ರಾಜ್ಯದ 42 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ

ವಾರದಲ್ಲಿ ಕೇಂದ್ರಕ್ಕೆ ಮೆಮೊರಾಂಡಮ್ ಸಲ್ಲಿಕೆ: ಸಚಿವ ಕೃಷ್ಣ ಬೈರೇಗೌಡ

ರಾಜ್ಯದ 195 ತಾಲೂಕುಗಳು ಬರಪೀಡಿತ ಎಂದು ಘೋಷಣೆ

ಸಂಪುಟದ ಅನುಮೋದನೆಯ ನಂತರ ವಾರದಲ್ಲಿ ಮೆಮೊರಾಂಡಮ್ ಸಲ್ಲಿಕೆ

5 ರಿಂದ 6 ಸಾವಿರ ಕೋಟಿ ಪರಿಹಾರ ಪಡೆಯಲು ಅವಕಾಶ

ಮೇವು-ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ

ಬೆಂಗಳೂರು : ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಈ ತಾಲೂಕುಗಳುಗಳಿಗೆ ಸಂಬಂಧ ಪಟ್ಟಂತೆ ಕೇಂದ್ರದ ಪರಿಹಾರಕ್ಕಾಗಿ ಮನವಿ ಸಲ್ಲಿಸಲು ಬೇಕಾಗಿರುವ ವರದಿಯನ್ನು (ಮೆಮೊರಾಂಡಮ್) ವಾರದಲ್ಲಿ ಸಲ್ಲಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ವಿಕಾಸಸೌಧದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, “ಈ ವರ್ಷ ರಾಜ್ಯಾದ್ಯಂತ ತೀವ್ರ ಮಳೆ ಕೊರತೆ ಎದುರಾಗಿದೆ. ಈಗಾಗಲೇ 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಅಂದಾಜಿನ ಪ್ರಕಾರ 40 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿಯಾಗಿದ್ದರೆ, 2 ಲಕ್ಷ ಹೆಕ್ಟೇರ್ ನಷ್ಟು ತೋಟಗಾರಿಕೆ ಬೆಳೆ ಹಾನಿಯಾಗಿದೆ. ಬರ ತಾಲೂಕುಗಳುಗಳಿಗೆ ಸಂಬಂಧ ಪಟ್ಟಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಬೇಕಾಗಿರುವ ವರದಿಯನ್ನು (ಮೆಮೊರಾಂಡಮ್) ತ್ವರಿತ ತಯಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

 

ಮೆಮೊರಾಂಡಮ್ ಸಿದ್ದಪಡಿಸುವ ಕೆಲಸ ಈಗಾಗಲೇ ಶೇ.70 ರಷ್ಟು ಮುಗಿದಿದೆ. ಮೇವಿಗೂ, ಕುಡಿಯುವ ನೀರಿಗೂ ಪ್ರತ್ಯೇಕ ಪರಿಹಾರದ ಅವಕಾಶವಿದ್ದು, ಮುಂದಿನ ಮೂರು ದಿನದಲ್ಲಿ ಈ ಎಲ್ಲವನ್ನೂ ಸೇರಿಸಿ ಸಂಪೂರ್ಣ ಮೆಮೊರಾಂಡಮ್ ತಯಾರಿಸಲಾಗುವುದು. ಎನ್ ಡಿ ಆರ್ ಎಫ್ ನಿಯಮಗಳ ಅನ್ವಯ ಒಟ್ಟಾರೆ 5 ರಿಂದ 6 ಸಾವಿರ ಕೋಟಿ ಪರಿಹಾರ ಪಡೆಯಲು ಅವಕಾಶ ಇದೆ. ಕೇಂದ್ರಕ್ಕೆ ಮನವಿ ಸಲ್ಲಿಸಿದ ಕೂಡಲೇ ಕೇಂದ್ರದ ಅಧಿಕಾರಿಗಳೂ ರಾಜ್ಯಕ್ಕೆ ಬಂದು ಪರಿಶೀಲನೆ ನಡೆಸುವ ಭರವಸೆ ನೀಡಿದ್ದಾರೆ. ಹೀಗಾಗಿ ಮೆಮೊರಾಂಡಮ್ ಅನ್ನು ಸಚಿವ ಸಂಪುಟದಲ್ಲಿ ಮಂಡಿಸಿ ಅನುಮೋದನೆ ಪಡೆದು ಈ ವಾರಾಂತ್ಯದೊಳಗೆ ಸಲ್ಲಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.

ಎರಡನೇ ಹಂತದಲ್ಲಿ ಮತ್ತೆ ಬರ ಘೋಷಣೆ

ಕೇಂದ್ರ ಬರ ಮಾರ್ಗಸೂಚಿ ಅನ್ವಯ ರಾಜ್ಯದ 161 ತಾಲೂಕುಗಳಲ್ಲಿ ತೀವ್ರ ಬರ ಎದುರಾಗಿದೆ. 34 ತಾಲೂಕುಗಳಲ್ಲಿ ಭಾಗಶಃ ಬರದ ಸ್ಥಿತಿ ಇದೆ. ಈ ಎರಡನ್ನೂ ಸೇರಿಸಿ ಕಳೆದ ವಾರ 195 ತಾಲೂಗಳಲ್ಲಿ ಬರ ಘೋಷಿಸಲಾಗಿದೆ. ಉಳಿದಂತೆ ಇನ್ನೂ 41 ತಾಲೂಕುಗಳಲ್ಲೂ ಸಹ ಪರಿಸ್ಥಿತಿ ಬಿನ್ನವಾಗೇನು ಇಲ್ಲ. ಆದರೆ, ಕೇಂದ್ರದ ಮಾರ್ಗಸೂಚಿಯಂತೆ ಈ ತಾಲೂಕುಗಳಲ್ಲಿ ಬರ ಘೋಷಣೆ ಸಾಧ್ಯವಿಲ್ಲ.

ಆದರೆ, ಅಕ್ಟೋಬರ್ ತಿಂಗಳ ಕೊನೆಯ ವರೆಗೆ  ಬೆಳೆ ಸಮೀಕ್ಷೆ ನಡೆಸಿ ಬರ ಘೋಷಣೆಗೆ ಅವಕಾಶ ಇದೆ. ಹೀಗಾಗಿ 195 ತಾಲೂಕುಗಳೇ ಅಂತಿಮವಲ್ಲ. ಬದಲಾಗಿ ಅಕ್ಟೋಬರ್ ತಿಂಗಳ ಮಳೆ ಪರಿಸ್ಥಿತಿ ಗಮನಿಸಿ ಮುಂದಿನ ದಿನಗಳಲ್ಲಿ ಬೆಳೆ ಸಮೀಕ್ಷೆ ಆಧರಿಸಿ ಮತ್ತೊಂದಷ್ಟು ತಾಲೂಕುಗಳನ್ನೂ ಎರಡನೇ ಪಟ್ಟಿಯಲ್ಲಿ “ಬರ ಪೀಡಿತ ಎಂದು ಘೋಷಿಸಲಾಗುವುದು. ಈ ಬಗ್ಗೆ ಕೇಂದ್ರಕ್ಕೆ ಮತ್ತೊಂದು ಮನವಿ (ಮೆಮೊರಾಂಡಮ್) ಸಲ್ಲಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

ನೀರಿಗೂ, ಮೇವಿಗೂ ಕೊರತೆ ಇಲ್ಲ:

ರಾಜ್ಯದಲ್ಲಿ ಸದ್ಯಕ್ಕೆ ಕುಡಿಯುವ ನೀರಿಗೆ ತೀವ್ರ ಅಭಾವ ಇಲ್ಲ. ಕುಡಿಯುವ ನೀರಿನ ಪೂರೈಕೆ ಸಲುವಾಗಿಯೇ ಎಲ್ಲಾ ಜಿಲ್ಲಾ ಪಂಚಾಯತ್ ಸಿಇಓ ಗಳ ಖಾತೆಗೆ ಈಗಾಗಲೇ ಒಂದು ಕೋಟಿ ರೂ. ಹಣವನ್ನು ವರ್ಗಾಯಿಸಲಾಗಿದೆ. ಅಲ್ಲದೆ, ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 462 ಕೋಟಿ ಹಣ ಇದೆ. ಈ ಹಣವನ್ನು ಕುಡಿಯುವ ನೀರು ಪೂರೈಕೆಗೆ ಬಳಸಲು ಸೂಚಿಸಲಾಗಿದೆ. ಮತ್ತಷ್ಟು ಹಣದ ಅಗತ್ಯ ಇದ್ದರೆ ಅದನ್ನೂ ಪೂರೈಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಅಗತ್ಯವಿದ್ದ ಸ್ಥಳಗಳಿಗೆ ಟ್ಯಾಂಕರ್ ಅಥವಾ ಖಾಸಗಿ ಬೋರ್ ಗಳ ಮೂಲಕ ನೀರು ಪೂರೈಕೆಗೆ ಮುಂದಾಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.

ಪಶುಗಳ ಮೇವಿನ ಕೊರತೆಗೆ ಸಂಬಂಧಿಸಿದ ಪತ್ರಕರ್ತರ ಪ್ರಶ್ನೆಗಳಿಗೂ ಉತ್ತರಿಸಿದ ಅವರು, ರಾಜ್ಯದಲ್ಲಿ ಮೇವಿನ ಕೊರತೆ ಇಲ್ಲ. ಬರ ಘೋಷಣೆಗೆ ಮುನ್ನವೇ ಅಗತ್ಯ ಮೇವಿನ ದಾಸ್ತಾನಿಗೆ ಸೂಚಿಸಲಾಗಿದೆ. ಅಲ್ಲದೆ, ನೀರಿನ ಲಭ್ಯತೆ ಇರುವ ರೈತರಿಗೆ ಮೇವಿನ ಭಿತ್ತನೆ ಬೀಜಗಳನ್ನು ಉಚಿತವಾಗಿ ವಿತರಿಸಲು 20 ಕೋಟಿ ರೂ. ನೀಡಲಾಗಿದೆ ಎಂದು ತಿಳಿಸಿದರು.

ಬರ ಘೋಷಿಸಿದ ಮೊದಲ ರಾಜ್ಯ ಕರ್ನಾಟಕ

ದೇಶದ ಹಲವು ರಾಜ್ಯಗಳಲ್ಲಿ ಇಂದು ಬರದ ಸ್ಥಿತಿ ಇದೆ. ಕೇರಳ, ಬಿಹಾರ, ಜಾರ್ಖಂಡ್, ಮಣಿಪುರ, ಮಿಜೋರಾಂ ರಾಜ್ಯಗಳಲ್ಲೂ ಈ ವರ್ಷ ತೀವ್ರ ಮಳೆ ಕೊರತೆ ಎದುರಾಗಿದೆ. ಆದರೆ, ಈ ಯಾವ ರಾಜ್ಯಗಳೂ ಈವರೆಗೆ “ಬರ ಘೋಷಣೆ ಮಾಡಿಲ್ಲ. ಆದರೆ, ಕರ್ನಾಟಕದಲ್ಲಿ ರಾಜ್ಯ ಮಾತ್ರ ಮುಂಜಾಗ್ರತಾ ಕ್ರಮವಾಗಿ ಬರ ಘೋಷಿಸಲಾಗಿದೆ. ಜೂನ್ ತಿಂಗಳಿಂದಲೂ ರಾಜ್ಯದ ಮಳೆ ವರದಿಯನ್ನು ಪ್ರತಿ ವಾರ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು. ಅಲ್ಲದೆ, ರಾಜ್ಯದ ರೈತರಿಗೆ ಸಂಪೂರ್ಣ ನಷ್ಟ ಕಟ್ಟಿಕೊಡಲಾಗಲ್ಲ. ಆದರೆ ಅವರ ಕಷ್ಟಕ್ಕೆ ರಾಜ್ಯ ಸರ್ಕಾರ ಖಂಡಿತ ನೆರವಾಗಲಾಗಲಿದೆ ಎಂದು ಅವರು ಭರವಸೆ ನೀಡಿದರು.

ಏನಿದು ಹಸಿರು ಬರ?

ಪ್ರಸ್ತುತ ದಿನಗಳಲ್ಲಿ ಊಹೆಗೂ ಮೀರಿ ಬದಲಾಗುತ್ತಿರುವ ಹವಾಮಾನದ ವಿಭಿನ್ನ ದ್ವಂದ್ವ ಬದಲಾವಣೆಯ ಪರಿಸ್ಥಿತಿಯಲ್ಲಿ “ಹಸಿರು ಬರ ಎಂಬ ಪದವನ್ನೂ ಮೆಮೊರಾಂಡಮ್ ನಲ್ಲಿ ಸೇರಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

ಬರ ಘೋಷಿತ ತಾಲೂಕುಗಳ ಹೊರತಾಗಿಯೂ ಅನೇಕ ತಾಲೂಕುಗಳಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಂದಿಲ್ಲ, ಬೆಳೆಯೂ ಕೈಸೇರಿಲ್ಲ. ಅಕಾಲಿಕ ಮಳೆಯ ಕಾರಣದಿಂದಾಗಿಯೂ ಒಂದಷ್ಟು ಬೆಳೆ ಹಾನಿಯಾಗಿದೆ. ಆದರೆ, ಈ ಅಕಾಲಿಕ ಮಳೆ ಭೂಮಿಯಲ್ಲಿ ತೇವಾಂಶಕ್ಕೆ ಕಾರಣವಾಗಿದೆ. ಸ್ಯಾಟಲೈಟ್ ಇಮೇಜ್ ನಲ್ಲಿ ವೀಕ್ಷಿಸಿದಾಗ ಬರ ಪೀಡಿತ ಪ್ರದೇಶದಲ್ಲೂ ತೇವಾಂಶದ ಹಸಿರು ಹೊದಿಕೆ ಕಂಡುಬರುತ್ತದೆ. ಕೇಂದ್ರ ಸರ್ಕಾರ ಬರ ಘೋಷಣೆಗೆ ಮುನ್ನ ಈ ಸ್ಯಾಟಲೈಟ್ ಇಮೇಜ್ ಗಳನ್ನು ಪರಿಶೀಲಿಸುವುದು ವಾಡಿಕೆ.

ಹೀಗಾಗಿ ಈ ಇಮೇಜ್ ಗಳು ಬರ ಘೋಷಣೆಗೆ ಬಹುದೊಡ್ಡ ಅಡ್ಡಿಯಾಗುತ್ತಿದೆ. ಇದನ್ನು ನಾವು “ಹಸಿರು ಬರ ಎಂದು ಹೆಸರಿಸಿದ್ದೇವೆ.

 

ಈ ಸಂಬಂಧ ಕೇಂದ್ರಕ್ಕೆ ಮನವಿ ಸಲ್ಲಿಸುವ ಮುನ್ನವೇ ಇಂತಹ ಪ್ರದೇಶಗಳಲ್ಲಿ ವೈಜ್ಞಾನಿಕ ಸಂಶೋಧನೆ ನಡೆಸುವ ಸಲುವಾಗಿ ರಾಜ್ಯದ ನಾಲ್ಕು ಕೃಷಿ ವಿಶ್ವವಿದ್ಯಾಲಯ ಹಾಗೂ ಒಂದು ತೋಟಗಾರಿಕಾ ವಿಶ್ವವಿದ್ಯಾಲಯದ ಸಂಶೋಧಕರನ್ನೂ ಕಳುಹಿಸಲಾಗಿತ್ತು. ಆ ವರದಿಯೂ ಕೈಸೇರಿದ್ದು ಮೆಮೊರಾಂಡಮ್ ನಲ್ಲಿ “ಹಸಿರು ಬರದ ಕುರಿತು ಉಲ್ಲೇಖಿಸಲಾಗುವುದು. ಸಮೀಕ್ಷೆಗಾಗಿ ರಾಜ್ಯಕ್ಕೆ ಆಗಮಿಸುವ ಕೇಂದ್ರದ ಅಧಿಕಾರಿಗಳಿಗೆ ವೈಜ್ಞಾನಿಕ ಮಾಹಿತಿಯೂ ನೀಡಲಾಗುವುದು. ಇದರಿಂದ ಹಲವು ರೈತರಿಗೆ ಅನುಕೂಲವಾಗಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.

Facebook
Twitter
LinkedIn
WhatsApp
Telegram
Email
Tumblr

Leave a Comment

Your email address will not be published. Required fields are marked *

Translate »
Scroll to Top