ಬಿಜೆಪಿ ನಾಯಕರಿಗೆ ಸಂಕಟ?
ಬೆಂಗಳೂರು: ಮುಡಾ, ವಾಲ್ಮೀಕಿ ಹಗರಣಗಳನ್ನಿಟ್ಟುಕೊಂಡು ರಾಜ್ಯಸರ್ಕಾರದ ವಿರುದ್ಧ ಮುಗಿ ಬಿದ್ದಿರುವ ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸಿ ಅವರ ಬಾಯಿಗೆ ಬೀಗ ಹಾಕಲು ಕೋವಿಡ್ ಅಕ್ರಮ ಕಾಂಗ್ರೆಸ್‌ಗೆ ಒಂದು ಪ್ರಬಲ ಅಸ್ತ್ರವಾಗಿ ಸಿಕ್ಕಂತಾಗಿದೆ, ಹಾಗಾಗಿ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಬಿಜೆಪಿ ನಾಯಕರಿಗೆ ಬಿಸಿ ಮುಟ್ಟಿಸುವ ಬಗ್ಗೆ ಕಾಂಗ್ರೆಸ್‌ನಲ್ಲಿ ಚರ್ಚೆ ಸಮಾಲೋಚನೆಗಳು ನಡೆದಿದ್ದು, ಕೋವಿಡ್ ಅಕ್ರಮದ ತನಿಖಾ ಆಯೋಗದ ಶಿಫಾರಸ್ಸಿನಂತೆ ಕೋವಿಡ್ ಅಕ್ರಮದಲ್ಲಿ ಭಾಗಿಯಾಗಿದ್ದವರ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವ ತೀರ್ಮಾನವನ್ನು ರಾಜ್ಯಸರ್ಕಾರ ಕೈಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
ಬರುವ ಗುರುವಾರ ಸಚಿವ ಸಂಪುಟದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಕೋವಿಡ್ ಅಕ್ರಮದ ಬಗ್ಗೆ ನ್ಯಾಯಮೂರ್ತಿ ಜಾನ್‌ಮೈಕಲ್ ಕುನ್ಹಾ ಅವರು ಸಲ್ಲಿಸಿರುವ ಮಧ್ಯಂತರ ವರದಿಯನ್ನು ಮಂಡಿಸಿ ಆಯೋಗದ ಶಿಫಾರಸ್ಸಿನಂತೆ ಕೋವಿಡ್ ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಕೋವಿಡ್ ಅಕ್ರಮದ ಬಗ್ಗೆ ನೇಮಿಸಲಾಗಿದ್ದ ನ್ಯಾಯಮೂರ್ತಿ ಜಾನ್‌ಮೈಕಲ್ ಕುನ್ಹಾ ನೇತೃತ್ಬದ ತನಿಖಾ ಆಯೋಗ ಕೋವಿಡ್ ವೇಳೆ ವ್ಯಾಪಕ ಅಕ್ರಮ ನಡೆದಿದೆ. ಖರೀದಿಯಲ್ಲೂ ಸಾಕಷ್ಟು ಅವ್ಯವಹಾರಗಳಾಗಿದ್ದು, ಅಕ್ರಮದಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮಕೈಗೊಳ್ಳಿ ಎಂದು ಶಿಫಾರಸ್ಸು ಮಾಡಿರುವುದು ಬಿಜೆಪಿ ನಾಯಕರ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಗಿದೆ.
ಬಿಜೆಪಿ ನಾಯಕರಿಗೂ ಪ್ರಾಸಿಕ್ಯೂಷನ್ ಭೀತಿ ಎದುರಾಗಿದೆ
ರಾಜ್ಯದ ಕಾಂಗ್ರೆಸ್ ಸರ್ಕಾರ ಈ ರೀತಿಯ ತೀರ್ಮಾನ ಮಾಡಿದರೆ ಬಿಜೆಪಿ ನಾಯಕರು ಸಂಕಷ್ಟಕ್ಕೆ ಸಿಲುಕಿಲಿದ್ದು, ಕೋವಿಡ್ ಅಕ್ರಮ ಬಿಜೆಪಿಗರಿಗೆ ಉರುಳಾಗುವ ಸಾಧ್ಯತೆಗಳು ಹೆಚ್ಚಿವೆ. ಸರ್ಕಾರದ ನಿರ್ಧಾರದಿಂದ ಸದ ಬಿಜೆಪಿ ನಡೆಸಿರುವ ಹೋರಾಟಗಳಿಗೂ ಹಿನ್ನಡೆಯಾಗುವ ಸಾಧ್ಯತೆಗಳಿದ್ದು, ಕೋವಿಡ್ ಅಕ್ರಮ ಬಿಜೆಪಿಗೆ ಮುಜುಗರ ಉಂಟು ಮಾಡಿದೆ.
ಹಿಂದೆ ಅಧಿಕಾರದಲ್ಲಿದ್ದಾಗ ಮಾಡಿದ ತಪ್ಪಿಗೆ ಈಗ ಪರಿತಪಿಸುವಂತಹ ಪರಿಸ್ಥಿತಿಗೆ ಬಿಜೆಪಿ ನಾಯಕರು ತಲುಪಿದ್ದು, ಕೋವಿಡ್ ಅಕ್ರಮದ ಬಗ್ಗೆ ಕ್ರಿಮಿನಲ್ ಪ್ರಕರಣ ದಾಖಲಾದರೆ ಏನು ಮಾಡುವುದು, ಇದರಿಂದ ಪಾರಾಗುವ ಬಗೆ ಹೇಗೆ, ಸಾರ್ವಜನಿಕವಾಗಿ ಎದುರಾಗುವ ಟೀಕೆ-ಟಿಪ್ಪಣಿಗಳನ್ನು ಎದುರಿಸಲು ಏನೆಲ್ಲ ಮಾಡಬೇಕು ಎಂಬ ಬಗ್ಗೆ ಬಿಜೆಪಿ ನಾಯಕರುಗಳು ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಮಣಿಸಲು ಕೋವಿಡ್‌ಅಕ್ರಮದ ತನಿಖಾಸ್ತ್ರವನ್ನು ಬಳಸಲಿದ್ದು, ಬಿಜೆಪಿ ಪಾಲಿಗೆ ಕೋವಿಡ್ ಅಕ್ರಮ ನುಂಗಲಾದ ತುತ್ತಾಗಲಿದೆ.ಕೋವಿಡ್ ಕಾಲದಲ್ಲಿ ಅಧಿಕಾರದಲ್ಲಿದ್ದವರಿಗೆ ಕೋವಿಡ್ ಅಕ್ರಮಗಳ ತನಿಖೆ ಎದುರಿಸುವ ಪರಿಸ್ಥಿತಿ ಬರುವುದು ನಿಶ್ಚಿತ ಎಂದು ಹೇಳಲಾಗಿದೆ.
ಕೋವಿಡ್ ಅಕ್ರಮದ ಬಗ್ಗೆ ತನಿಖೆಗೆ ನೇಮಿಸಲಾಗಿದ್ದ ನ್ಯಾಯಮೂರ್ತಿ ಜಾನ್‌ಮೈಕಲ್ ಕುನ್ಹಾ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿದ್ದು, ಈ ವರದಿಯನ್ನು ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸಿ ನಂತರ ವರದಿಯನ್ನು ಬಹಿರಂಗಗೊಳಿಸಿ ವರದಿಯ ಶಿಫಾರಸ್ಸುಗಳನ್ನು ಜಾರಿ ಮಾಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ರಾತ್ರಿಯೇ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಕಾನೂನು ಸಚಿವ ಹೆಚ್.ಕೆಪಾಟೀಲ್,ಎಂ.ಬಿ. ಪಾಟೀಲ್, ಪ್ರಿಯಾಂಕಖರ್ಗೆ, ಕಾನೂನು ಸಲಹೆಗಾರ ಎ.ಎಚ್. ಪೊನ್ನಣ್ಣ ಸೇರಿದಂತೆ ಹಲವರ ಜತೆ ಚರ್ಚೆ ನಡೆಸಿದರು. ಬಿಜೆಪಿಯನ್ನು ಕಟ್ಟಿ ಹಾಕಲು ಈ ವರದಿಯನ್ನು ಪ್ರಬಲಾಸ್ತ್ರವಾಗಿ ಬಳಸಿಕೊಳ್ಳುವ ಬಗ್ಗೆಯೂ ಚರ್ಚೆಗಳು ನಡೆದವು ಎನ್ನಲಾಗಿದೆ.
ನ್ಯಾ.ಮೂರ್ತಿ ಕುನ್ಹಾ ವರದಿ ಪರಿಶೀಲಿಸಿ ಕ್ರಮ
ಕೋವಿಡ್ ಕಾಲದ ಅಕ್ರಮದ ಬಗ್ಗೆ ನ್ಯಾಯಮೂರ್ತಿ ಮೈಕಲ್‌ಜಾನ್ ಕುನ್ಹಾ ಅವರ ವರದಿ ಏನಿದೆ ಎಂಬುದನ್ನು ನೋಡಿಕೊಂಡು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ.ಸಂಪುಟ ಸಭೆಯಲ್ಲಿ ಈ ವರದಿ ಬಗ್ಗೆ ಚರ್ಚೆ ನಡೆಸುವ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು.
ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ಸಚಿವರುಗಳಿಗೆ ನೀಡಿದ ಔತಣ ಕೂಟದಲ್ಲಿ ನ್ಯಾಯಮೂರ್ತಿ ಜಾನ್‌ಮೈಕಲ್ ಕುನ್ಹಾ ಅವರ ವರದಿ ಬಗ್ಗೆ ಚರ್ಚೆ ಆಗಿಲ್ಲ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುವ ಸಂಬಂಧ ಮುಖ್ಯಮಂತ್ರಿಗಳು ತೀರ್ಮಾನಿಸುತ್ತಾರೆ. ಸಂಪುಟದ ಅಜೆಂಡಾದಲ್ಲಿ ವಿಷಯ ತಂದರೆ ಆ ಬಗ್ಗೆ ನಾವೆಲ್ಲ ಚರ್ಚೆ ನಡೆಸಿ ಮುಂದಿನ ತೀರ್ಮಾನ ಮಾಡುತ್ತೇವೆ ಎಂದರು.
ಕೋವಿಡ್ ಸಂದರ್ಭದಲ್ಲಿ ನಡೆದ ಅಕ್ರಮಗಳನ್ನು ಪತ್ತೆ ಹಚ್ಚಿ, ಸತ್ಯ ಏನೆಂಬುದನ್ನು ತಿಳಿಯಲು ಆಯೋಗವನ್ನು ರಚನೆ ಮಾಡಲಾಗಿತ್ತು. ಆಯೋಗದ ವರದಿ ಏನಿದೆ ಎಂಬುದನ್ನು ನೋಡಿಲ್ಲ. ವರದಿ ನೋಡಿಕೊಂಡು ಮುಂದಿನ ತೀರ್ಮಾನ ಮಾಡುತ್ತೇವೆ ಎಂದರು.
ನಿನ್ನೆ ನಡೆದ ಸಚಿವರ ಔತಣ ಕೂಟದ ಸಭೆಯಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ತೀರ್ಮಾನ ಮಾಡಿದ್ದೇವೆ. ಮುಖ್ಯಮಂತ್ರಿಗಳ ಪ್ರಾಸಿಕ್ಯೂಷನ್ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ನ್ಯಾಯಾಲಯದ ತೀರ್ಮಾನ ನೋಡಿಕೊಂಡು ರಾಷ್ಟ್ರಪತಿಗಳನ್ನು ಭೇಟಿ ಮಾಡುವ ಬಗ್ಗೆ ಚರ್ಚಿಸುತ್ತೇವೆ.ಅಗತ್ಯ ಬಿದ್ದರೆ ದೆಹಲಿಗೂ ಹೋಗುತ್ತೇವೆ ಎಂದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವುದೇ ಆತಂಕ ಇಲ್ಲ. ಅವರು ತಪ್ಪು ಮಾಡಿಲ್ಲ, ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿಲ್ಲ ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.
ವರದಿಯಲ್ಲಿ ಏನಿದೆ?
ನ್ಯಾಯಮೂರ್ತಿ ಜಾನ್‌ಮೈಕಲ್ ಕುನ್ಹಾ ನೇತೃತ್ಬದ ತನಿಖಾ ಆಯೋಗ ತಮ್ಮ ಮಧ್ಯಂತರ ವರದಿಯಲ್ಲಿ ಒಟ್ಟು 7,223.58 ಕೋಟಿ ರೂ. ಮೊತ್ತದ ಖರೀದಿ ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಹೇಳಿದ್ದು,ಕೋವಿಡ್ ಸಂದರ್ಭದ ಒಟ್ಟು ಖರೀದಿಗಳ ಪೈಕಿ ಆರೋಗ್ಯ ಇಲಾಖೆಯ 1,754,34 ಕೋಟಿ ರೂ. ಎನ್‌ಎಚ್‌ಎಂ 1,406,56 ಕೋಟಿ ರೂ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ 918.34 ಕೋಟಿ ರೂ., ಕರ್ನಾಟಕ ಡ್ರಗ್ ಲಾಜಿಸ್ಟಿಕ್ ಅಂಡ್ ವೇರ್ ಹೌಸಿಂಗ್ ಸೊಸೈಟಿಯ (ವೈದ್ಯಕೀಯ ಸಲಕರಣೆ) 1,394,59 ಕೋಟಿ ರೂ., ಕಿದ್ವಾಯಿ ಸ್ಮಾರಕ ಗಂಥಿ ಅಸ್ಪತ್ರೆಯ 264.37 ಕೋಟಿ ರೂ., ಬಿಬಿಎಂಪಿ ಕೇಂದ್ರ ವಲಯದ 732.41 ಕೋಟಿ ರೂ., ದಾಸರಹಳ್ಳಿ ವಲಯದ 26.26 ಕೋಟಿ ರೂ., ಪೂರ್ವ ವಲಯದ 78.09 ಕೋಟಿ ರೂ., ಮಹದೇವಪುರ ವಲಯದ 48.57 ಕೋಟಿ ರೂ., ರಾಜರಾಜೇಶ್ವರಿ ನಗರ ವಲಯದ ವ್ಯಾಪ್ತಿಯಲ್ಲಿನ 31.03 ಕೋಟಿ ರೂ. ಖರೀದಿ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಯಾವ್ಯಾವ ಹಂತದಲ್ಲಿ ಎಷ್ಟೆಷ್ಟು ಅಕ್ರಮ ನಡೆದಿದೆ ಎಂಬ ಬಗ್ಗೆ ವರದಿ ನೀಡಿದೆ.