ತುಂಗಭದ್ರಾ ಜಲಾಶಯಕ್ಕೆ ಡಿಕೆಶಿ ಭೇಟಿ

ವಿಜಯನಗರ : ಹೊಸಪೇಟೆಯ ತುಂಗಭದ್ರಾ ಜಲಾಶಯದ 19ನೇ ಗೇಟ್ ಕೊಚ್ಚಿ ಹೋಗಿರುವ ಹಿನ್ನೆಲೆ ಇಂದು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಡಿಸಿಎಂ ಡಿಕೆಶಿ ಅವರು, ಗೇಟ್ ದುರಸ್ತಿಗೆ ತ್ವರಿತವಾಗಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 

          ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ 12 ಲಕ್ಷ ಎಕರೆ ನೀರಾವರಿಗೆ ಜಲಾಶಯದ ನೀರು ಅಗತ್ಯವಾಗಿ ಬೇಕಾಗಿದೆ. ಶನಿವಾರ ರಾತ್ರಿ ಹತ್ತು ಗೇಟ್ ಮೂಲಕ ನೀರು ಬಿಟ್ಟಾಗ ಅದರಲ್ಲಿ 19ನೇ ಗೇಟ್ ಕಳಚಿಕೊಂಡಿದೆ. ತಕ್ಷಣ ನಮ್ಮ ಅಧಿಕಾರಿಗಳು, ಜನಪ್ರನಿಧಿಗಳು ಚರ್ಚಿಸಿ ಅನುಮತಿ ಪಡೆದು ತಕ್ಷಣ ಎಲ್ಲ ಗೇಟ್ ಮೂಲಕ ನೀರು ಬಿಡಲಾಗಿದೆ. ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ ನಾಲ್ಕು ಜಿಲ್ಲೆಗಳಿಗೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಗೇಟ್ ದುರಸ್ತಿ ಜವಾಬ್ದಾರಿ ಅನುಭವಿ ಸಂಸ್ಥೆಗೆ ವಹಿಸಲಾಗಿದೆ ಎಂದರು.

          ನಾರಾಯಣ ಎಂಜಿನಿಯರಿಂಗ್ ಹಾಗೂ ಹಿಂದುಸ್ಥಾನ ಕಂಪನಿಗೆ ಜಲಾಶಯದ ವಿನ್ಯಾಸ ನೀಡಲಾಗಿದೆ. ತಾಂತ್ರಿಕ ತಂಡದವರು ನಿನ್ನೆ ರಾತ್ರಿಯೇ ಇಲ್ಲಿಗೆ ಬಂದು ತಕ್ಷಣ ಕೆಲಸ ಆರಂಭಿಸಿದ್ದಾರೆ. ರೈತರಿಗೆ ಒಂದು ಬೆಳೆಗೆ ನೀರು ಉಳಿಸಬೇಕೆಂದು ತೀರ್ಮಾನಿಸಲಾಗಿದೆ. ನೆರೆ ರಾಜ್ಯಗಳಿಗೆ ಅವರ ಪಾಲಿನ 25 ಟಿಎಂಸಿ ಅಡಿ ನೀರು ಕೊಡಲಾಗಿದೆ. ಇನ್ನು 90 ಟಿಎಂಸಿ ಅಡಿ ಕೊಡಬೇಕಿದೆ. ರೈತರು ಗಾಬರಿಯಾಗುವ ಅಗತ್ಯವಿಲ್ಲ. ಮೂರು ಸರ್ಕಾರ ಒಟ್ಟಾಗಿ ಸಮಸ್ಯೆ ನಿವಾರಿಸಲಿವೆ. ರೈತರನ್ನು ಬದುಕಿಸಲು ಬೇಕಾದ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

          ಭದ್ರತೆ ದೃಷ್ಟಿಯಿಂದ ಜಲಾಶಯದಿಂದ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗುತ್ತಿದ್ದು, ಜನಪ್ರತಿನಿಧಿಗಳು ಸೇರಿ ಇತರರನ್ನು ಬಿಡುವಂತಿಲ್ಲ. ಇದು ತಾಂತ್ರಿಕ ವಿಷಯವಾಗಿದ್ದು, ಜಲಾಶಯ ರಾಜ್ಯದ ಸಂಪತ್ತು. ಇದನ್ನು ಉಳಿಸಬೇಕಿದೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಕೊಚ್ಚಿ ಹೋಗಿರುವ ತುಂಗಭದ್ರಾ ಜಲಾಶಯದ ಗೇಟ್ ಅಳವಡಿಕೆ ಕಾರ್ಯ ವೇಗ ಪಡೆದುಕೊಂಡಿದ್ದು. ಬೇರೆ ಟೀಕೆ ಟಿಪ್ಪಣೆಗಿಂತ ಮೊದಲು ಗೇಟ್ ಸರಿಪಡಿಸುವುದು ನಮ್ಮ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಚಿವ ಎನ್‍.ಎಸ್.ಬೋಸರಾಜು, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಬಳ್ಳಾರಿ ವಿಜಯನಗರ ಸಂಸದ ಈ.ತುಕಾರಾಂ, ಬಳ್ಳಾರಿ ಶಾಸಕ ನಾರಾ ಭರತ್ ರೆಡ್ಡಿ, ಕಂಪ್ಲಿ ಶಾಸಕ ಗಣೇಶ್  ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top