ಬಳ್ಳಾರಿ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಕಛೇರಿಗಳಲ್ಲಿ ನಡೆದಿರುವ ಅವ್ಯವಹಾರ-ಅಕ್ರಮಗಳ ಬಗ್ಗೆ ರಾಜ್ಯ ಸರ್ಕಾರ ಮತ್ತು ಸಚಿವರು ಸಮಗ್ರ ತನಿಖೆ ನಡೆಸುವಂತೆ ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆಯು ಆಗ್ರಹಪಡಿಸಿದೆ.
ವೇದಿಕೆಯ ಧುರೀಣ, ಹಿರಿಯ ರಂಗ ನಿರ್ದೇಶಕ, ನಾಟಕ ರಚನೆಕಾರ ಕೆ.ಜಗದೀಶ್ ಮತ್ತಿತರರು ಇಂದು‘ಸ್ನೇಹ ಸಂಪುಟ’ದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಬಳ್ಳಾರಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾಗಿದ್ದ ಸಿದ್ದಲಿಂಗೇಶ ಕೆ.ರಂಗಣ್ಣನವರ್, ಕೊಪ್ಪಳದ ಪ್ರಭಾರಿ ಸಹಾಯಕ ನಿರ್ದೇಶಕರಾಗಿದ್ದ ಅವಧಿಯಲ್ಲಿ ಹಗರಣ ನಡೆದಿದ್ದು ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು, ಸಿದ್ದಲಿಂಗೇಶ ಕೆ.ರಂಗಣ್ಣನವರ್ರನ್ನು ಕಳೆದ ಫೆ.೩ ರಂದು ಸೇವೆಯಿಂದ ಅಮಾನತ್ತುಗೊಳಿಸಿದ್ದ ರಾಜ್ಯ ಸರ್ಕಾರ ಆನಂತರ ಮಾ.೧೫ ರಂದು ಇಲಾಖೆಯ ವಿಚಾರಣೆಯನ್ನು ಕಾಯ್ದಿರಿಸಿ, ಅಮಾನತ್ತಿನ ಆದೇಶ ತೆರವುಗೊಳಿಸಿ ಹಾವೇರಿ ಜಿಲ್ಲೆಗೆ ಕಮಸಂ ಇಲಾಖೆಯ ಸಹಾಯಕ ನಿರ್ದೇಶಕರನ್ನಾಗಿ ನಿಯೋಜಿಸಲಾಗಿತ್ತು ಎಂದು ಹೇಳಿದರು.
2021ರ ಜ.18ರಂದು ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ನಡೆದ ‘ಸಾಂಸ್ಕೃತಿಕ ಸೌರಭ’ದ ದಾಖಲೆಗಳನ್ನು ನೋಡಿದರೆ, ಕಲಾವಿದರ ಸಂಭಾವನೆಯ ಹಣವನ್ನು ಲಪಟಾಯಿಸಿರುವುದು ಖಚಿತವಾಗುತ್ತದೆ. ಇದಕ್ಕೆ ಅಂದಿನ ಪ್ರಭಾರಿ ಸಿದ್ದಲಿಂಗೇಶ ಅವರೇ ಕಾರಣರಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದರು.
ಬಳ್ಳಾರಿ ಮತ್ತು ಕೊಪ್ಪಳಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅವರು, ಬಳ್ಳಾರಿ ಕಛೇರಿಯಲ್ಲಿ ಲಭ್ಯವಿರುವ ಕೆಲವು ಕಲಾವಿದರ ಹೆಸರು ಮತ್ತು ಬ್ಯಾಂಕ್ ಖಾತೆಗಳ ವಿವರಗಳನ್ನು ಕೊಪ್ಪಳ ಜಿಲ್ಲೆಯ ಕಾರ್ಯಕ್ರಮಕ್ಕೆ ಬಳಸಿರುವುದು ಸ್ಪಷ್ಟವಾಗಿದೆ. ಈ ಹಗರಣದ ದಾಖಲೆಗಳನ್ನು ಮಾಹಿತಿ ಹಕ್ಕು ಅಧಿನಿಯಮದಡಿ ನೀಡದೇ ಆರೋಪ ಹೊತ್ತವರನ್ನು ರಕ್ಷಿಸುತ್ತಾ, ಅಕ್ರಮಕ್ಕೆ ಕೈಜೋಡಿಸಿರುವ ಹಾಲಿ ಕೊಪ್ಪಳ ಜಿಲ್ಲೆಯ ಕಮಸಂ ಸಹಾಯಕ ನಿರ್ದೇಶಕ ಕೊಟ್ರೇಶ್ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕೆಂದು ಜಗದೀಶ್ ಕೋರಿದರು.
‘ಸಾಂಸ್ಕೃತಿಕ ಸೌರಭ’ ಕಾರ್ಯಕ್ರಮದಲ್ಲಿ ಆಯಾ ಜಿಲ್ಲೆಗಳ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಆದರೆ, ಕೊಪ್ಪಳ ಜಿಲ್ಲೆಯ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ 3 ಮತ್ತು ವಿಜಯನಗರ ಜಿಲ್ಲೆಯ ಇಬ್ಬರು ಕಲಾವಿದರ ಹೆಸರುಗಳಲ್ಲಿ ರಸೀದಿಗಳಿವೆ. ಆಹ್ವಾನ ಪತ್ರಿಕೆಯಲ್ಲಿ ಕಲಾವಿದರ ಊರುಗಳ ಹೆಸರೇ ಇಲ್ಲ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸದೇ ಇದ್ದರೂ, ಬಳ್ಳಾರಿಯ ಕೆಲ ಕಲಾವಿದರ ಹೆಸರು ಬಳಸಿ, ರಸೀದಿಗಳಲ್ಲಿ ಅವರ ಸಹಿಗಳನ್ನು ಫೋರ್ಜರಿ ಮಾಡಿ, ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಲಾಗಿದೆ. ರಸೀದಿಗಳಲ್ಲಿ ಕಲಾವಿದರ ವಿಳಾಸ ಬರೆಯಬೇಕೆಂದು ನಿಯಮವಿದ್ದರೂ, ವಿಳಾಸ ಬರೆದಿಲ್ಲ. ಉದಾಹರಣೆಗೆ, ಆಹ್ವಾನ ಪತ್ರಿಕೆಯಲ್ಲಿ ನಂದಿಧ್ವಜ; ಮಂಜುನಾಥ್ ಪಿ.ಆರ್ ಎಂದು ಮುದ್ರಿಸಲಾಗಿದೆ. ರಸೀದಿಯಲ್ಲಿ ‘ಆರ್.ಪಿ.ಮಂಜುನಾಥ್,ಡೊಳ್ಳು ಕುಣಿತ’ ಎಂದು ಬರೆದು ಖೊಟ್ಟಿ ಸಹಿ ಮಾಡಲಾಗಿದೆ. ಚಂದ್ರಶೇಖರ ಬಳ್ಳಾರಿ ಎಂಬುವ ಕಲಾವಿದರ ಸಹಿಯೂ ಕೂಡಾ ಖೊಟ್ಟಿಯಾಗಿದೆ. ಈ ಸಹಿಗಳು ತಮ್ಮದು ಅಲ್ಲವೇ ಅಲ್ಲವೆಂದು ಈ ಕಲಾವಿದರು ಹೇಳಿದ್ದಾರಲ್ಲದೇ, ಈ ಇಬ್ಬರು ಕಲಾವಿದರು ಕಾರ್ಯಕ್ರಮಕ್ಕೆ ಹೋಗಿಯೇ ಇಲ್ಲ, ತಮಗೆ ಆಮಂತ್ರಣವಿಲ್ಲ, ಆ ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿಯೂ ಇಲ್ಲವೆಂದು ತಿಳಿಸಿದ್ದಾರೆ ಎಂದು ಕೆ.ಜಗದೀಶ್ ಹೇಳಿದರು.
ಈ ರೀತಿಯಾಗಿ ಕಮಸಂ ಇಲಾಖೆಯಲ್ಲಿ ಬಳ್ಳಾರಿ, ಕೊಪ್ಪಳ, ವಿಜಯನಗರ ಜಿಲ್ಲೆಗಳಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಹಾಗೂ ಇವರ ಅವಧಿಯಲ್ಲಿನ ಎಲ್ಲಾ ಕಾರ್ಯಕ್ರಮಗಳ ಕುರಿತಂತೆ ಉನ್ನತ ಮಟ್ಟದ, ಸಮಗ್ರ ತನಿಖೆ ನಡೆಸಲು ಒತ್ತಾಯಿಸಿ, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ, ಕಾರ್ಯದರ್ಶಿಗಳಿಗೆ, ನಿರ್ದೇಶಕರಿಗೆ ಹಾಗೂ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಕೂಲಂಕುಷ ಪತ್ರ ಬರೆದು ಕೋರಿರುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಬಯಲಾಟ ಕಲಾವಿದೆ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸುಜಾತಮ್ಮ, ಕಲಾವಿದರಾದ ನಾಗನಗೌಡ, ಕೆ.ಚಂದ್ರಶೇಖರ್, ಆರ್.ಪಿ.ಮಂಜುನಾಥ್, ತಿಪ್ಪೇಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.