ಶ್ರೀ ಕೃಷ್ಣ ವಿದ್ಯಾ ಸಮೂಹ ಸಂಸ್ಥೆಯಿಂದ ಐದು ಸರ್ಕಾರಿ ಶಾಲೆಗಳ ಅಭಿವೃದ್ಧಿ ಮತ್ತು ಹಸ್ತಾಂತರ

ಸರ್ಕಾರಿ ಶಾಲೆಗಳ ದತ್ತು ಯೋಜನೆ ಮುಂದುವರೆಸುವ ಜೊತೆಗೆ ಸಿ.ಎಸ್.ಆರ್.‌ ನಿಧಿಯಿಂದ ಸರ್ವಾಂಗೀಣ ಅಭಿವೃದ್ಧಿಗೆ ಸಾಧ್ಯ – ಡಾ. ಎಂ.ಆರ್.‌ ದೊರೆಸ್ವಾಮಿ

ಬೆಂಗಳೂರು : ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದುವರೆಸುವ ಜೊತೆಗೆ ಕಾರ್ಪೋರೇಟ್‌ ಸಂಸ್ಥೆಗಳ ಸಿ.ಎಸ್.ಆರ್ ನಿಧಿಯಿಂದ ಸರ್ಕಾರಿ ಶಾಲೆಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಪಿ.ಇ.ಎಸ್.‌ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್.‌ ದೊರೆಸ್ವಾಮಿ ಹೇಳಿದ್ದಾರೆ.

 

ಬನಶಂಕರಿ ಮೂರನೇ ಹಂತದ ಐಟಿಐ ಬಡಾವಣೆಯಲ್ಲಿ ಶ್ರೀ ಕೃಷ್ಣ ವಿದ್ಯಾ ಸಮೂಹ ಸಂಸ್ಥೆಯಿಂದ ಐದು ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ ಅಭಿವೃದ್ದಿಪಡಿಸಿ ಹಸ್ತಾಂತರ ಮಾಡುವ ಮತ್ತು ವಿದ್ಯಾರ್ಥಿಗಳಿಗೆ ೧೫೦೦ ಪುಸ್ತಕ ಮತ್ತು ಬ್ಯಾಗ್‌ ವಿತರಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಈಗಾಗಲೇ ಚರ್ಚಿಸಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಸರ್ಕಾರದ ದತ್ತು ಯೋಜನೆ ಮುಂದುವರೆಸಲು ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದರು.

ರಾಜ್ಯದಲ್ಲಿ ೪೨ ಸಾವಿರ ಸರ್ಕಾರಿ ಶಾಲೆಗಳಿದ್ದು, ೫೦ ಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ೩೦ ಸಾವಿರ ಶಾಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ಮೂಲ ಸೌಕರ್ಯ ಸಮಸ್ಯೆಗಳಿವೆ. ಕಾರ್ಪೋರೇಟ್‌ ಸಂಸ್ಥೆಗಳ ನಿಧಿಯಿಂದ ನೆರವು ಪಡೆಯುವ ಸಂಬಂಧ ಸಮಿತಿ ರಚಿಸಬೇಕು. ಶಿಕ್ಷಣದ ಜೊತೆಗೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಮಾಡಿ ಡಿಜಿಟಲ್‌ ಆರೋಗ್ಯ ಕಾರ್ಡ್‌ ನೀಡಲು ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.

 

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದು, ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಹೆಚ್ಚಿನ ಹಣ ಒದಗಿಸುತ್ತಿದ್ದೇನೆ. ಉತ್ತರ ಹಳ್ಳಿಯ ಶಾಲೆಗೆ ಲಿಪ್ಟ್‌ ವ್ಯವಸ್ಥೆ ಕಲ್ಪಿಸಿದ್ದು, ಸರ್ಕಾರಿ ಶಾಲೆಯಲ್ಲಿ ಇಂತಹ ಸೌಲಭ್ಯ ಅತ್ಯಂತ ವಿರಳ. ಹುಟ್ಟು ಹಬ್ಬ, ವಿಶೇಷ ಶುಭ ಸಮಾರಂಭ, ವ್ಯಾಪಾರ, ವಹಿವಾಟಿನಲ್ಲಿ ಲಾಭ ಬಂದ ಸಂದರ್ಭದಲ್ಲಿ ಸ್ವಲ್ಪ ಮೊತ್ತವನ್ನು ಶಾಲೆಗಳ ಅಭಿವೃದ್ಧಿಗೆ ನೀಡುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಶ್ರೀ ಕೃಷ್ಣ ಸಮೂಹ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಎಂ. ರುಕ್ಮಾಂಗದ ನಾಯ್ಡು ಮಾತನಾಡಿ, ಯಾವುದೇ ಶಾಲೆಯ ಅಭಿವೃದ್ಧಿ ಶಿಕ್ಷಕರ ಮೇಲೆ ನಿಂತಿದ್ದು, ಶಿಕ್ಷಕರಿಂದಲೇ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಸಾಧ್ಯ ಎಂದರು. ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಂ.ಎಸ್.‌ ಪ್ರಸನ್ನ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram
Email
Tumblr

Leave a Comment

Your email address will not be published. Required fields are marked *

Translate »
Scroll to Top