶೀಲಿಸಿದರು.
ನಂತರ ಸಚಿವರು, ಗಂಗಾವತಿ ತಾಲೂಕಿನ ಚಿಕ್ಕಜಂತಗಲ್ ಬಳಿ ಕಂಪ್ಲಿ ಸೇತುವೆ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪುರಾತನ ಕಂಪ್ಲಿ-ಗಂಗಾವತಿ ಸೇತುವೆಯನ್ನು ಎತ್ತರಿಸಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪ್ರತಿ ವರ್ಷ ಮಳೆಗಾಲದಲ್ಲಿ ಮುಳುಗಡೆಯಾಗುವ ಕಂಪ್ಲಿ-ಗಂಗಾವತಿ ಪುರಾತನ ಸೇತುವೆ ಎತ್ತರಿಸಲು ಈಗಾಗಲೇ ಕೆಆರ್‌ಡಿಸಿಎಲ್ ಡಿಪಿಆರ್ ಸಿದ್ದಪಡಿಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕಾಮಗಾರಿಗೆ ಹಣ ಮೀಸಲಿರಿಸಿ ಸೇತುವೆಯನ್ನು ಎತ್ತರಿಸಲಾಗುವುದು. ಎಕೋ ಮಾದರಿ ಅನುಸರಿಸಿ ಕಂಪ್ಲಿ ಸೇತುವೆಯನ್ನು ನಿರ್ಮಿಸಲಾಗುವುದು. ತುಂಗಭದ್ರ ಜಲಾಶವು ಭರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಗೆ ಸುಮಾರು 2 ಲಕ್ಷ ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದೆ. ನದಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿಸಿದರೆ ಮಾತ್ರ ಈ ಭಾಗದಲ್ಲಿ ಹೆಚ್ಚಿನ ಅವಘಡಗಳಾಗುತ್ತವೆ. ಸದ್ಯ ನದಿ ಪಾತ್ರದಲ್ಲಿ ಅಂತಹ ಅನಾವುತಗಳು ಸಂಭವಿಸಿರುವುದಿಲ್ಲ ಎಂದರು.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಿಂದಾಗಿ ಡ್ಯಾಂಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಡ್ಯಾಂ ಭರ್ತಿಯಾಗಲು ಇನ್ನು 8 ಅಡಿ ಮಾತ್ರ ಬಾಕಿ ಇದೆ. ಒಳಹರಿವಿನ ಪ್ರಮಾಣದಲ್ಲಿಯೇ ಹೊರ ಹರಿವು ಮಾಡಲಾಗುತ್ತಿದ್ದು, ಒಳಹರಿವು ಕಡಿಮೆಯಾದ ತಕ್ಷಣ ಹೊರ ಹರಿವು ನಿಲ್ಲಿಸಲಾಗುತ್ತದೆ. ಈ ಹಂಗಾಮಿನಲ್ಲಿ ನೀರನ್ನು ಸಂರಕ್ಷಿಸಿ ಬೇಸಿಗೆ ಬೆಳೆಗೂ ನೀರನ್ನು ಉಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರೈತರು ಬೇಗನೆ ನಾಟಿ ಮಾಡಬೇಕು. ಬೀಜ ಗೊಬ್ಬರದ ಕೊರತೆಯಾಗದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದರು.
ಈ ಸಂದರ್ಭದಲ್ಲಿ ಗಂಗಾವತಿ ತಹಸೀಲ್ದಾರರಾದ ಯು.ನಾಗರಾಜ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗ್ರಾ.ಪಂ. ಪಿಡಿಓಗಳು, ಮುಖಂಡರಾದ ಶರಣೇಗೌಡ ಪಾಟೀಲ್, ಕೆ.ಸಿದ್ದನಗೌಡ, ರೇಣುಕಾಗೌಡ, ಬಸಯ್ಯಸ್ವಾಮಿ ಹೇರೂರು, ಮಹಮದ್ ರಫಿ, ಬಾಪುಗೌಡ, ವಿಜಯಕುಮಾರ, ರಿಯಾಜ್, ರುದ್ರಗೌಡ ನಂದಿಹಳ್ಳಿ, ವಿವಿಧ ಗ್ರಾಮಗಳ ಗ್ರಾ.ಪಂ.ಅಧ್ಯಕ್ಷರು, ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.