ಕುರುಗೋಡು ಪಾಳೆಯಗಾರರ ಅಪರೂಪದ ಅಪ್ರಕಟಿತ  ಶಿಲಾಶಾಸನ ಶೋಧನೆ

ವಿಜಯನಗರ ತಿರುಗಾಟ ಸಂಶೋಧನ ತಂಡದಿಂದ ಬೃಹತ್ ಬಂಡೆಗಲ್ಲು ಶಾಸನ ಪತ್ತೆ

ಕುರುಗೋಡು :   ಕುರುಗೋಡು ಪಾಳೆಯಗಾರರ ಅಪರೂಪದ ಬೃಹತ್ ಬಂಡೆಗಲ್ಲಿನ ಶಾಸನವನ್ನು ನಿರುತ್ತ ಪ್ರಾಚಾರ್ಯರಾದ ಎನ್ ವೈ ಹನುಮಂತಪ್ಪರವರ ನೇತ್ರತ್ವದಲ್ಲಿ ಶೋಧಿಸಲಾಗಿದೆ. ಈ ಶಾಸನವು ಕುರುಗೋಡು ಕಂಪ್ಲಿ ರಸ್ತೆಯ ಉತ್ತರಕ್ಕೆ ಇರುವ ಎತ್ತರವಾದ ಬೆಟ್ಟದ ಕೆಳಗೆ ಇರುವುದನ್ನು  ಶ್ರೀ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಂಶೋಧನಾರ್ಥಿ ವೀರಾಂಜನಯ್ಯ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ರವಿ ಹಾಗೂ ಸ್ಥಳೀಯ ಪತ್ರಕರ್ತರಾದ ವೀರಭದ್ರಗೌಡ ಮತ್ತು ಕರಿಬಸವ ಅವರ ಸಹಕಾರದಿಂದ ಪತ್ತೆಹಚ್ಚಲಾಗಿದೆ.

ವಿಜಯನಗರ ತಿರುಗಾಟ ಸಂಶೋಧನ ತಂಡದ ಸದಸ್ಯರು ತೆರಳಿ ಪಡಿಯಚ್ಚನ್ನು ತಂದು ಇದೊಂದು ಪಾಳೆಯಗಾರರ ಕುರಿತಾಗಿರುವ ಅದರಲ್ಲೂ ಬೃಹತ್ಗಾತ್ರದ ಬಂಡೆಗಲ್ಲು ಶಾಸನವು ಅಪರೂಪದ್ದಾಗಿದೆ ಪಾಳೆಯಗಾರರ ಹಾಗೂ ರಾಜ ಪುರೋಹಿತರ ವಂಶಾವಳಿಯ ಮಾಹಿತಿಯನ್ನು ಒದಗಿಸುತ್ತದೆ. ಇದು ತುಂಬಾ ಮಹತ್ವವಾದ ದಾನ ಶಿಲಾಶಾಸನವಾಗಿದೆ ಎಂದು ತಂಡದ ಸದಸ್ಯರಾದ ಪ್ರೊ. ತಿಪ್ಪೇಸ್ವಾಮಿ ತಿಳಿಸಿದ್ದಾರೆ.

ಬೃಹತ್ ಬಂಡೆಗಲ್ಲು ಶಾಸನದ ಮಾಹಿತಿಯ ವಿವರ :

 

           ಈ ಶಾಸನದಲ್ಲಿ ವಿಶೇಷವಾಗಿ ಪಾಳೆಯಗಾರರ ಮತ್ತು ಅವರ ಪುರೋಹಿತರ ಮಾಹಿತಿಯುಳ್ಳ ಭೂಧಾನದ ಮಾಹಿತಿಯಿದೆ. ಆರಂಭದಲ್ಲಿ ಗಣೇಶನ ಸ್ತುತಿಯಿದ್ದು ಶಾಸನದ ಶ್ಲೋಕದ ಬಳಿಕ ಈ ರೀತಿಯಾಗಿ ವಿವರವನ್ನು ಒದಗಿಸುತ್ತದೆ. ಶಾಲಿವಾಹನ ಶಕ ವರುಷ 1550ನೆಯ ವಿಭವನಾಮ ಸಂವತ್ಸರ ಅಂದರೆ ಇದು ಕ್ರಿ ಶ 1628ರ ಕಾಲಾವದಿಯನ್ನು ಸೂಚಿಸುತ್ತದೆ. ಶ್ರೀ ಮಹಾನಾಯಕಾಚಾರ್ಯ ನಾಯಕ ಶಿರೋಮಣಿ ಬಿರುದಿನ ಮಿಳ ಗೋತ್ರದ ತಿಮ್ಮಿನಾಯಕನ ಮೊಮ್ಮಗ ಚಿಂತಪ್ಪ ನಾಯಕನ ಪುತ್ರರಾದ ಯಲ್ಲಪ್ಪ ನಾಯಕರು ಅವರ ಆಸ್ಥಾನದ ಪುರೋಹಿತರಾದ ಆವನಂಬ ಗೋತ್ರದ ಪುಟ್ಟಬಟ್ಟರ ಮೊಮ್ಮಗ ಚಿಕ್ಕ ಔಬಳಭಟ್ಟರ ಪುತ್ರನಾದ ಯೋಗಿಶ್ವರ ಭಟ್ಟರಿಗೆ ಶ್ರೀ ಪಂಪಾವಿರೂಪಾಕ್ಷ ಕ್ಷೇತ್ರದಲ್ಲಿ ಪೌರ್ಣಮಿ ಪುಣ್ಯಕಾಲದ ತ್ರಯೋದಶಿ ಬ 1ರ ಸೋಮವಾರದಂದು ಅವರನ್ನು ಅಳುವ ಸ್ವಾಮಿಗೆ ಒಳಿತಾಗಲೆಂದು ಕುರುಗೋಡು ಸೀಮೆಯ 15 ಗ್ರಾಮಗಳಿಗೆ ಭೂಧಾನ ನೀಡಿದ ವಿವರವು ಈ ಶಾಸನದಲ್ಲಿ ಉಲ್ಲೇಖವಾಗಿದೆ.

ಶಾಸನದಲ್ಲಿ ಉಲ್ಲೇಖವಾದ 15 ಗ್ರಾಮಗಳು:

       ಬೃಹತ್ ಬಂಡೆಗಲ್ಲು ಶಾಸನವು ಸಹಜವಾಗಿರುವ ಕಲ್ಲುಬಂಡೆಗೆ ಅಕ್ಷರಗಳನ್ನು ಕೊರೆಯಲಾಗಿದೆ. 19 ಸಾಲುಗಳುಳ್ಳ ಶಾಸನದ ಈ ಬಂಡೆಯೂ ತಳಭಾಗದಿಂದ 17 ಅಡಿ 7 ಇಂಚು ಎತ್ತರವಾಗಿದ್ದು, 13 ಅಡಿ ಅಗಲವಾಗಿರುವ ಶಾಸನ ಕನ್ನಡ ಲಿಪಿಯಲ್ಲಿದೆ. ವಿಶೇಷವಾಗಿ ನಮೂದಾಗಿರುವ ಬಹುತೇಖ ಅಕ್ಷರಗಳು 6 ರಿಂದ 8 ಇಂಚು ಎತ್ತರವಾಗಿದ್ದು ಹಾಗೂ 6 ಇಂಚು ಅಗಲವಾಗಿವೆ. ಇತರೆ ಶಾಸನಗಳಿಗಿಂತಲೂ ತುಂಬಾ ಭಿನ್ನವಾಗಿ ದಪ್ಪನೆಯ ಅಕ್ಷರಗಳಿಂದ ಕೂಡಿದೆ ಎಂದು ತಂಡದ ಸದಸ್ಯರಾದ ಡಾ.ಗೋವಿಂದ ಅವರು ತಿಳಿಸಿದ್ದಾರೆ.

 

         ಕುರುಗೋಡು ಸೀಮೆಯಲ್ಲಿ ಬರುವ ಕೋಳೂರು,ಸೋಮಸಮುದ್ರ, ವದ್ದಟ್ಟಿ, ಬಾದನಹಟ್ಟಿ, ಓರುವಾಯಿ, ಗುತ್ತಗನೂರು, ಕಗ್ಗಲ್ಲು, ಹಂದಿಹಾಳ, ದಮ್ಮೂರು, ವಕ್ಕುಳ ವೀರಾಪುರ, ಹಾವಿನಹಾಳ, ಗಣಕೆಹಾಳ, ಸಿಂದಿಗೆರೆ, ಬಯಲೂರು, ಪಟ್ಟಣಸೆರಗು ಈ ಗ್ರಾಮಗಳ ಕ್ಷೇತ್ರಗಳಿಂದ ಬoದಂತಹ ಅಷ್ಟಭೋಗ ತೇಜಗಳನ್ನು ಬಳಸಿ ಆಚಂದ್ರಾರ್ಕವಾಗಿಯೂ ಪುರೋಹಿತರು ತಮ್ಮ ಪುತ್ರ ಪೌತ್ರರು ಹಾಗೂ ವಂಶ ಪರಂಪರವಾಗಿ ಪೂಜಾರಿಕೆಯನು ಮಾಡಲು ಬರೆಸಿಕೊಟ್ಟ ಶಾಸನವು ಇದಾಗಿದೆ.

          ಸಾಮ್ರಾಟ ಅಶೋಕನು ಹುಟ್ಟು ಕಲ್ಲು ಗುಂಡುಗಳಿಗೆ ಶಾಸನ ಬರೆಸಿದ ಮಾದರಿಯಲ್ಲೇ ಈ ಶಾಸನವನ್ನು ಬರೆಸಲಾಗಿದೆ. ಇದು ಎತ್ತರಕ್ಕಿಂತಲೂ ಹೆಚ್ಚು ಅಗಲವಾಗಿದೆ. ಈ ವಿಶೇಷ ಶಾಸನವು ನೈಸರ್ಗಿಕ ವೈಫರಿತ್ಯಗೆ ಒಳಗಾಗಿ ಹಾಗೂ ಈ ಭಾಗದಲ್ಲಿ ಕಲ್ಲು ಗಣಿಗಾರಿಕೆ ನಡಿಯುತ್ತಿದ್ದರಿಂದ  ವಿನಾಶದ ಅಂಚಿಗೆ ತಲುಪಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಸಂರಕ್ಷಿಸಬೇಕಾಗಿದೆ ಎಂದು ತಂಡದ ಮತ್ತೋರ್ವ ಸದಸ್ಯರಾದ ಡಾ.ಕೃಷ್ಣಗೌಡ ಅವರು ತಿಳಿಸಿದ್ದಾರೆ.

 

             ಶಾಸನ ಪಡಿಹಚ್ಚು ತೆಗೆಯುವ ವೇಳೆ ಜನಪರ ಕಾಳಜಿಯ ತಹಶೀಲ್ದಾರ ಎಂದೆ ಕೀರ್ತಿ ಪಡೆದ ಕೆ.ರಾಘವೇಂದ್ರರಾವ್ ಮತ್ತು ತಾಲ್ಲೂಕು ಆಡಳಿತದ ಇತರೆ ಅಧಿಕಾರಿಗಳು ಆಗಮಿಸಿ ಈ ಶಾಸನ ಸಂರಕ್ಷಣೆಗೆ ಕ್ರಮವಹಿಸುತ್ತೇವೆ ಎಂದು ತಿಳಿಸಿದರು.

           ಈ ಬೃಹತ್ ಬಂಡೆಗಲ್ಲು ಶಾಸನ ಪಟತ್ತೆಹಚ್ಚುವಲ್ಲಿ ವಿ ಎಸ್ ಕೆ ವಿ ವಿ ಯ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಶೋಧನಾರ್ಥಿ ವೀರಾಂಜಿನೇಯ ಕೆ ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ರವಿಕುಮಾರ ಹಾಗೂ ಸ್ಥಳೀಯ ಕರಿಬಸವ ಅವರ ಸಹಕಾರದಿಂದ ಈ ವಿಶೇಷ ಶಾಸನ ಪತ್ತೆ ಹಚ್ಚಲಾಗಿದೆ. ಈ ಶಾಸನದ ಪಡಿಯಚ್ಚನ್ನು ತೆಗೆದ ವಿಜಯನಗರ ತಿರುಗಾಟ ಸಂಶೋಧನ ತಂಡದ ಸದಸ್ಯರಾದ ವಿ ಎಸ್ ಕೆ ವಿ ವಿ ಯ ಪ್ರೊ ತಿಪ್ಪೇಸ್ವಾಮಿ. ಕನ್ನಡ ವಿ ವಿ ಯ ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ.ಗೋವಿಂದ, ದೃಶ್ಯಕಲಾವಿಭಾಗದ  ಡಾ.ಕೃಷ್ಣೆಗೌಡ, ಹಾಗೂ ಡಾ. ಗೋವರ್ಧನ್ ಅವರು ಶಾಸನವನ್ನು ಓದಿ ವಿಶ್ಲೇಷಿಸಿದ್ದಾರೆ.

 

        ಈ ಶಾಸನ ಪತ್ತೆಹಚ್ಚಿದ್ದಕ್ಕಾಗಿ ವಿ ಎಸ್ ಕೆ ಯು ವಿ ವಿ ಯ ಪ್ರೊ ಸಾಹೇಬ್ ಅಲಿ ನಿರಗುಡಿ, ಕುಲಸಚಿವ ಎಸ್ ಎನ್ ರುದ್ರೇಶ್, ಕನ್ನಡ ವಿ ವಿ ಕುಲಪತಿ ಪ್ರೊ ಪರಮಶಿವಮೂರ್ತಿ ಕುಲಸಚಿವ ಪ್ರೊ ಟಿ ಪಿ ವಿಜಯ ಹಾಗೂ ಸಂಗೀತ ಮತ್ತು ನೃತ್ಯ ವಿಭಾಗದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top