ತುಮಕೂರು: ನಾಡಿನ ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಆಶ್ರಯ ಶಿಕ್ಷಣ ನೀಡಿ ಭವಿಷ್ಯದ ಮೂರ್ತ ಸ್ವರೂಪಗಳನ್ನಾಗಿ ತಯಾರು ಮಾಡಿದ ಮಹಾನ್ ಚೇತನ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ರವರಿಗೆ ದೇಶದ ಅತ್ಯುತ್ತಮ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದ ವತಿಯಿಂದ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್ ಅವರಿಗೆ ಮನವಿ ಮಾಡಿದರು.
ನಗರದ ಸಿದ್ಧಗಂಗಾ ಮಠದಲ್ಲಿ ನಡೆದ ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿ ರವರ 118ನೇ ಜಯಂತಿ ಮತ್ತು ಗುರುವಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಾವುದೇ ಜಾತಿ, ಧರ್ಮ, ಬೇಧ-ಭಾವ ಇಲ್ಲದೆ ಎಲ್ಲ ವರ್ಗದ ಮಕ್ಕಳಿಗೆ ಅನ್ನ, ವಿದ್ಯಾದಾನ ಮಾಡಿ ಇಡೀ ದೇಶಕ್ಕೆ ದೊಡ್ಡ ಸಂದೇಶ ನೀಡಿರುವ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಸಂಬAಧ ಪ್ರಧಾನಿ ಮೋದಿ ಅವರೊಂದಿಗೆ ಚರ್ಚಿಸುವಂತೆ ಕೇಂದ್ರ ರಕ್ಷಣಾ ಸಚಿವರಿಗೆ ಕೋರಿದರು.
ಸಿದ್ಧಗಂಗಾ ಕ್ಷೇತ್ರ ಒಂದು ಪವಿತ್ರವಾದ ಕ್ಷೇತ್ರ. ಎಲ್ಲ ಧರ್ಮಗಳನ್ನು ಒಟ್ಟಿಗೆ ಕೊಂಡೊಯ್ಯುವ ಮೂಲಕ ಎಲ್ಲರಲ್ಲೂ ಧಾರ್ಮಿಕ ಭಕ್ತಿ ಭಾವವನ್ನು ಶ್ರೀಗಳು ಮೂಡಿಸಿದ್ದಾರೆ. ಶ್ರೀಗಳ ಆಚಾರ, ವಿಚಾರ, ಅವರು ಹಾಕಿಕೊಟ್ಟ ದಾರಿ ನಮ್ಮ ಬದುಕಿಗೆ ದೊಡ್ಡ ಶಕ್ತಿ ತುಂಬಿದೆ ಎಂದರು. ದೇಹದ ಹಸಿವಿಗೆ ಅನ್ನ ನೀಡಿ, ಜ್ಞಾನದ ಹಸಿವಿಗೆ ಅಕ್ಷರ ನೀಡಿ ಲಕ್ಷಾಂತರ ಬಡ ಮಕ್ಕಳ ಬದುಕಿಗೆ ಆಶಾಕಿರಣವಾಗಿರುವ ಶ್ರೀಗಳ ಸಮಾಜ ಸೇವೆ, ದೂರದೃಷ್ಟಿ ಇಡೀ ವಿಶ್ವಕ್ಕೆ ಮಾರ್ಗದರ್ಶನವಾಗಿದೆ ಎಂದರು.
ಶ್ರೀಮಠದಲ್ಲಿ ಯಾವುದೇ ರೀತಿಯ ಬೇಧ ಭಾವ ಇಲ್ಲದೆ ಎಲ್ಲ ವರ್ಗದ ಮಕ್ಕಳನ್ನು ಮೂರ್ತ ಸ್ವರೂಪರನ್ನಾಗಿ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಶ್ರೀಗಳು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಶ್ರೀ ಸಿದ್ಧಲಿಂಗಸ್ವಾಮೀಜಿ ರವರು ಶ್ರೀಮಠವನ್ನು ಮುನ್ನಡೆಸುತ್ತಿದ್ದಾರೆ ಎಂದರು. ಎಸ್.ಎA. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ಸರ್ಕಾರಿ ಶಾಲೆಗಳಿಗೆ ಬಿಸಿಯೂಟ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆ ಜಾರಿಗೆ ತರಲು ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳೇ ಪ್ರೇರಣೆ. ಎಸ್.ಎಂ. ಕೃಷ್ಣ ಅವರು ಶ್ರೀ ಮಠಕ್ಕೆ ಬಂದ ಸಂದರ್ಭದಲ್ಲಿ ಸಾವಿರಾರು ಮಕ್ಕಳಿಗೆ ದಾಸೋಹ ನೀಡುತ್ತಿದ್ದನ್ನು ಕಣ್ಣಾರೆ ಕಂಡು, ಶ್ರೀಮಠದ ದಾಸೋಹದ ಮಾದರಿಯಲ್ಲೇ ಎಲ್ಲ ಸರ್ಕಾರಿ ಶಾಲೆಗಳಿಗೆ ಬಿಸಿಯೂಟ ಯೋಜನೆಯನ್ನು ಜಾರಿಗೊಳಿಸಿದರು ಎಂದು ಸ್ಮರಿಸಿದರು.
ನನ್ನ ತಂದೆ-ತಾಯಿಗಳು ನನಗೆ ಡಾ. ಶ್ರೀ ಶಿವಕುಮಾರಸ್ವಾಮೀಜಿ ರವರ ಹೆಸರಿರುವ ಶಿವಕುಮಾರ ಎಂಬ ಹೆಸರನ್ನು ಇಟ್ಟಿದ್ದಾರೆ. ಇದು ನನ್ನ ಭಾಗ್ಯ ಎಂದರು.
ಶ್ರೀಗಳ ದರ್ಶನ ಭಾಗ್ಯ ನಮ್ಮೆಲ್ಲರಿಗೂ ದೊರೆತಿದೆ. ಇದೊಂದು ಪವಿತ್ರವಾದ ಗುರುವಂದನಾ ಕಾರ್ಯಕ್ರಮ. ಗುರುವಿನಿಂದ ನಮ್ಮ ಬಂಧುಗಳು, ಗುರುವಿನಿಂದಲೇ ಮುಕ್ತಿ ಎಂದು ಅವರು ಹೇಳಿದರು.
ಅಮ್ಮನ ನೆನಪು ಪ್ರೀತಿಯ ಮೂಲ, ಗುರುವಿನ ನೆನಪು ಜ್ಞಾನದ ಮೂಲ, ಭಕ್ತಿಯ ನೆನಪು ದೇವರ ಮೂಲ. ಈ ಮೂರರ ನೆನಪು ಮೋಕ್ಷದ ಮೂಲ ಎಂದ ಅವರು, ನಮ್ಮ ಜತೆ ಗುರು ಇಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದರು.
ಸಮಾರAಭದಲ್ಲಿ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿ, ಕಿರಿಯ ಶ್ರೀಗಳಾದ ಶಿವಸಿದ್ಧೇಶ್ವರ ಸ್ವಾಮೀಜಿ, ಕೇಂದ್ರದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರದ ರೈಲ್ವೆ ಸಚಿವ ವಿ. ಸೋಮಣ್ಣ, ಶಾಸಕರಾದ ಎಸ್.ಆರ್. ಶ್ರೀನಿವಾಸ್, ಸುರೇಶ್‌ಗೌಡ, ಜ್ಯೋತಿಗಣೇಶ್, ಚಿದಾನಂದಗೌಡ, ಡಾ. ರಂಗನಾಥ್, ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.