ಬಳ್ಳಾರಿ : ಜಿಲ್ಲೆಯಲ್ಲಿ ಮುಂಗಾರು ಆರಂಭವಾಗಿದ್ದು, ರೈತರು ಮುಂಜಾಗ್ರತಾ ಕ್ರಮವಾಗಿ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವುದು ಸೂಕ್ತವಾಗಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಹೇಳಿದರು.
ಅವರು ಬುಧವಾರದಂದು, ಕೃಷಿ ಸಂಬಂಧಿತ ಬೆಳೆ ವಿಮೆ, ಮಳೆ ಹಾಗೂ ಪ್ರವಾಹ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಗರದ ಅನಂತಪುರ ರಸ್ತೆಯ ನೂತನ ಪ್ರವಾಸಿ ಮಂದಿರ(ಐಬಿ)ದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ಪ್ರವಾಹ ಹಾಗೂ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದರೆ ರೈತರು ಪರಿಹಾರ ಪಡೆಯಲು ನೋಂದಾಯಿಸಿಕೊಳ್ಳಬೇಕಿದ್ದು, ವಿಮೆ ನೋಂದಣಿಗೆ ಇದು ಸಕಾಲವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೧.೬ ಲಕ್ಷ ರೈತರಿದ್ದು, ಇದರಲ್ಲಿ ಕೇವಲ ೧,೨೬೩ ರೈತರು ಮಾತ್ರ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಂಡಿದ್ದಾರೆ. ಇನ್ನು ಹೆಚ್ಚು ಹೆಚ್ಚು ರೈತರು ಬೆಳೆ ವಿಮೆಗೆ ನೋಂದಣಿ ಮಾಡಿಸಿಕೊಳ್ಳುವಂತೆ ಗ್ರಾಪಂ ವ್ಯಾಪ್ತಿಯಲ್ಲಿ ಜಾಗೃತಿ ನೀಡಲಾಗುತ್ತಿದೆ. ಆಯಾ ತಾಲ್ಲೂಕು ತಹಶೀಲ್ದಾರರಿಗೂ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.
ಮುಸುಕಿನ ಜೋಳ, ಜೋಳ, ಸೂರ್ಯಕಾಂತಿ, ತೊಗರಿ, ಹತ್ತಿ, ಕೆಂಪು ಮೆಣಸಿನ ಕಾಯಿ ಹಾಗೂ ಈರುಳ್ಳಿ ಬೆಳೆಗಳಿಗೆ ವಿಮೆಗಾಗಿ ನೊಂದಾಯಿಸಲು ಜುಲೈ ೩೧ ಮತ್ತು ಮಳೆಯಾಶ್ರಿತ ಬೆಳೆಗಳಾದ ರಾಗಿ, ನವಣೆ, ಹುರುಳಿ, ನೆಲಗಡಲೆ ಹಾಗೂ ನೀರಾವರಿ ಬೆಳೆಗಳಾದ ಸಜ್ಜೆ, ತೊಗರಿ, ಭತ್ತ ಬೆಳೆಗಳಿಗೆ ಆಗಸ್ಟ್ ೧೬ ರವರೆಗೆ ವಿಮೆಗೆ ನೋಂದಾಯಿಸಿಕೊಳ್ಳಲು ಅವಕಾಶ ಇರುತ್ತದೆ. ಆಸಕ್ತ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳು, ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಕಚೇರಿ ಅಥವಾ ಬ್ಯಾಂಕ್‌ಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ವಿಮೆಗೆ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಕಂದಾಯ ಸಚಿವರ ಸೂಚನೆಯಂತೆ, ಸಣ್ಣ, ಅತಿಸಣ್ಣ ರೈತರನ್ನು ಗುರುತಿಸಲು ಮತ್ತು ಬೆಳೆ ಪರಿಹಾರ ವಿತರಣೆ ಅನುಕೂಲವಾಗುವಂತೆ, ರೈತರ ಪಹಣಿಗಳಿಗೆ ಆಧಾರ್ ಜೋಡಣೆ ಮಾಡುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.೭೮ ರಷ್ಟು ಪೂರ್ಣಗೊಂಡಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸರ್ಕಾರಿ ಜಮೀನು ಒತ್ತುವರಿ, ಅತಿಕ್ರಮಣ, ಭೂಗಳ್ಳರಿಂದ ಸಂರಕ್ಷಿಸಲು ಕಂದಾಯ ಇಲಾಖೆಯು “ಲ್ಯಾಂಡ್ ಬೀಟ್” ಎಂಬ ಹೊಸ ತಂತ್ರಾಂಶ ಅಭಿವೃದ್ಧಿಪಡಿಸಿದೆ. ಕಂದಾಯ ಇಲಾಖೆಯಡಿ ಬರುವ ಸರ್ಕಾರ, ಗೋಮಾಳ ಸೇರಿದಂತೆ ಸರ್ಕಾರಿ ಆಸ್ತಿಗಳ ಭೌಗೋಳಿಕ ಗಡಿ ಮತ್ತು ಸರ್ವೇ ನಂಬರ್ ಒಳಗೊಂಡ ಮಾಹಿತಿಯ ಡಿಜಿಟಲ್ ದಾಖಲೆಗಳನ್ನು ಈ ತಂತ್ರಾಂಶ ಹೊಂದಲಿದೆ. ಜಿಲ್ಲೆಯಲ್ಲಿ ಇದಕ್ಕಾಗಿ ೫೫ ಸಾವಿರ ಆಸ್ತಿ ಗುರುತಿಸಲಾಗಿದ್ದು, ಶೇ. ೭೬ ರಷ್ಟು ಆಸ್ತಿಗಳಿಗೆ ಜಿಪಿಎಸ್ ದತ್ತಾಂಶ ತೆಗೆದುಕೊಳ್ಳಲಾಗಿದೆ. ಸರ್ಕಾರಿ ಆಸ್ತಿ ಒತ್ತುವರಿ ತೆರವು ಪ್ರಕರಣಗಳಲ್ಲಿ ಇದರಿಂದ ಅನುಕೂಲವಾಗಲಿದೆ ಎಂದರು.
ಆರ್.ಟಿ.ಸಿ. ಮಾಲೀಕರ ಮರಣ ಪ್ರಕರಣಗಳಲ್ಲಿ ಆಸ್ತಿಯನ್ನು ಅವರ ಕುಟುಂಬಸ್ಥರ ಅಥವಾ ವಾರಸುದಾರರ ಹೆಸರಿನಲ್ಲಿ ವರ್ಗಾಯಿಸಲು ಜಿಲ್ಲೆಯಲ್ಲಿ ವಿಶೇಷವಾಗಿ ಪೌತಿ ಖಾತೆ ಅಭಿಯಾನ ನಡೆಸಲಾಗುವುದು ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದರು.
ಪ್ರವಾಹ ಎದುರಿಸಲು ಜಿಲ್ಲಾಡಳಿತ ಸನ್ನದ್ಧ:
ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಹರಿದು ಬರುತ್ತಿದೆ. ಯಾವುದೇ ಕ್ಷಣದಲ್ಲಾದರೂ ತುಂಗಭದ್ರಾ ಜಲಾಶಯದಿಂದ ನೀರು ಹರಿಸುವ ಸಾಧ್ಯತೆ ಇದ್ದು, ನದಿ ಪಾತ್ರದ ಗ್ರಾಮಗಳಿಗೆ ಡಂಗೂರ ಮೂಲಕ ಜಾಗ್ರತೆ ವಹಿಸುವಂತೆ ಪ್ರಚಾರ ನೀಡಲಾಗುತ್ತಿದ್ದು, ಸಂಭವನೀಯ ಪ್ರವಾಹ, ಬೆಳೆ ಹಾನಿ ತಡೆಗಟ್ಟಲು ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ ಎಂದು ಡಿಸಿ ಮಿಶ್ರಾ ಅವರು ಹೇಳಿದರು.
ಮಳೆ ನೀರಿನಿಂದ, ನಿಂತ ನೀರು ಸಾಂಕ್ರಾಮಿಕ ರೋಗಗಳು ಉಂಟಾಗುವ ಸಾಧ್ಯತೆ ಇದ್ದು, ಈ ಕುರಿತು ಡೆಂಗ್ಯೂ, ಮಲೇರಿಯಾ ಸೇರಿದಂತೆ ಇತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಡೆಂಗ್ಯೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೆ ೧೧೪ ಪ್ರಕರಣಗಳು ದಾಖಲಾಗಿದ್ದು, ಪ್ರಸ್ತುತ ೨೩ ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಗುಣಮುಖರಾಗಿದ್ದಾರೆ. ಡೆಂಗ್ಯು ರೋಗ ಹರಡುವ ಈಡಿಸ್ ಸೊಳ್ಳೆ ನಿರ್ಮೂಲನೆಗೆ ವಾರದಲ್ಲಿ ಶುಕ್ರವಾರ ಒಂದು ದಿನ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ಬೆಂಬಲದೊಂದಿಗೆ ಮನೆ ಭೇಟಿ ನಡೆಸಿ ಸೊಳ್ಳೆ ಲಾರ್ವ ನಾಶಪಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ.ವಿ.ಜೆ., ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್ ಅವರು ಉಪಸ್ಥಿತರಿದ್ದರು.