ಬೆಂಗಳೂರು : “ಒಂದು ಪಕ್ಷದ ಶಾಸಕರು ಮಂತ್ರಿ, ಮುಖ್ಯಮಂತ್ರಿ ಆಗಲು ಅರ್ಹರಿರುತ್ತಾರೆ. ಮಾನ್ಯ ಮುಖ್ಯಮಂತ್ರಿಗಳು ಐದು ವರ್ಷ ತಾವೇ ಸಿಎಂ ಆಗಿ ಇರುವುದಾಗಿ ಹೇಳಿದ್ದಾರೆ. ಐ ವಿಶ್ ಹಿಮ್ ಆಲ್ ದ ಬೆಸ್ಟ್ (ಅವರಿಗೆ ಶುಭ ಕೋರುತ್ತೇನೆ”) ಎಂದರು. ಯಾರೇ ಆದರೂ ಆಡಿದ ಮಾತು ಮುಖ್ಯ ಅಲ್ಲವೇ ಎಂದು ಕೇಳಿದಾಗ, “ಸಿಎಂ ತಮ್ಮ ವಿಚಾರಧಾರೆ ಹೇಳಿದ್ದಾರೆ. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಾನುಂಟು ಹೈಕಮಾಂಡ್ ಉಂಟು. ಹೈಕಮಾಂಡ್ ಹೇಳಿದಂತೆ ಕೇಳುವುದಾಗಿ ಸಿಎಂ ಹೇಳಿದ್ದಾರೆ. ನಾನೂ ಹೇಳಿದ್ದೇನೆ. ಅದಕ್ಕೆ ನಾವು ಬದ್ಧ. ಅಷ್ಟು ಬಿಟ್ಟರೆ ಬೇರೇನೂ ಇಲ್ಲ ಎಂದರು.
ಮುಖ್ಯಮಂತ್ರಿ ಸಿದ್ದ ರಾಮಯ್ಯ ನೇತೃತ್ವದ ಸರ್ಕಾರಕ್ಕೆ ಇಂದಿಗೆ ಸರಿಯಾಗಿ ಎರಡೂವರೆ ವರ್ಷ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಆಕಾಂಕ್ಷೆಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡೆ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ನಿನ್ನೆ ಮೊನ್ನೆವರೆಗೆ ದೆಹಲಿಯಾತ್ರೆ ಕೈಗೊಂಡು ಹೈಕಮಾಂಡ್ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದ್ದ ಡಿ.ಕೆ. ಶಿವಕುಮಾರ್ ಇಂದು ಸದಾಶಿವನಗರದ ತಮ್ಮ ನಿವಾಸದಲ್ಲೇ ಉಳಿದಿದ್ದರು. ತಮ್ಮದೇ ಆದ ಲೆಕ್ಕಾಚಾರ, ಕಾರ್ಯತಂತ್ರದಲ್ಲಿ ಮಗ್ನರಾಗಿದ್ದರು.
ತಮ್ಮ ಸಹೋದರ ಡಿ.ಕೆ. ಸುರೇಶ್ ಜೊತೆ ಸ್ವಲ್ಪ ಹೊತ್ತು ಗಹನ ಮಾತುಕತೆ ನಡೆಸಿದರು. ಕೆಲವೇ ಕೆಲವು ಆಪ್ತರು ಅವರನ್ನು ಭೇಟಿ ಮಾಡಿದರು. ತಮ್ಮ ಸದಾಶಿವನಗರದ ನಗರದ ಮೊದಲ ಮಹಡಿಯ ಬಾಲ್ಕನಿಗೆ ಆಗಮಿಸಿ ಸುತ್ತಮುತ್ತ ಒಮ್ಮೆ ಕಣ್ಣಾಡಿಸಿ ಮತ್ತೆ ಗೂಡು ಸೇರಿಕೊಂಡರು.
ಶಾಸಕರ ದೆಹಲಿ ಯಾತ್ರೆ ಕಾಂಗ್ರೆಸ್ ನಲ್ಲಿ ಕಾವೇರಿದ ವಾತಾವರಣ ನಿರ್ಮಾಣ ಮಾಡಿದ್ದರೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮನೆಯಲ್ಲೇ ಉಳಿಯುವ ಮೂಲಕ ಕುತೂಹಲ ಕೆರಳಿಸಿದರು.
ಅನಾರೋಗ್ಯದ ಕಾರಣಕ್ಕಾಗಿ ಡಿ.ಕೆ.ಶಿವ ಕುಮಾರ್ ಮನೆಯಲ್ಲೇ ಉಳಿದಿದ್ದಾರೆ ಎಂಬ ಮಾಹಿತಿ ದೊರೆತಿದೆ. ಆದರೆ ಅಷ್ಟು ಸುಲಭಕ್ಕೆ ಡಿ.ಕೆ.ಶಿವಕುಮಾರ್ ಮನೆಯಲ್ಲಿ ಕುಳಿತುಕೊಳ್ಳುವ ರಾಜಕಾರಣಿ ಅಲ್ಲ. ಎಷ್ಟೋ ಬಾರಿ ಅನಾರೋಗ್ಯದ ನಡುವೆಯೂ ಕೈಗೆ ಬ್ಯಾಂಡೆಡ್ ಕಟ್ಟಿಕೊಂಡು, ಡ್ರಿಪ್ ಹಾಕಿಸಿಕೊಂಡಿದ್ದ ಸೂಜಿಯೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಹಲವು ಉದಾಹರಣೆಗಳಿವೆ.
ಈಗ ದೆಹಲಿಗೆ ಕಾಂಗ್ರೆಸ್ಸಿನ ಒಂದಷ್ಟು ಶಾಸಕರು ದೆಹಲಿಗೆ ತೆರಳಿದ್ದರಿಂದಾಗಿ ರಾಜಕೀಯವಾಗಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಇಂತಹ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡದೆ ತಮ್ಮ ಪಾಡಿಗೆ ತಾವಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ತಮ್ಮ ಬೆಂಬಲಿಗ ಶಾಸಕರೇ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಮಾಡಿದಾಗ ಮಾಧ್ಯಮಗಳ ಮುಂದೆ ಬಂದಿದ್ದ ಡಿ.ಕೆ.ಶಿವಕುಮಾರ್, ಯಾರು ಈ ಬಗ್ಗೆ ಮಾತನಾಡಬಾರದು ಎಂದು ಗುಟುರು ಹಾಕುತ್ತಿದ್ದರು. ಹೈಕಮಾಂಡ್‍ಗೆ ಸಂಬಂಧ ಪಟ್ಟ ವಿಚಾರದಲ್ಲಿ ಯಾರು ಮಾತನಾಡಬಾರದು ಎಂದು ಎಚ್ಚರಿಸಿ ನೋಟಿಸ್ ಕೊಡಿಸುತ್ತಿದ್ದರು. ಇಂತಹ ಘಟನೆಗಳು ಹಲವಾರು ಬಾರಿ ನಡೆದಿವೆ. ಆದರೆ ಇಂದು ಡಿಕೆ ಶಿವಕುಮಾರ್ ಮನೆಯಿಂದಲೇ ಹೊರಬರದೆ ತಮ್ಮ ಪಾಡಿಗೆ ತಾವು ಉಳಿದುಕೊಂಡಿರುವುದು ಅವರ ಮುಂದಿನ ನಡೆ ಬಗ್ಗೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಈ ನಡುವೆ ಮಾಜಿ ಸಂಸದ ಡಿ.ಕೆ.ಸುರೇಶ್, ಸದಾಶಿವನಗರದ ಡಿ.ಕೆ.ಶಿವಕುಮಾರ್ ಅವರ ಮನೆಗೆ ಆಗಮಿಸಿ ರಹಸ್ಯ ಮಾತುಕತೆ ನಡೆಸುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಪ್ರತಿ ಬಾರಿಯೂ ಡಿ.ಕೆ.ಸುರೇಶ್ ಮಾಧ್ಯಮಗಳ ಮುಂದೆ ತಮ ಅಭಿಪ್ರಾಯಗಳನ್ನು ಹಂಚಿಕೊಂಡೆ ಮುಂದೆ ಹೋಗುತ್ತಿದ್ದರು. ಆದರೆ ಇಂದು ಯಾವುದೇ ಪ್ರತಿಕ್ರಿಯೆ ನೀಡದೇ ತಮ್ಮ ಪಾಡಿಗೆ ತಾವು ತೆರಳಿದ್ದಾರೆ. ಡಿಸಿಎಂ ಬರುತ್ತಾರೆ ಎಲ್ಲವನ್ನೂ ಅವರೇ ಹೇಳುತ್ತಾರೆ ಎಂದು ಜಾರಿಕೊಂಡರು. ಈ ನಡುವೆ ಆಪ್ತ ನಾಯಕರು ಬಹಳಷ್ಟು ಮಂದಿ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಡಿ.ಕೆ. ಶಿವಕುಮಾರ್, “ನನ್ನ ಬಳಿ ಯಾವ ಬಣವೂ ಇಲ್ಲ. ನಾನು ಯಾವುದೇ ಬಣದ ನಾಯಕನಲ್ಲ. ನಾನು 140 ಶಾಸಕರ ಅಧ್ಯಕ್ಷ. 140 ಶಾಸಕರೂ ನನಗೆ ಮುಖ್ಯ. ಗುಂಪುಗಾರಿಕೆ ನನ್ನ ರಕ್ತದಲ್ಲೇ ಇಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.
ಕೆಲವು ಶಾಸಕರು, ಮಂತ್ರಿಗಳು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ, ಮತ್ತೊಂದೆಡೆ ಡಿನ್ನರ್ ಮೀಟಿಂಗ್ ನಡೆಯುತ್ತಿದೆ ಎಂದು ಕೇಳಿದಾಗ, “ಯಾವ ಗುಂಪನ್ನು ದೆಹಲಿಗೆ ಕರೆದುಕೊಂಡು ಹೋಗಲು ನನಗೆ ಇಚ್ಛೆ ಇಲ್ಲ. ನಾನು ಗುಂಪುಗಾರಿಕೆ ಮಾಡುವುದಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮಂತ್ರಿ ಸ್ಥಾನದ ಆಕಾಂಕ್ಷೆ ಇರುವವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದಿಲ್ಲಿಗೆ ಹೋಗುವುದು ಸಹಜ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಹಕ್ಕು ಅವರಿಗೆ ಇದೆ. ನಾನು ಯಾರನ್ನೂ ಕರೆದುಕೊಂಡು ಹೋಗಿಲ್ಲ. ಕೆಲವರು ಮುಖ್ಯಮಂತ್ರಿಗಳ ಜೊತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದರೆ, ಮತ್ತೆ ಕೆಲವರು ತಾವಾಗಿಯೇ ಹೋಗಿದ್ದಾರೆ. ಇದರಲ್ಲಿ ತಪ್ಪೇನಿದೆ? ನಾವು ಯಾರನ್ನೂ ತಡೆಯಲು ಸಾಧ್ಯವಿಲ್ಲ” ಎಂದು ತಿಳಿಸಿದರು.
ಎರಡೂವರೆ ವರ್ಷಗಳಿಂದ ಡಿನ್ನರ್ ಮೀಟಿಂಗ್ ಆಗುತ್ತಲೇ ಇವೆ
ಸತೀಶ್ ಜಾರಕಿಹೊಳಿ ಅವರು ಡಿನ್ನರ್ ಸಭೆ ಮಾಡಿರುವ ಬಗ್ಗೆ ಕೇಳಿದಾಗ, “ನನಗೆ ಡಿನ್ನರ್ ಸಭೆಗಳ ಬಗ್ಗೆ ಗೊತ್ತಿಲ್ಲ. ನಾಲ್ಕೈದು ಡಿಸಿಎಂ ಮಾಡಬೇಕು, ಅಧ್ಯಕ್ಷರ ಬದಲಾವಣೆ ಮಾಡಬೇಕು ಎಂದು ಎರಡೂವರೆ ವರ್ಷಗಳಿಂದ ಡಿನ್ನರ್ ಸಭೆಗಳನ್ನು ಮಾಡುತ್ತಲೇ ಇದ್ದಾರೆ. ಇನ್ನು ಹೆಚ್ಚು ಸಭೆಗಳನ್ನು ಮಾಡಲಿ” ಎಂದು ತಿಳಿಸಿದರು.
ಸಿಎಂಗೆ ಆಲ್ ದಿ ಬೆಸ್ಟ್ ಹೇಳಿದ ಡಿಸಿಎಂ



