ಬೆಂಗಳೂರು:ಹಾಸನ ಜಿಲ್ಲೆ ಹೊಳೆನರಸೀಪುರದ ಮಹಿಳೆ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ನ್ಯಾಯಾಲಯದ ಷರತ್ತುಬದ್ಧ ಜಾಮೀನು ನೀಡಿದೆ. ಆದರೆ ಅವರ ಪುತ್ರ, ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣ ಲಂಡನ್ ನಲ್ಲಿ ತಲೆ ಮರೆಸಿಕೊಂಡಿದ್ದು, ವಾಪಸ್ ತರುವ ಪ್ರಕ್ರಿಯೆ ತೀವ್ರಗೊಂಡಿದೆ.
ಕಾಯ್ದಿರಿಸಿದ್ದ ತೀರ್ಪನ್ನು ಸೋಮವಾರ ಪ್ರಕಟಿಸಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಮೂರ್ತಿ ಜೆ.ಪ್ರೀತ್ ಅವರು 5 ಲಕ್ಷ ಬಾಂಬ್ ಹಾಗೂ ಒಬ್ಬರ ಶ್ಯೂರಿಟಿ ಒದಗಿಸುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಿತು.
ಈಗಾಗಲೇ ರೇವಣ್ಣ ಅವರಿಗೆ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನಲ್ಲಿ ಮಹಿಳೆ ಅಪಹರಣ ಮತ್ತು ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು. ಇದೀಗ ಎರಡೂ ಪ್ರಕರಣಗಳಲ್ಲಿ ರೇವಣ್ಣಗೆ ನ್ಯಾಯಾಲಯದಲ್ಲಿ ಜಾಮೀನು ಮಂಜೂರಾಗಿರುವ ಕಾರಣ ಸದ್ಯ ಅವರು ಪೊಲೀಸ್ ಬಂಧನದಿಂದ ಮುಕ್ತರಾಗಿದ್ದಾರೆ.
ಕಳೆದ ಶುಕ್ರವಾರ ರೇವಣ್ಣ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ನಾಗೇಶ್ ಅವರು, ತಮ್ಮ ಕಕ್ಷಿದಾರರ ಮೇಲೆ ಪೊಲೀಸರು ದಾಖಲಿಸಿರುವ ಪ್ರಕರಣಗಳಲ್ಲಿ ಎಲ್ಲವೂ ಜಾಮೀನು ನೀಡುವಂತಹ ಪ್ರಕರಣಗಳಾಗಿವೆ. ಅವರು ತನಿಖೆಗೆ ಸಹಕಾರ ನೀಡುತ್ತಿದ್ದು, ಎಲ್ಲಿಯೂ ವಿಚಾರಣೆಗೆ ಗೈರು ಹಾಜರಾಗಿಲ್ಲ ಎಂದು ಸಮರ್ಥಿಸಿಕೊಂಡರು.
ಮೇಲ್ನೋಟಕ್ಕೆ ಈ ಪ್ರಕರಣವು ರಾಜಕೀಯ ಪ್ರೇರಿತದಂತೆ ಕಾಣುತ್ತಿದೆ. ಸಂತ್ರಸ್ತೆ ಮಹಿಳೆಯು ಬರೆಯಲು ಬಾರದೆ ಇರುವಾಗ ಅದ್ಹೇಗೆ ಕಂಪ್ಯೂಟರ್‌ನಲ್ಲಿ ಬರೆಯುತ್ತಾರೆ ಎಂದು ಪ್ರಶ್ನೆ ಮಾಡಿದ್ದರು.