ನಾನು ಶಾಸಕನಾದ ನಂತರ ದೇವನಹಳ್ಳಿ ತಾಲ್ಲೂಕನ್ನು ಸಮಗ್ರ ಅಭಿವೃದ್ಧಿ ಮಾಡಲು ಹಗಲಿರುಳು ಶ್ರಮಿಸಿ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಲು ಕಂಡ ಕನಸು ನನಸಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದು ಸರ್ಕಾರದಿಂದ ದೊರೆಯುವ ಹಲವು ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿಸುತ್ತಿದ್ದು ಕ್ಷೇತ್ರದ ಪ್ರತಿ ಹಳ್ಳಿಗೂ 50 ಲಕ್ಷ ಅಭಿವೃದ್ಧಿ ಕಾಮಗಾರಿಗಳನ್ನು ಪೂರೈಸಿದ್ದು ಮುಂದಿನ ದಿನಗಳಲ್ಲಿ ಪಕ್ಷಾತೀತವಾಗಿ ಎಲ್ಲಾ ಮುಖಂಡರ ಸಹಕಾರದೊಂದಿಗೆ ಕೆಲಸ ಮಾಡುವುದಾಗಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.

ದೇವನಹಳ್ಳಿ ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆಯ 21-22 ನೇ ಸಾಲಿನ 15 ನೇ ಹಣಕಾಸು ಯೋಜನೆಯಲ್ಲಿ ಎಸ್.ಎಫ್.ಸಿ ಪುರಸಭೆ ನಿಧಿಯ ಶೇಖಡ 5 ರ ಅನುದಾನದಡಿ ವಿಶೇಷ ಚೇತನರಿಗೆ ತ್ರಿಚಕ್ರ ವಾಹನ ವಿತರಣೆ, ಪುರಸಭಾ ನಿಧಿಯ 24.10 ಅನುದಾನದಡಿ ಪೌರಕಾರ್ಮಿಕರಿಗೆ ಸಮವಸ್ತ್ರ ವಿತರಣೆ, ಪುರಸಭೆಯ ಎಸ್.ಸಿ.ಪಿ ಟಿ.ಎಸ್.ಪಿ ಅನುದಾನದಡಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಹಾಗೂ 15 ನೇ ಹಣಕಾಸು ಯೋಜನೆಯ ನೀರು ಸರಬರಾಜು ಕಾಮಗಾರಿ, ಎಲ್.ಇ.ಡಿ ಬೀದಿ ದೀಪ ಕಾಮಗಾರಿ , ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳ ಒಟ್ಟು 184 ಲಕ್ಷ ರುಗಳ ಕಾಮಗಾರಿಗೆ ಚಾಲನೆ ನೀಡಿ ನಂತರ ಮಾತನಾಡಿ, ಸರ್ಕಾರದ ಹಲವು ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ದೇವನಹಳ್ಳಿ ಪಟ್ಟಣಕ್ಕೆ ಸಂಬಂದಿಸಿದ ವಾರ್ಡ್ ಚುನಾಯಿತ ಪ್ರತಿನಿಧಿಗಳು ಉತ್ತಮವಾಗಿ ನಿರ್ವಹಣೆ ಮಾಡಿ ಅಭಿವೃದ್ಧಿಗೆ ಸಹಕರಿಸಿ ಹಾಗೂ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ವತಿಯಿಂದ 24 ಕೋಟಿ ವೆಚ್ಚದಲ್ಲಿ ಡಿ.ಪಿ.ಆರ್ ಆಗಿ ಮಂಜೂರಾಗಿ ಈ ತಿಂಗಳ ಕೊನೆಯಲ್ಲಿ ಶಂಕುಸ್ಥಾಪನೆ ನೆರವೇರಿಸಲಿದ್ದು ನಗರೋತ್ಥಾನ ಯೋಜನೆಯಲ್ಲಿ 10 ಕೋಟಿ ಹಣ ಬಿಡುಗಡೆಯಾಗಿದ್ದು ಮತ್ತು ಪಿ.ಡಬ್ಲ್ಯು.ಡಿ ಯಿಂದ 5.5 ಕೋಟಿ ಬಿಡುಗಡೆಯಾಗಿದೆ ಈ ಎಲ್ಲಾ ಕಾಮಗಾರಿಗಳನ್ನು ಆದಷ್ಟು ಜರೂರಾಗಿ ಜನರ ಸೇವೆಗೆ ಲೋಕಾರ್ಪಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಮುನೇಗೌಡ, ಪ್ರಧಾನ ಕಾರ್ಯದರ್ಶಿ ರವೀಂದ್ರ, ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಧ್ಯಕ್ಷ ಜಗನ್ನಾಥ್, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಸುಧಾಕರ್, ಪುರಸಭಾ ಅಧ್ಯಕ್ಷೆ ರೇಖಾ ವೇಣುಗೋಪಾಲ, ಉಪಾಧ್ಯಕ್ಷೆ ಪುಷ್ಪಲತಾ ಲಕ್ಷ್ಮೀನಾರಾಯಣ್, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಪ್ಪ, ಪುರಸಭಾ ಸದಸ್ಯರು, ಮುಖ್ಯಾಧಿಕಾರಿ ನಾಗರಾಜ್, ಸಿಬ್ಬಂದಿ ವರ್ಗ ಹಾಗೂ ಫಲಾನುಭವಿಗಳು ಹಾಜರಿದ್ದರು.