ದಳಪತಿ ವಿಜಯ್ ಸಿಎಂ ಅಭ್ಯರ್ಥಿ : ತಮಿಳುನಾಡು ವಿಧಾನಸಭಾ ಚುನಾವಣೆ 2026 !
ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಶುಕ್ರವಾರ ಘೋಷಿಸಿದೆ. ಈ ಸಂಬಂಧ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿಶೇಷ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿಯಿರುವಂತೆಯೇ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಈಗಾಗಲೇ ತಯಾರಿ ಆರಂಭಿಸಿವೆ. ಆಡಳಿತಾರೂಢ ಡಿಎಂಕೆ ಮುಂದಿನ ಚುನಾವಣೆಯಲ್ಲೂ ಗೆದ್ದು ಅಧಿಕಾರಕ್ಕೆ ಬರಲು ಕಸರತ್ತು ಆರಂಭಿಸಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಪಕ್ಷದ ಸದಸ್ಯತ್ವ ನೋಂದಣಿ ಚಾಲನೆ ನೀಡಿದ್ದು, ಮನೆಗೆ ಮನೆಗೆ ತೆರಳಿ ನೋಂದಣಿ ಆರಂಭಿಸಲಾಗಿದೆ. ಪಕ್ಷದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಸುಮಾರು 2 ಕೋಟಿ ಸದಸ್ಯತ್ವ ನೋಂದಣಿ ಮಾಡಿಕೊಳ್ಳುವ ಗುರಿ ಹೊಂದಲಾಗಿದೆ.
ಮತ್ತೊಂದೆಡೆ ಪ್ರತಿಪಕ್ಷ ಎಐಎಡಿಎಂಕೆ ಬಿಜೆಪಿ ಮೈತ್ರಿಕೂಟ ಕೂಡಾ ಈ ಬಾರಿ ಶತಯಗತಾಯ ಅಧಿಕಾರ ಹಿಡಿಯುವ ಶಪಥ ನೀಡಿದ್ದು, ಒಗ್ಗಟ್ಟಾಗಿ ಚುನಾವಣೆ ನಡೆಸಲು ತಯಾರಿ ನಡೆಸುತ್ತಿವೆ.
ಟಿವಿಕೆ ಪಕ್ಷದ ಕಾರ್ಯಕಾರಿ ಸಮಿತಿ ಸಭೆ: ಈ ಮಧ್ಯೆ ಒಂದು ಹೆಜ್ಜೆ ಮುಂದೆ ಹೋಗಿರುವ ತಮಿಳಗ ವೆಟ್ರಿ ಕಳಗಂ ಸಿಎಂ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಶುಕ್ರವಾರ ಘೋಷಿಸಿದೆ. ಈ ಸಂಬಂಧ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿಶೇಷ ನಿರ್ಣಯವೊಂದನ್ನು ಅಂಗೀಕರಿಸಲಾಗಿದೆ. ಅಲ್ಲದೇ ಮುಂದಿನ ತಿಂಗಳು ಬೃಹತ್ ಸಮಾವೇಶ ಆಯೋಜಿಸಲು ಪ್ರಸ್ತಾಪಿಸಲಾಗಿದೆ. ಪಕ್ಷದ ಸಿದ್ಧಾಂತವನ್ನು ಜನರಿಗೆ ತಲುಪಿಸಲು ಹಳ್ಳಿಗಳಲ್ಲಿ ಸಾರ್ವಜನಿಕ ಸಭೆ ಆಯೋಜಿಸಲು ಪಕ್ಷ ನಿರ್ಧರಿಸಿದೆ.
ಡಿಎಂಕೆ ಅಥವಾ ಬಿಜೆಪಿ ಜೊತೆ ಮೈತ್ರಿಯಿಲ್ಲ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಡಿಎಂಕೆ ಅಥವಾ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ತಮಿಳುನಾಡಿನಲ್ಲಿ ಬೆಳೆಯಲು ಸಾಧ್ಯವಿಲ್ಲ ಎಂದು ವಿಜಯ್ ಹೇಳಿದ್ದಾರೆ. ರಾಜಕೀಯ ಲಾಭಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ನಾವು ಡಿಎಂಕೆ ಅಥವಾ ಎಐಎಡಿಎಂಕೆ ರೀತಿಯ ಪಕ್ಷ ಅಲ್ಲ. ನಾವು ಟಿವಿಕೆ ಎಂದು ವಿಜಯ್ ಹೇಳಿದ್ದು, ಆ ಎರಡೂ ಪಕ್ಷಗಳಲ್ಲಿ ಇಲ್ಲದ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ನಿರ್ಣಯದಲ್ಲಿ ಒಪ್ಪಿಗೆ ನೀಡಲಾಗಿದೆ.
ಕೋಮು ಆಧಾರಿತವಾಗಿ ಜನರ ವಿಭಜನೆ: ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ವಿಜಯ್, ಕೆಟ್ಟ ರಾಜಕೀಯಕ್ಕಾಗಿ ಕೋಮು ಆಧಾರಿತವಾಗಿ ಜನರನ್ನು ವಿಭಜಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಅವರು ತಮಿಳುನಾಡು ಮಾತ್ರವಲ್ಲದೇ ದೇಶಾದ್ಯಂತ ಇಂತಹ ಹೀನಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
2024 ಫೆಬ್ರವರಿಯಲ್ಲಿ ಸೂಪರ್ ಸ್ಟಾರ್ ದಳಪತಿ ವಿಜಯ್ TVK ಪಕ್ಷವನ್ನು ಸ್ಥಾಪಿಸಿದರು. ಆದರೂ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಇದೀಗ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಭಾರಿ ತಯಾರಿ ನಡೆಸುತ್ತಿದೆ.