ಮುಖ್ಯ ಮಂತ್ರಿಗಳಿಲ್ಲದೇ ಸಚಿವ ಸಂಪುಟ ನಡೆಸುವ ಮೂಲಕ ಹೊಸ ಇತಿಹಾಸ ಸೃಷ್ಟಿ

ಬೆಂಗಳೂರು : ನಿನ್ನೆ ಕಾಂಗ್ರೆಸ್ ಸರ್ಕಾರ  ಹೊಸ ಇತಿಹಾಸ ಸೃಷ್ಟಿಸಿದೆ. ಮುಖ್ಯಮಂತ್ರಿಗಳಿಲ್ಲದೇ ಸಚಿವಸಂಪುಟದ ಸಭೆ ನಡೆದಿದೆ. ರಾಜ್ಯಪಾಲರ ನೋಟಿಸ್‌ಗೆ ಉತ್ತರ ಕೊಡಬೇಕಾದ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಕ್ಯಾಬಿನೆಟ್ ನಡೆಸಿ ರಾಜ್ಯಪಾಲರನ್ನು ಪ್ರಶ್ನಿಸುವ ಕೆಲಸ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ಷೇಪಿಸಿದ್ದಾರೆ.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾತನಾಡಿದ ಅವರು, ನಮ್ಮ ಪಾದಯಾತ್ರೆಯ ಮುಂಚಿತವಾಗಿ ಈ ಆಂದೋಲನ ಹಮ್ಮಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

 

ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಪಿತಾಮಹ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಹಗರಣಗಳ ಸಂಬಂಧ ಉತ್ತರ ಕೊಡಬೇಕಾದವರು. ಈ ಸರಕಾರ ರಾಜ್ಯದ ಜನರಿಗೆ ಶಾಪವಾಗಿದೆ. ಪಾದಯಾತ್ರೆ ಮೂಲಕ ತೊಡೆ ತಟ್ಟಿದ್ದೇವೆ. ಅವರು ಉತ್ತರ ಕೊಡಲಿ ಎಂದು ಪ್ರಶ್ನೆಗೆ ಉತ್ತರಿಸಿದರು. ಡಿ.ಕೆ.ಶಿವಕುಮಾರ್ ಅವರ ಬಾಯಲ್ಲಿ ಭ್ರಷ್ಟಾಚಾರದ ಕುರಿತ ಮಾತು ಬಾರದೇ ಇದ್ದರೆ ಒಳ್ಳೆಯದು ಎಂದು ತಿರುಗೇಟು ನೀಡಿದರು.

          ಕಾಂಗ್ರೆಸ್  ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ಬಿಜೆಪಿ ಮತ್ತು ಎನ್‌ಡಿಎ ಮಿತ್ರ ಪಕ್ಷ ಜೆಡಿಎಸ್ ಜಂಟಿಯಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಪಾದಯಾತ್ರೆ ರೂಟ್ ಮ್ಯಾಪ್ ಸಿದ್ಧವಾಗಿದೆ ಎಂದು ಹೇಳಿದರು.

          ಬಿಜೆಪಿ- ಜೆಡಿಎಸ್ ಜಂಟಿಯಾಗಿ ನಡೆಸುವ ಮೈಸೂರು ಚಲೋ ಪಾದಯಾತ್ರೆಗೆ ನಾಳೆ (ಆ.3) ಬೆಳಗ್ಗೆ ಚಾಲನೆ ಸಿಗಲಿದೆ. ಭ್ರಷ್ಟ ಕಾಂಗ್ರೆಸ್ ಹಾಗೂ ಹಗರಣಗಳ ಸರ್ಕಾರ ರಾಜ್ಯದಲ್ಲಿದೆ. ಇದು ಬಡವರ ವಿರೋಧಿ, ಪರಿಶಿಷ್ಟ ಸಮುದಾಯಗಳ ವಿರೋಧಿ ಸರ್ಕಾರ. ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ಶೂನ್ಯತೆಯ ಕೊಡುಗೆ ನೀಡಿದೆ. ಇದು ಅಸಮರ್ಥ ಸರ್ಕಾರ ಎಂದು ಟೀಕಿಸಿದರು.

 

          ಅಹಿಂದ ಹೆಸರಿನಿಂದ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು  ಆ ಎಲ್ಲ ಸಮುದಾಯಗಳಿಗೆ ಮೋಸ ಮಾಡಿದೆ. ಪರಿಶಿಷ್ಟರ ಹಣ ಲೂಟಿ ಮಾಡಿದೆ. ಬಿಜೆಪಿ- ಜೆಡಿಎಸ್ ಜೊತೆಗೂಡಿ ಸದನದ ಒಳಗೆ ಮತ್ತು ಹೊರಗೆ ನಾವು ಇದರ ವಿರುದ್ಧ ಹೋರಾಟ ಮಾಡಿ, ಸರ್ಕಾರವನ್ನು ಒಂಟಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದೇವೆ. ಹಗರಣ, ಭ್ರಷ್ಟಾಚಾರ ಸಂಬಂಧ ನಮ್ಮ ಪ್ರಶ್ನೆಗಳಿಗೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ಮೊದಲು ಉತ್ತರಿಸಲಿ ಎಂದರು.

8 ದಿನಗಳ ಪಾದಯಾತ್ರೆ :  ಮಾಜಿ ಮುಖ್ಯಮಂತ್ರಿ- ರೈತ ನಾಯಕ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನಾಳೆ ಪಾದಯಾತ್ರೆಗೆ ಚಾಲನೆ ಕೊಡುತ್ತಾರೆ. ಶನಿವಾರ ಬೆಳಿಗ್ಗೆ 8.30ಕ್ಕೆ ಕೆಂಗೇರಿ ಕೆಂಪಮ್ಮ ದೇವಸ್ಥಾನದ ಬಳಿ ಇರುವ ಮಂಜುನಾಥ ಕನ್ವೆನ್ಷನ್ ಹಾಲ್ ಬಳಿಯಿಂದ ಪಾದಯಾತ್ರೆ ಆರಂಭವಾಗಲಿದೆ. 8 ದಿನಗಳ ಪಾದಯಾತ್ರೆ ಇದಾಗಿರುತ್ತದೆ ಎಂದು ವಿಜಯೇಂದ್ರ ವಿವರಿಸಿದರು.

 

ಪಾದಯಾತ್ರೆ ರೂಟ್ ಮ್ಯಾಪ್ ಸಿದ್ಧ :  ನಾಳೆ ಸುಮಾರು 16 ಕಿಮೀ ಪಾದಯಾತ್ರೆ ಇರಲಿದೆ. ಎರಡನೇ ದಿನ ಭಾನುವಾರ ಮಂಜುನಾಥ ಕನ್ವೆನ್ಷನ್ ಹಾಲ್ ಬಿಡದಿಯಿಂದ ಆರಂಭಗೊಂಡು 22 ಕಿಮೀ, 5ರಂದು ಕೆಂಗಲ್ ಕೆವಿಕೆ ಕನ್ವೆನ್ಷನ್ ಹಾಲ್ ನಿಂದ ಆರಂಭವಾಗಿ ಸುಮಾರು 20 ಕಿಮೀ ಕ್ರಮಿಸುತ್ತೇವೆ. 6ರಂದು ನಿಡಘಟ್ಟ ಸುಮಿತ್ರಾದೇವಿ ಕನ್ವೆನ್ಷನ್ ಹಾಲ್ ನಿಂದ ಆರಂಭವಾಗಿ ಸುಮಾರು 20 ಕಿಮೀ ಕ್ರಮಿಸುತ್ತೇವೆ. 5ನೇ ದಿನ ಮಂಡ್ಯ ಶಶಿಕಿರಣ್ ಕನ್ವೆನ್ಷನ್ ಹಾಲ್ ನಿಂದ ಆರಂಭವಾಗಿ 16 ಕಿಮೀ, 8ರಂದು ಗುರುವಾರ ತೂಬಿನಕೆರೆ ಕೈಗಾರಿಕಾ ಪ್ರದೇಶದ ಬಳಿಯಿಂದ, 9ರಂದು ಶುಕ್ರವಾರ ಶ್ರೀರಂಗಪಟ್ಟಣ ಮಂಜುನಾಥ ಕಲ್ಯಾಣಮಂಟಪದಿಂದ ಆರಂಭವಾಗಲಿದೆ. 10ರಂದು ಮೈಸೂರಿನಲ್ಲಿ ಸಮಾರೋಪ ನಡೆಯಲಿದೆ ಎಂದರು.

ಪಾದಯಾತ್ರೆಯಲ್ಲಿ ಪ್ರತಿದಿನ ಕನಿಷ್ಠ ೮ರಿಂದ 10 ಸಾವಿರ ಜನರು ಪಾಲ್ಗೊಳ್ಳುತ್ತಾರೆ. ರಾಜ್ಯದ ಮೂಲೆ ಮೂಲೆಯಿಂದ ಕಾರ್ಯಕರ್ತರು ಬರಲಿದ್ದಾರೆ. ಎಲ್ಲರೂ ಉತ್ಸಾಹದಿಂದ ಭಾಗವಹಿಸುತ್ತಾರೆ. ಇದರ ರೂಟ್ ಮ್ಯಾಪ್ ಸಿದ್ಧಗೊಂಡಿದೆ ಎಂದು ವಿವರ ನೀಡಿದರು.

ಜೆಡಿಎಸ್ ಯಾವುದೇ ಷರತ್ತು ಹಾಕಿಲ್ಲ. ನಮ್ಮ ಪಾದಯಾತ್ರೆ ಯಶಸ್ವಿಯಾಗಿ ನಡೆಯಲಿದೆ ಎಂದು  ಪ್ರಶ್ನೆಗೆ ಅವರು ಉತ್ತರ ಕೊಟ್ಟರು.

ಹೋರಾಟಕ್ಕೆ ಸಂದ ಜಯ :  ಸುಪ್ರೀಂ ಕೋರ್ಟ್ ನಿನ್ನೆ ಎಸ್‌ಸಿ, ಎಸ್‌ಟಿ ಒಳ ಮೀಸಲಾತಿ ವಿಚಾರದಲ್ಲಿ ಒಂದು ತೀರ್ಪು ನೀಡಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ವರ್ಗೀಕರಣಕ್ಕೆ ರಾಜ್ಯಕ್ಕೆ ಅವಕಾಶ ಕೊಟ್ಟಿದ್ದು, 3 ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ ಎಂದರು.

ಇದರ ಹಿಂದೆ ಬಿಜೆಪಿ ಪರಿಶ್ರಮವಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮೀಸಲಾತಿ ಹೆಚ್ಚಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಯಾವತ್ತೂ ಸಾಮಾಜಿಕ ನ್ಯಾಯದ ಪರ ನಿಂತವರು. ಒಳ ಮೀಸಲಾತಿ ಪರವಾಗಿ ಕೇಂದ್ರ ಸರಕಾರ ವಕಾಲತ್ತು ಮಾಡಿತ್ತು ಎಂದರು. ಕೋರ್ಟ್ ತೀರ್ಪಿನ ತೀರ್ಪು ತುರ್ತಾಗಿ ಅನುಷ್ಠಾನದ ಮೂಲಕ ಎಲ್ಲ 101 ಜಾತಿಗಳಿಗೆ ನ್ಯಾಯ ಸಿಗುವಂತೆ ಮಾಡಬೇಕು ಎಂದು ರಾಜ್ಯದ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

 

ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ವಿ. ಸುನೀಲ್ ಕುಮಾರ್, ರಾಜ್ಯ ಕಾರ್ಯದರ್ಶಿ ಡಿ.ಎಸ್.ಅರುಣ್, ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಎ.ಎಸ್. ಪಾಟೀಲ್ ನಡಹಳ್ಳಿ ಅವರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top