ಸಾಮಾರಸ್ಯ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ

ಬೆಂಗಳೂರು : ಹಂಪಿ ಹೇಮಕೂಟ ಶ್ರೀ ಗಾಯತ್ರಿ ಪೀಠ ಮಹಾ ಸಂಸ್ಥಾನ ಟ್ರಸ್ಟ್, ರಾಜ್ಯ ದೇವಾಂಗ ಸಂಘ ಆಯೋಜಿಸಿದ್ದ ಶ್ರೀ ದಯಾನಂದಪುರಿ ಸ್ವಾಮೀಜಿಯವರ 33ನೇ ಪೀಠಾರೋಹಣ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮಾತುಗಳು: ಶ್ರೀ ದಯಾನಂದಪುರಿ ಸ್ವಾಮೀಜಿಗಳು ಪೀಠಾಧ್ಯಕ್ಷರಾದ ನಂತರ ಕಳೆದ 32 ವರ್ಷಗಳಿಂದ ದೇವಾಂಗ ಸಮಾಜದ ಅಭಿವೃದ್ಧಿಗೆ ನಿರಂತರ ಕೆಲಸ ಮಾಡಿದ್ದಾರೆ. ಶ್ರೀಗಳು ಅತ್ಯಂತ ಸರಳ ಸ್ವಭಾವದವರು. ಸಮಾಜದ ಬಗೆಗೆ ಅಪಾರ ಕಾಳಜಿ ಹೊಂದಿದ್ದಾರೆ. ಸಮಾಜದಲ್ಲಿ ಸಮಾನತೆ ಸ್ಥಾಪನೆಯಾದಾಗ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯವಾಗುತ್ತದೆ. ನಾಡು ಹಾಗೂ ದೇಶದಲ್ಲಿ ಶಾಂತಿ, ನೆಮ್ಮದಿ, ಮಾನವೀಯತೆ, ಸಾಮಾರಸ್ಯ ಇದ್ದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಯಾರೂ ಕೂಡ ನಾನು ಇದೇ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿ ಹುಟ್ಟಿಲ್ಲ, ಹುಟ್ಟಿದ ಮೇಲೆ ಮನುಷ್ಯರಾಗಿ ಬದುಕುವುದು ಮುಖ್ಯ. ಅದಕ್ಕಾಗಿ ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮವಾವುದಯ್ಯ? ಎಂದಿದ್ದಾರೆ. “ಇವನಾರವ, ಇವನಾರವ, ಇವನಾವರ ಎಂದೆಣಿಸದಿರಯ್ಯ, ಇವ ನಮ್ಮವ, ಇವ ನಮ್ಮವ, ಇವ ನಮ್ಮವ ಎಂದೆಣಿಸಯ್ಯ, ಎನ್ನ ಮನೆಮಗನೆಂದಿಣಿಸಯ್ಯ ಕೂಡಲ ಸಂಗಮದೇವ” ಎಂದು ಎಂಟೂನೂರ ಐವತ್ತು ವರ್ಷಗಳ ಹಿಂದೆ ಬಸವೇಶ್ವರರು ಹೇಳಿದ್ದರು. ಆದರೆ ಜಾತಿ ವ್ಯವಸ್ಥೆ ಇಂದು ಮತ್ತಷ್ಟು ಆಳವಾಗಿ ಬೇರು ಬಿಟ್ಟಿದೆ.

ಜಾತಿ ವ್ಯವಸ್ಥೆ ಇರುವವರೆಗೆ ಅವಕಾಶಗಳಿಂದ ವಂಚಿತವಾದ ಜಾತಿಗಳು, ಶೋಷಿತ ಜಾತಿಗಳು ತಮ್ಮ ಹಕ್ಕುಗಳಿಗಾಗಿ ಸಮಾವೇಶವನ್ನು ಮಾಡುವುದು ಅನಿವಾರ್ಯ ಮತ್ತು ನ್ಯಾಯಯುತವಾದುದ್ದು. ಶೋಷಿತ ಜನರು ನಡೆಸುವ ಜಾತಿ ಸಮಾವೇಶಗಳು ಜಾತೀವಾದವಲ್ಲ ಎಂದು ಲೋಹಿಯಾ ಹೇಳಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಶೋಷಿತ ಜನರಿಗಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮಂತ್ರಗಳನ್ನು ನೀಡಿದ್ದಾರೆ. ಇವುಗಳನ್ನು ಪಾಲಿಸಿದರೆ ಜಾತಿ ವ್ಯವಸ್ಥೆಯ ನಿರ್ಮೂಲನೆ ಸಾಧ್ಯ. ಶೋಷಿತ ಜನರಿಗೆ ಮತ ಚಲಾಯಿಸುವ ಹಕ್ಕು ಸಿಕ್ಕರೆ ಸಾಲದು ಅಧಿಕಾರವೂ ಸಿಗಬೇಕು ಎಂದು ಬಾಬಾ ಸಾಹೇಬರು ಹೇಳಿದ್ದರು. ಸಮಾಜದ ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಹಕ್ಕುಗಳು ಸಮಾನವಾಗಿ ಹಂಚಿಕೆಯಾದಾಗ ಮಾತ್ರ ಸಮಾನತೆ ಸಾಧ್ಯ. ಸಂವಿಧಾನ ಜಾರಿಯಾದ ಮೇಲೆ ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗು ನಾಶವಾದದ್ದು. ಅಧಿಕಾರ ಯಾವುದೇ ಒಂದು ಜಾತಿಯ ಸ್ವತ್ತಲ್ಲ. ಈಗ ದೇವಾಂಗ ಸಮಾಜದ ಯಾರೊಬ್ಬರು ಸಂಸದರಿಲ್ಲ, ಮಂತ್ರಿ ಇಲ್ಲ. ನಾವು ಅಧಿಕಾರದಲ್ಲಿ ಇದ್ದಾಗ ಅಧಿಕಾರ ವಂಚಿತ ಜಾತಿಗಳನ್ನು ಗುರುತಿಸಿ, ಅವರಿಗೆ ಅಧಿಕಾರ ನೀಡುವ ಕೆಲಸ ಮಾಡಿದ್ದೆವು. ಚಾಮರಾಜನಗರದಿಂದ ಪುಟ್ಟರಂಗ ಶೆಟ್ಟಿ ಅವರನ್ನು ಚುನಾವಣೆಗೆ ನಿಲ್ಲಿಸಿ, ಗೆಲ್ಲಿಸಿ ಮಂತ್ರಿ ಮಾಡಿದ್ದೆವು. ಜಾತಿ ವ್ಯವಸ್ಥೆ ಇರುವವರೆಗೆ ಮೀಸಲಾತಿ ಇರಬೇಕು ಎಂದು ಬಾಬಾ ಸಾಹೇಬ್ ಅವರು ಪ್ರತಿಪಾದಿಸಿದ್ದರು. ಇದೇ ಕಾರಣಕ್ಕೆ ಸಂವಿಧಾನಕ್ಕೆ 73 ಮತ್ತು 74 ನೇ ತಿದ್ದುಪಡಿ ಮಾಡಿ ಹಿಂದುಳಿದ ಜಾತಿ, ವರ್ಗ, ಅಲ್ಪಸಂಖ್ಯಾತರು, ಮಹಿಳೆಯರಿಗೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೀಸಲಾತಿ ಸೌಲಭ್ಯ ಸಿಗುವಂತೆ ಮಾಡಲಾಯಿತು. ಅದು ಜಾರಿಗೆ ಬರಲು ನಮ್ಮ ಸಮಿತಿ ಕಾರಣ. ಸುಪ್ರೀಂ ಕೋರ್ಟ್ ಈ 23% ಮೀಸಲಾತಿಯನ್ನು ತೆಗೆದು ಹಾಕಿದೆ.

ಈ ದೇಶ ಯಾವುದೋ ಒಂದು ಧರ್ಮದ ಆಧಾರದ ಮೇಲೆ ರಚನೆಯಾದ ದೇಶವಲ್ಲ. ಇಲ್ಲಿ ಎಲ್ಲ ಧರ್ಮಗಳನ್ನು ಪ್ರೀತಿಸುವ, ಗೌರವಿಸುವ ಸಹಿಷ್ಣುತೆ ಇರಬೇಕು. ಸಹಿಷ್ಣುತೆ ಮತ್ತು ಸಹಬಾಳ್ವೆಯನ್ನು ನಮ್ಮ ಸಂವಿಧಾನವೇ ಬೋಧಿಸಿದೆ. ಈ ದೇಶ ಸರ್ವಜನಾಂಗದ ಶಾಂತಿಯ ತೋಟವಾಗಬೇಕು, ಇದನ್ನು ನಿರ್ಮಾಣ ಮಾಡಬೇಕಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ. ಇದರ ಜೊತೆಗೆ ಸಮ ಸಮಾಜ ನಿರ್ಮಾಣವಾಗಬೇಕು. ಕಾಯಕವೇ ಕೈಲಾಸ ಎಂದು ಬಸವಾದಿ ಶರಣರು ಹೇಳಿದ್ದರು. ಮನುಷ್ಯತ್ವ, ಮನುಷ್ಯ ಸಂಬಂಧಗಳು ಮುಖ್ಯ. ಕಾಯಿಲೆ ಬಿದ್ದಾಗ ಯಾರ ರಕ್ತ ಆದರೂ ಕೊಡಿ ಬದುಕಿದ್ರೆ ಸಾಕು ಎಂದು ಪಡೆದು, ಬದುಕಿದ ಮೇಲೆ ಜಾತಿ, ಧರ್ಮ ಎಂದು ಸ್ವಾರ್ಥಿಗಳಾದರೆ ಹೇಗೆ? ಸಮಾಜಕ್ಕಾಗಿ ಬದುಕುವ ಸ್ವಾಮೀಜಿಗಳನ್ನು ನಾವು ಇದೇ ಕಾರಣಕ್ಕೆ ಗೌರವಿಸುವುದು. ಅವರದು ನಿಸ್ವಾರ್ಥ ಬದುಕು. ಕೊರೊನಾ ಕಾಲದಲ್ಲಿ ನೇಕಾರರು, ರಿಕ್ಷಾ ಚಾಲಕರು, ಸವಿತಾ ಸಮಾಜದವರು, ಚಾಲಕರು ಮುಂತಾದ ಜನ ಕಷ್ಟದಲ್ಲಿದ್ದಾರೆ, ಅವರಿಗೆ ತಲಾ ಹತ್ತು ಸಾವಿರ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಹೇಳಿದೆ. ಆದರೆ ಅವರು ನನ್ನ ಮನವಿಯನ್ನು ಪುರಸ್ಕರಿಸಿಲ್ಲ. ಕೊರೊನಾ ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳ ಬೆಲೆ, ಕಚ್ಚಾ ಸಾಮಾಗ್ರಿ ಬೆಲೆ ಜಾಸ್ತಿಯಾಗಿ, ಉದ್ಯೋಗ ಇಲ್ಲದೆ 36 ಜನ ನೇಕಾರರು ಆತ್ಮಹತ್ಯೆಗೆ ಶರಣಾದರು. ಬಹಳ ನೋವಿನ ವಿಚಾರವಿದು. ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಿಮ್ಮೊಂದಿಗೆ ನಾನು ಸದಾ ಇರುತ್ತೇನೆ. ನಿಮ್ಮ ಸ್ವಾಭಿಮಾನವನ್ನು ಎತ್ತಿ ಹಿಡಿದು, ನಿಮ್ಮ ಬದುಕಿಗೆ ಘನತೆ ತಂದು ಕೊಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ನಾನು ನಿಮ್ಮವನೇ, ಎಲ್ಲರು ಜೊತೆಯಾಗಿ ಅಭಿವೃದ್ಧಿಯ ಕಡೆಗೆ ಸಾಗೋಣ.

Leave a Comment

Your email address will not be published. Required fields are marked *

Translate »
Scroll to Top