ಸುಳ್ಳು ಆರೋಪ ಮಾಡುವ ಹತಾಶ ಸಿಎಂ: ಸಿ.ಟಿ.ರವಿ ವಾಗ್ದಾಳಿ

ಆರೋಪಕ್ಕೆ ಉತ್ತರಿಸುವ ಬದಲಾಗಿ ಬ್ಲಾಕ್‌ಮೇಲ್ ಪಾಲಿಟಿಕ್ಸ್ ಮಾಡುತ್ತಿದ್ದಾರೆ

ಬೆಂಗಳೂರು: ಒಂದೂವರೆ ವರ್ಷ ಈ ಸರಕಾರದ ಕೈ ಕಟ್ಟಿ ಹಾಕಿದವರು ಯಾರು? ರಾಜೀ ರಾಜಕೀಯಕ್ಕಾಗಿ ಸುಮ್ಮನಿದ್ದರೇ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದರು.

ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವಿಪಕ್ಷ ನಾಯಕರಾಗಿದ್ದಾಗ ಬಿಜೆಪಿ ಸರಕಾರದ ವಿರುದ್ಧ 40 ಶೇಕಡಾ ಸರಕಾರ ಇದು ಎಂದು ಆರೋಪ ಮಾಡಿದ್ದರು. ಒಂದೂವರೆ ವರ್ಷ ಆಗಿದೆ. ಶೇ 40ರ ಕುರಿತು ಯಾರ ಮೇಲೆ ಎಫ್‌ಐಆರ್ ಹಾಕಿದ್ದಾರೆ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಆಗ ಅವರು ಸುಳ್ಳು ಆರೋಪ ಮಾಡಿದ್ದರು. ಈಗಲೂ ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ವಿಷಯಾಂತರ ಮಾಡಲು, ಜನರಲ್ಲಿ ಗೊಂದಲ ಮೂಡಿಸಲು, ಅವರ ಮೇಲೆ ಆರೋಪ ಬಂದಾಕ್ಷಣ ಇನ್ನೊಬ್ಬರ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ ಉತ್ತರಿಸುವ ಬದಲಾಗಿ ಬ್ಲಾಕ್‌ಮೇಲ್ ಪಾಲಿಟಿಕ್ಸ್ ಶುರು ಮಾಡಿದ್ದಾರೆ. ಹಾಗಿದ್ದರೆ ನಿಮ್ಮ ಕೈ ಕಟ್ಟಿ ಹಾಕಿದವರು ಯಾರು ಎಂದು ಪ್ರಶ್ನಿಸಿದರು.

 

          ಬಿಜೆಪಿ ಕಾಲದಲ್ಲಿನ ಆರೋಪಗಳ ತನಿಖೆ ಕುರಿತ ಮುಖ್ಯಮಂತ್ರಿಗಳ ಹೇಳಿಕೆ ಕುರಿತು ಗಮನ ಸೆಳೆದಾಗ ಅವರು ಈ ಉತ್ತರ ನೀಡಿದರು. ನಾವೇನಾದರೂ ಮಾಡ್ತೀವಿ; ನೀವು ಕೇಳಬೇಡಿ. ನೀವು ಮಾಡಿದರೆ ನಾವು ಕೇಳಲ್ಲ ಎಂಬ ರಾಜೀ ರಾಜಕಾರಣಕ್ಕಾಗಿ ಕಾಂಗ್ರೆಸ್ಸಿನವರು ಸುಮ್ಮನಿದ್ದರೇ ಎಂದು ಪ್ರಶ್ನಿಸಿದರು.

          ಮುಖ್ಯಮಂತ್ರಿಗಳು ತಾವೊಬ್ಬ ಮುಖ್ಯಮಂತ್ರಿ ಎಂಬುದನ್ನು ಮರೆತು ಹೇಳಿಕೆ ಕೊಟ್ಟಂತೆ ಕಾಣುತ್ತಿದೆ. ಬಹಳ ಹತಾಶರಾಗಿ (ಅಪ್‌ಸೆಟ್) ಹೇಳಿಕೆ ಕೊಟ್ಟಂತಿದೆ. ವಾಸ್ತವವಾದಿಯಾಗಿ ಯೋಚಿಸುವುದಕ್ಕಿಂತಲೂ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಮೇಲ್ನೋಟಕ್ಕೆ ಅವರ ವಿರುದ್ಧ ಇದೆ, ಮೆರಿಟ್ ಇಲ್ಲ ಎಂದು ಅನಿಸಿದಾಗ ಎಮೋಷನಲ್ ಕಾರ್ಡ್ ಅನ್ನು ಬಹಳ ಜನ ಬಳಸುತ್ತಾರೆ ಎಂದರು.

          ಭ್ರಷ್ಟಾಚಾರ ಮುಚ್ಚಿ ಹಾಕಲು ಅವರಿಗೆ ಜಾತಿ ಬೇಕಾಗಿದೆ ಎಂದು ಟೀಕಿಸಿದರು. ತಿಂದಿರುವವರು ಇವರು; ಸಪೋರ್ಟಿಗೆ ಜಾತಿ ಬೇಕಾಗಿದೆ. ತಿಂದವರು ಇವರೇ; ಜಾತಿಯವರಿಗೇನೂ ತಿನಿಸಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು. ಎಮೋಷನಲ್ ಕಾರ್ಡ್ ಬಳಸುತ್ತಿದ್ದಾರೆ. ಅವರು ವಿಪಕ್ಷದ ನಾಯಕನಲ್ಲ ಎಂದು ತಿಳಿಸಿದರು.

ರಾಜಿ ರಾಜಕಾರಣ ಮಾಡುವವರು ಎಲ್ಲ ಕಡೆ ಸಲ್ಲುತ್ತಾರೆ..

ಹೊಂದಾಣಿಕೆ ರಾಜಕಾರಣವು ರಾಜ್ಯ ಮತ್ತು ಪಕ್ಷದ ಹಿತ ಎರಡನ್ನೂ ಕೂಡ ಹಾಳುಮಾಡಿದೆ. ಪ್ರಾಮಾಣಿಕವಾಗಿ ಪಾರ್ಟಿ ಪಾರ್ಟಿ ಎಂದು ಯಾರು ಹೊಡೆದಾಡುತ್ತಾರೋ ಅವರು ಬಲಿಪಶು ಆಗುತ್ತಾರೆ. ರಾಜಿ ರಾಜಕಾರಣ ಮಾಡುವವರು ಎಲ್ಲ ಕಡೆ ಸಲ್ಲುತ್ತಾರೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.

          ಕೆಂಪಣ್ಣ ಆಯೋಗದ ವರದಿ ಮಂಡಿಸಬೇಕು ಎಂದು ಅವರು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು. ಕಪ್ಪುಚುಕ್ಕಿ ಇಲ್ಲದ 40 ವರ್ಷಗಳ ರಾಜಕಾರಣ ನಿಮ್ಮದಲ್ಲವೇ? ಆ ಆಯೋಗದ ಕೊಟ್ಟ ಅಭಿಪ್ರಾಯ, ಶಿಫಾರಸುಗಳ ಬಗ್ಗೆ ನೀವು ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಿದರು.

          ಪಾದಯಾತ್ರೆಯಿಂದ ರಾಜಕೀಯ- ವೈಯಕ್ತಿಕ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರ ಕೊಟ್ಟರು. ಇಡೀ ರಾಜ್ಯದ ಕಾರ್ಯಕರ್ತರು ಉತ್ಸಾಹದಿಂದ ಬೆಂಗಳೂರು- ಮೈಸೂರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು ಎಂದರು.

 

          ನಮ್ಮ ಪಕ್ಷದ ಪಾದಯಾತ್ರೆಯಿಂದ ಭಯಗೊಂಡ ಕಾಂಗ್ರೆಸ್ ಪಕ್ಷ, ಭ್ರಷ್ಟಾಚಾರದ ಸಮರ್ಥನೆಗೆ ದೆಹಲಿ ನಾಯಕರು ಓಡಿ ಬಂದು ನಿಲ್ಲುವ ಪರಿಸ್ಥಿತಿ ಬಂದಿತ್ತು ಎಂದು ವಿಶ್ಲೇಷಿಸಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top