58 ವರ್ಷದ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಧೃಡ

ಸಿರುಗುಪ್ಪ,ಡಿ.೦೬: ನಗರದ ಬಳ್ಳಾರಿ ರಸ್ತೆಯ ಕಮ್ಮಾವಾರಿ ಕಲ್ಯಾಣ ಮಂಟಪ ಎದುರುಗಡೆ ಇರುವ ಅಭಿನವ ಹೋಟೆಲ್ ಪಕ್ಕದಲ್ಲಿನ ೫೮ ವರ್ಷದ ವ್ಯಕ್ತಿಗೆ ಕೋವಿಡ್ ಪಾಸಿಟಿವ್ ಧೃಡಗೊಂಡಿರುವ ಬಗ್ಗೆ ವರದಿಯಾಗಿದೆ. ಸದರಿ ವ್ಯಕ್ತಿಯ ಗಂಟಲು ದ್ರಾವಣವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಎಂಥಹ ಪರಿಸ್ಥಿತಿಯನ್ನೂ ಎದುರಿಸಲು ಸದಾ ಸನ್ನದ್ಧರಾಗಿರುವಂತೆ ಜಿಲ್ಲಾಧಿ ಕಾರಿಗಳು ತಾಲೂಕು ವೈದ್ಯಾಧಿಕಾರಿ ಡಾ.ಈರಣ್ಣರಿಗೆ ಖಡಕ್ ಆದೇಶ ಮಾಡಿದ್ದಾರೆ. ಕೋವಿಡ್ ವೈರಾಣು ಹೆಚ್ಚು ಪಸರಿಸದಂತೆ ಹೆಚ್ಚು ಹೆಚ್ಚು ಕೋವಿಡ್ ಪರೀಕ್ಷೆಗಳನ್ನು ಮಾಡುವಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಲ್ಲದೇ ಇದುವರೆಗೂ ಲಸಿಕೆ ತೆಗೆದುಕೊಳ್ಳದೆ ಇರುವವರಿಗೆ ಲಸಿಕೆ ನೀಡುವುದು ಹಾಗೂ ಎರಡನೇ ಡೋಸನ್ನೂ ಪೂರ್ಣ ಮಾಡಿಕೊಳ್ಳಲು ಎಲ್ಲರಿಗೂ ಆದೇಶ ಮಾಡಿದ್ದಾರೆ.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಈರಣ್ಣ, ಕೋವಿಡ್ ಪಾಸಿಟಿವ್ ಧೃಡಗೊಂಡಿರುವ ಏರಿಯಾಗೆ ಸಿಬ್ಬಂದಿಗಳೊಡನೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಮೈಕೊರೆಯುತ್ತಿರುವ ಈ ಡಿಸೆಂಬರ್ ತಿಂಗಳ ಚಳಿಯಲ್ಲೂ ಮೈ ಬೆವರುವಂತ ಆಘಾತಕಾರಿ ಸುದ್ದಿ ಬಂದಿದ್ದು, ತಣ್ಣಗೆ ಇದ್ದ ಸಿರುಗುಪ್ಪ ತಾಲೂಕು ಬೆಚ್ಚಿ ಬೀಳುವಂತಾಗಿದೆ. ಸದ್ಯ ಈಗ ನಮ್ಮ ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳು ೨೧ ಆಗಿವೆ. ಇದು ಬೃಹತ್ ಆಕಾರಕ್ಕೆ ಮತ್ತೊಮ್ಮೆ ಮರುಕಳಿಸಬಹುದಾಗಿರುವ ಈ ದುರಂತ ಕಾಲದಲ್ಲಿ ಎಲ್ಲರೂ ಲಸಿಕೆ, ಕೋವಿಡ್ ಪರೀಕ್ಷೆ, ಮಾಸ್ಕ್. ಸ್ಯಾನಿಟೈಸರ್, ಸಾಮಾಜಿಕ ಅಂತರಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ ಇತರರಿಗೂ ತಿಳಿಸುತ್ತಾ ನಾಗರಿಕರೆಲ್ಲರೂ ಒಟ್ಟಾಗಿ ಈ ವಿಷಮ ಪರಿಸ್ಥಿತಿಯನ್ನು ಸಮರ್ಥವಾಗಿ, ದಿಟ್ಟವಾಗಿ ಎದುರಿಸೋಣ. ಹೆಚ್ಚಿನ ಉದ್ವೇಗಕ್ಕೆ ಯಾರೂ ಒಳಗಾಗದೆ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಅಥವಾ ಸರ್ಕಾರಿ ಆಸ್ಪತ್ರೆಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top