ಬೆಂಗಳೂರು : “ಮಳೆ ಕೈಕೊಟ್ಟ ಇಂತಹ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸಲು ಮೇಕೆದಾಟು ಯೋಜನೆ ನೆರವಾಗಲಿದ್ದು, ಈ ಯೋಜನೆ ಜಾರಿಗೆ ಸಹಕಾರ ನೀಡಬೇಕು” ಎಂದು ಡಿಸಿಎಂ ಹಾಗೂ ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ತಮಿಳುನಾಡಿಗೆ ಮನವಿ ಮಾಡಿದರು. ಕೆಪಿಸಿಸಿ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು
“ನಾವು ತಮಿಳುನಾಡಿಗೆ 10 ಟಿಎಂಸಿ ನೀರನ್ನು ನೀಡಲು ತಯಾರಿದ್ದೇವೆ. ನಾವು ಈಗ ಎಷ್ಟು ನೀರು ಲಭ್ಯವಿದೆಯೊ ಅಷ್ಟು ನೀರನ್ನು ಕೊಟ್ಟಿದ್ದೇವೆ. ನಮ್ಮ ರೈತರಿಗೂ ನೀರನ್ನು ಕೊಟ್ಟಿದ್ದೇವೆ. ನೀರು ಹಂಚಿಕೆ ವಿಚಾರವಾಗಿ ಯಾವುದೇ ಗದ್ದಲ ಬೇಡ, ಮಳೆ ಬಂದರೆ ಖಂಡಿತವಾಗಿ ನೀರನ್ನು ಕೊಡುತ್ತೇವೆ. ಕಳೆದ ಬಾರಿ 400 ಟಿಎಂಸಿ ನೀರನ್ನು ಸಮುದ್ರಕ್ಕೆ ಸೇರಿದೆ, ಗೊಂದಲಕ್ಕೆ ಅವಕಾಶ ಬೇಡ ಎಂದು ತಮಿಳುನಾಡಿನ ಬಳಿ ನಾವು ಮನವಿ ಮಾಡಿಕೊಳ್ಳುತ್ತೇವೆ. ಮೇಕೆದಾಟು ಯೋಜನೆ ಜಾರಿ ವಿಚಾರಕ್ಕೂ ನೀವು ಸಹಕಾರ ನೀಡುತ್ತಿಲ್ಲ. ಈ ರೀತಿಯ ಸಂಕಷ್ಟದ ಕಾಲದಲ್ಲಿ ಮೇಕೆದಾಟು ಯೋಜನೆ ನಿಮ್ಮ ಉಪಯೋಗಕ್ಕೆ ಬರುತ್ತದೆ.”
ಇದೇ ವೇಳೆ, “ಈ ಸ್ವಾತಂತ್ರ್ಯ ದಿನದಂದು ನಮ್ಮ ಜನರು “ಇಂಡಿಯಾ” ವನ್ನು ಬಲಪಡಿಸಬೇಕು ಎಂದು ಕರೆ ನೀಡಿದರು.
ದೇಶವನ್ನ ರಕ್ಷಿಸುವ ಸಾಮರ್ಥ್ಯ ಕಾಂಗ್ರೆಸ್ ನಾಯಕತ್ವಕ್ಕೆ ಇದೆ. ಬೆಂಗಳೂರು ಇದಕ್ಕೆ ಸಾಕ್ಷಿಯಾಗಿದೆ. ಮುಂದಿನ ದಿನಗಳಲ್ಲಿ ಬದಲಾವಣೆ ಖಂಡಿತಾ” ಎಂದು ಭವಿಷ್ಯ ನುಡಿದರು.