ಬೀದರ್ : ಜನ ಸ್ಪಂದನಾ ಕಾರ್ಯಕ್ರಮದಲ್ಲಿ ವಿಕಲಚೇತನರ ಸಮಸ್ಯೆಗಳನ್ನು ಆಲಿಸಲು ವೇದಿಕೆಯಿಂದ ಕೆಳಗೆ ಇಳಿದು ಬಂದ ಈಶ್ವರ ಖಂಡ್ರೆ ಹಾಗೂ ರಹೀಂಖಾನ್ ಅವರು ದಿವ್ಯಾಂಗರಿಂದ ಮನವಿ ಪತ್ರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರ ಖಂಡ್ರೆ ಅವರು, ವಿಕಲಚೇತನರಿಗೆ ವಸತಿ ಸೌಲಭ್ಯ ಕಲ್ಪಿಸುವುದಾಗಿರಲಿ, ಅವರಿಗೆ ಪಿಂಚಣಿ ಕೊಡಿಸುವುದಾಗಿರಲಿ ಅಥವಾ ವಾಹನ ಕೊಡಿಸುವುದೇ ಆಗಿರಲಿ ಅದನ್ನು ಕೊಡಿಸುವ ಪ್ರಯತ್ನ ಮಾಡಲಾಗುವುದು. ವಿಕಲ ಚೇತನರಿಗೆ ಉದ್ಯೋಗ ಕಲ್ಪಿಸುವ ಕುರಿತಂತೆ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ವಿವಿಧ ಇಲಾಖೆಗಳ ಸಮಸ್ಯೆಗಳನ್ನು ಆಲಿಸಿದ ಸಚಿವರು ಸಾರ್ವಜನಿಕರ ಸಮಸ್ಯೆ ಆಲಿಸಿ, ಕಾನೂನು ಚೌಕಟ್ಟಿನಲ್ಲಿ ಸಮಸ್ಯೆ ಪರಿಹರಿಸುವುದಾಗಿ ತಿಳಿಸಿದರು.
ಮನೆ ನಿರ್ಮಾಣಕ್ಕಾಗಿ ಸರ್ಕಾರದ ವಸತಿ ಯೋಜನೆ ಅಡಿ ನೆರವು ಕೋರಿ ಬಂದ ಮಹಿಳೆಯ ಅಹವಾಲು ಆಲಿಸಿದ ಸಚಿವರು ಪಂಚಾಯ್ತಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಿದರು. ಅರ್ಹ ಫಲಾನುಭಾವಿ ಆಗಿದ್ದಲ್ಲಿ ಮನೆ ನಿರ್ಮಾಣಕ್ಕೆ ಕಾನೂನು ಮಿತಿಯಲ್ಲಿ ಅರ್ಜಿ ಪರಿಶೀಲಿಸಲು ಅಧಿಕಾರಿಗಳಿಗೆ ತಿಳಿಸಿದರು. ಮನೆಯ ಪ್ರವೇಶಕ್ಕೆ ಅಡ್ಡಿಯಾಗಿರುವ ಟ್ರಾನ್ಸ್ ಫಾರ್ಮರ್ ತೆರವು ಮಾಡುವ, ಚರಂಡಿ ನಿರ್ಮಾಣವೇ ಮೊದಲಾದ ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದರು. ಉದ್ಯೋಗ ಕೋರಿ ಹಲವು ಅರ್ಜಿಗಳು ಬಂದ ಹಿನ್ನೆಲೆಯಲ್ಲಿ, ಅರ್ಹತೆಯ ಆಧಾರದ ಮೇಲೆ ಉದ್ಯೋಗ ನೀಡಲಾಗುತ್ತದೆ. ಅದಕ್ಕೆ ಪ್ರಕ್ರಿಯೆ ಇರುತ್ತದೆ. ಹೀಗಾಗಿ ನೇಮಕಾತಿಗೆ ಜಾಹೀರಾತು ಪ್ರಕಟಿಸಿದ ತರುವಾಯ ಅರ್ಜಿ ಸಲ್ಲಿಸುವಂತೆ ತಿಳಿಯಹೇಳಿದರು.
ನೂರಾರು ಜನರು ಸರತಿಯ ಸಾಲಿನಲ್ಲಿ ನಿಂತು ಸಚಿವರಿಗೆ ಖುದ್ದು ಮನವಿ ಸಲ್ಲಿಸಿದರು.