ಕಷ್ಟ ಪಟ್ಟು ಓದುವುದಕ್ಕಿಂತ ಇಷ್ಟ ಪಟ್ಟು ಓದಿ : ಬಿ.ಎನ್. ಕೃಷ್ಣಪ್ಪ

ದೇವನಹಳ್ಳಿ: ಹಿಂದೆ ಗುರು ಇದ್ದು ಮುಂದೆ ಗುರಿ ಇದ್ದರೆ ಸಾಗುವುದು ರಣಧೀರರ ಪಡೆ ಎಂಬ ಮಾತಿನಂತೆ ವಿದ್ಯಾರ್ಥಿಗಳು ತಮ್ಮ ವ್ಯಾಸಂಗಕ್ಕೆ ಪ್ರೇರಕವಾಗುವಂತಹ ಗುರುಗಳ ಮಾರ್ಗದರ್ಶನ ಪಡೆಯಬೇಕು ಎಂದು ಬೆಂ.ಗ್ರಾ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್.ಕೃಷ್ಣಪ್ಪ ತಿಳಿಸಿದರು.

ಪಟ್ಟಣದ ಜ್ಞಾನ ಗಂಗಾ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಟ್ರಸ್ಟ್ ನ ಜ್ಞಾನ ಗಂಗಾ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಆವರಣದಲ್ಲಿ ಹಿರಿಯ ವಿದ್ಯಾರ್ಥಿಗಳಿಗೆ ಪದವಿ ಸ್ವೀಕಾರ ಮತ್ತು ಕಿರಿಯ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ತಂದೆ ತಾಯಿಗಳು ಮಕ್ಕಳಿಗೆ ಜನ್ಮ ನೀಡಿ ಪೋಷಿಸಿದರೆ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣವೆಂಬ ಬೆಳಕು ನೀಡಿ, ಸರಿ ತಪ್ಪುಗಳನ್ನು ಗುರುತಿಸಿ ಉತ್ತಮ ಭವಿಷ್ಯ ಪಡೆಯುವ ದಾರಿ ತೋರುತ್ತಾರೆ. ಸಮಾಜದಲ್ಲಿ ಸುಸಂಸ್ಕೃತರಾಗಿ, ಸತ್ಪ್ರಜೆಯಾಗಿ ಬೆಳೆಯಲು ಶಿಕ್ಷಣ ಸಂಸ್ಥೆಗಳು ಕಲಿಸಿಕೊಡುತ್ತದೆ. ವಿದ್ಯೆಯ ಜೊತೆ ವಿನಯ ಇದ್ದವನು ಸಮಾಜದಲ್ಲಿ ಪ್ರಬುದ್ಧನಾಗಿ ಉತ್ತಮ ಮಟ್ಟವನ್ನು ತಲುಪುತ್ತಾರೆ. ಬಡತನದಲ್ಲಿ ಇದ್ದರೂ ದೂರದೃಷ್ಟಿ ಇಟ್ಟುಕೊಂಡು ಶಿಕ್ಷಣ ಪಡೆದ ಬಡ ಹುಡುಗ ಮುಂದೊಂದು ದಿನ ದೇಶದ ರಾಷ್ಟ್ರಪತಿಯಾಗಿ ಯಾದರು. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಎಪಿಜೆ ಅಬ್ದುಲ್ ಕಲಾಂ ಅವರಿಗಿಂತ ಬೇರೊಂದು ಉದಾಹರಣೆ ಬೇಕಿಲ್ಲ. ಕಾಲೇಜುಗಳಲ್ಲಿ ಮಾಡುವ ಪುಣ್ಯ ಪುರುಷರ ಜಯಂತಿ, ರಾಷ್ಟ್ರೀಯ ಹಬ್ಬಗಳು, ಇಂತಹ ಸಂಭ್ರಮಾಚರಣೆಗಳು ವಿದ್ಯಾರ್ಥಿಯನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುತ್ತದೆ ಎಂದರು.

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶ್ರೇಷ್ಠ ಗುರಿಯನ್ನು ಇಟ್ಟುಕೊಂಡು ಸಾಧನೆಗೈದು ನಿಮ್ಮ ಗುರಿಗಳನ್ನು ತಲುಪಿದರೆ ಅದು ನಿಮ್ಮ ಪೋಷಕರಿಗೆ ಸಂತೋಷ ಆಗುವುದರ ಜೊತೆಗೆ ಅವರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಗಟ್ಟಿಯಾಗುತ್ತದೆ ಜೊತೆಗೆ ನಿಮಗೆ ವಿದ್ಯೆ ಕಲಿಸಿದ ಉಪನ್ಯಾಸಕರಿಗೂ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ. ವಿದ್ಯಾರ್ಥಿಗಳು ನಿಮ್ಮ ಪಠ್ಯಪುಸ್ತಕ ಓದುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಐಎಎಸ್, ಐಪಿಎಸ್, ಕೆಎಎಸ್ ನಂತಹ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ನಂಜೇಗೌಡ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು .ಪ್ರತಿಭಾವಂತ, ಬಡ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ರಿಯಾಯಿತಿ ದರದಲ್ಲಿ ನೀಡುವ ಉದ್ದೇಶದಿಂದ ಪ್ರಾರಂಭ ಮಾಡಿದ್ದು ಪ್ರಾರಂಭದಿಂದ ಶೇಖಡಾ 100 ಫಲತಾಂಶ ನೀಡುತ್ತಿದ್ದೇವೆ ಸಹಕಾರ ನೀಡಿದ ಪೋಷಕರಿಗೂ ವಿದ್ಯಾರ್ಥಿಗಳಿಗೂ ಅಭಿನಂದಿಸುತ್ತೇನೆ ಎಂದು ಜ್ಞಾನ ಗಂಗಾ ಪದವಿ ಪೂರ್ವ ಮತ್ತು ಪದವಿ ಕಾಲೇಜು ಕಾರ್ಯದರ್ಶಿ ನಾರಾಯಣಸ್ವಾಮಿ ತಿಳಿಸಿದರು.ವಿದ್ಯಾರ್ಥಿಗಳಿಗೆ ಪದವಿ ನೀಡಿ ಪುರಸ್ಕರಿಸಲಾಯಿತು. ಕಿರಿಯ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅತಿಥಿಗಳ ಮಾರ್ಗದರ್ಶನದ ಮೂಲಕ ಸ್ವಾಗತಿಸಲಾಯಿತು.

ಕಾರ್ಯಕ್ರಮದಲ್ಲಿ ದೇವನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಉಪಾಧ್ಯಕ್ಷ ರಾಮಾಂಜಿನಪ್ಪ, ಕೋಶಾಧ್ಯಕ್ಷ ಅಶ್ವಥ್ ಗೌಡ, ಉಚ್ಚನ್ಯಾಯಾಲಯದ ವಕೀಲ ಬಿ.ಮಂಜುನಾಥ್, ಜೆಡಿಎಸ್ ಕುಂದಾಣ ಹೋಬಳಿ ಅಧ್ಯಕ್ಷ ಚಂದ್ರೇಗೌಡ, ಜ್ಞಾನ ಗಂಗಾ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಭಾರತಿ, ಐರಾವನ್ ಚಿತ್ರದ ನಿರ್ದೇಶಕ ರಾಮ್ಸ್ ರಂಗ, ಶಿಕ್ಷಕವೃಂದ ಮತ್ತು ವಿದ್ಯಾರ್ಥಿಗಳು ಇದ್ದರು.

Leave a Comment

Your email address will not be published. Required fields are marked *

Translate »
Scroll to Top