ಬೆಂಗಳೂರು : ಜನ ಕಲ್ಯಾಣಕ್ಕಾಗಿ ವಿವಿಧ ನಿಗಮಗಳಿಗೆ ನೀಡಲಾಗಿರುವ ಅನುದಾನ ನೇರವಾಗಿ ಫಲಾನುಭವಿಗಳಿಗೆ ಮುಟ್ಟಬೇಕೆನ್ನುವ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿದ್ದು, ಇದನ್ನು ನಾನೇ ಸ್ವತ: ಮೇಲ್ವಿಚಾರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಸಮಾಜಕಲ್ಯಾಣ ಇಲಾಖೆ ವತಿಯಿಂದ ಕಲ್ಯಾಣ ಮಿತ್ರ ಸಹಾಯವಾಣಿ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಬದಲಾವಣೆಯ ಕಾಲ ಪ್ರಾರಂಭವಾಗಿದ್ದು, ಸಬೂಬುಗಳ ಕಾಲ ಮುಗಿದಿದೆ. ಶಿಕ್ಷಣ, ಆದಾಯ ಹೆಚ್ಚಳ, ಸ್ವಾಭಿಮಾನಿ ಬದುಕಿಗೆ ಬೇಕಾಗುವ ಎಲ್ಲ ವ್ಯವಸ್ಥೆಗಳನ್ನು ಸರ್ಕಾರ ಮಾಡುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಪಾದರಸದಂತೆ ಕೆಲಸ ಮಾಡಬೇಕು. ಕೇವಲ ಘೋಷಣೆಯಲ್ಲ, ಕ್ರಿಯೆಯಿಂದ ಈ ವರ್ಗದ ಅಭಿವೃದ್ಧಿ ಸಾಧ್ಯ ಇದು. ಫಲಾನುಭವಿಗಳಿಗೆ ಮೀಸಲಿಟ್ಟಿರುವ ಹಣ ಅವರಿಗೆ ಯಾವುದೇ ತೊಡಕುಗಳಿಲ್ಲದೇ ತಲುಪಬೇಕು ಎಂದು ತಿಳಿಸಿದರು.
ದುಡಿಮೆಯಿಂದ ಆರ್ಥಿಕತೆ ಹೆಚ್ಚುತ್ತದೆ :
ಆರ್ಥಿಕತೆ ಎಂದರೆ ಜನರ ದುಡಿಮೆ. ದುಡಿಮೆ ಹೆಚ್ಚಿದಂತೆ ಆರ್ಥಿಕತೆ ಹೆಚ್ಚುತ್ತದೆ. ತಳಹಂತದ ಕಾರ್ಮಿಕರು ದೇಶದ ಆರ್ಥಿಕತೆಯನ್ನು ಬೆಳೆಸುತ್ತಿದ್ದಾರೆ. ಕಾರ್ಮಿಕರು, ರೈತರು, ಶ್ರಮಿಕರು ಆರ್ಥಿಕತೆಯ ಪ್ರಮುಖ ಸ್ತಂಭಗಳಾಗಿದ್ದಾರೆ. ಅವರು ಜೀವನೋಪಾಯದ ಜೊತೆಗೆ ಆರ್ಥಿಕತೆಗೆ ದುಡಿಯುವಂತಾಗಬೇಕು. ಎಸ್ ಸಿ ಎಸ್ ಟಿ, ಹಿಂದುಳಿದ ವರ್ಗಗಳು ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗಿದೆ.100 ಹಾಸ್ಟೆಲ್ಗಳು, ರಾಜ್ಯದ ಶೈಕ್ಷಣಿಕ ಕೇಂದ್ರಗಳಲ್ಲಿ 1000 ಕೊಠಡಿಗಳ ವಿದ್ಯಾರ್ಥಿನಿಲಯಗಳ ಕ್ಲಸ್ಟರ್ ನಿರ್ಮಾಣ, ಉದ್ಯೋಗಸ್ಥ ಮಹಿಳೆಯರಿಗೆ ವಸತಿ ನಿಲಯಗಳನ್ನು ನಿರ್ಮಿಸಲಾಗುವುದು. ರಾಜ್ಯದ ಒಟ್ಟು ಸಾಕ್ಷರತೆ ಶೇ.75 ರಷ್ಟಿದ್ದು, ಅದರಲ್ಲಿ ಎಸ್ ಸಿ ಎಸ್ ಟಿ ಜನಾಂಗದವರು 65 % ಇದ್ದಾರೆ. ಇದನ್ನು ಸುಧಾರಿಸಬೇಕು ಎಂದರು.
ಎಸ್ ಸಿ ಎಸ್ ಟಿ ಜನರ ಅಭಿವೃದ್ಧಿಗೆ 5 ವರ್ಷದ ಯೋಜನೆ :
ಎಸ್ ಸಿ ಎಸ್ ಟಿ ಜನರ ಅಭಿವೃದ್ಧಿಗೆ 5 ವರ್ಷದ ಯೋಜನೆ ರೂಪಿಸಬೇಕು. ಆರ್ಥಿಕ ನೆರವು ಒದಗಿಸಲು ಅ್ಯಂಕರ್ ಬ್ಯಾಂಕ್ ವ್ಯವಸ್ಥೆ ಮಾಡಲಾಗುತ್ತಿದೆ. ಎಸ್ ಸಿ ಎಸ್ ಪಿ –ಟಿಎಸ್ ಪಿ ಯೋಜನೆಗಳಿಗೆ 28 ಸಾವಿರ ನೀಡಲಾಗಿದೆ.. 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಜಮೀನು ಖರೀದಿಗೆ 20 ಲಕ್ಷ ರೂ., ಎಸ್ ಸಿ ಎಸ್ ಟಿ ಯುವಕರಿಗೆ ಸ್ವಯಂ ಉದ್ಯೋಗದ ವ್ಯವಸ್ಥೆ, ಮನೆ ನಿರ್ಮಾಣಕ್ಕೆ 2 ಲಕ್ಷ ರೂ. ಈ ಎಲ್ಲ ಯೋಜನೆಗಳು ಜನರಿಗೆ ತಲುಪಿಸಲು ಅಧಿಕಾರಿಗಳ ಸಹಕಾರ ಅವಶ್ಯಕ. ಇಂದು ಉದ್ಘಾಟನೆಗೊಂಡಿರುವ ಸಹಾಯವಾಣಿ ಒಳ್ಳೆಯ ಕೆಲಸವಾಗಿದೆ, ದೂರದಿಂದ ಕರೆಮಾಡಿದವರಿಗೆ ಸಹಾಯ ಮಾಡುವ ಉತ್ತಮ ವ್ಯವಸ್ಥೆಯಾಗಬೇಕು. ಇಲಾಖೆಯ ಅಧಿಕಾರಿಗಳು ಬದಲಾವಣೆಯ ಹರಿಕಾರರಾಗಬೇಕು ಎಂದರು.