ಆರೋಗ್ಯ ಮತ್ತು ಆರೈಕೆಯಲ್ಲಿ ತಂತ್ರಜ್ಞಾನ ಬಳಕೆಯಿಂದ ಅನುಕೂಲ: ನಿವೃತ್ತ ನ್ಯಾ. ಸಂತೋಷ ಹೆಗ್ಡೆ
ಬೆಂಗಳೂರು : ಆರೋಗ್ಯ ನಿರ್ವಹಣೆಸ ಚಿಕಿತ್ಸೆ ಮತ್ತು ಆರೈಕೆಯಲ್ಲಿ ತಂತ್ರಜ್ಞಾನ ಬಳಕೆಯಿಂದ ಸಾಕಷ್ಟು ಅನುಕೂಲಗಳಿದ್ದು, ನಾಗರಿಕರು ಬಳಸಿಕೊಳ್ಳಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು.
ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಣಮಟ್ಟದ ಚಿಕಿತ್ಸೆ ಮತ್ತು ಕೈಗೆಟುಕವ ದರದಲ್ಲಿ ಆರೈಕೆ ನೀಡುವಲ್ಲಿ ಖ್ಯಾತಿ ಗಳಿಸಿರುವ ಕಾವೇರಿ ಆಸ್ಪತ್ರೆಯಲ್ಲಿ ದೇಶದಲ್ಲೇ ಮೊದಲು ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಜೀವನಶೈಲಿ ರೋಗಗಳು ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾವೇರಿ ಆಸ್ಪತ್ರೆಯಲ್ಲಿ ಇಂತಹ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆರೋಗ್ಯ ಸೇವಾ ವಿಭಾಗ ಉದ್ಘಾಟಿಸುತ್ತಿರುವುದಕ್ಕೆ ಸಂತೋಷವಾಗಿದೆ. ಆರೋಗ್ಯ ಸಮಸ್ಯೆ ಮತ್ತು ರೋಗಗಳನ್ನು ಪತ್ತೆ ಮಾಡಿ ಅಗತ್ಯ ಚಿಕಿತ್ಸೆ ಮತ್ತು ಆರೈಕೆಗಾಗಿ ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಬಳಕೆಯು ಅನುಕೂಲಕರವಾಗಿದೆ. ಇದರಿಂದ ಆರೋಗ್ಯ ಸೇವೆಯಲ್ಲಿ ಸುಧಾರಣೆಯಾಗುವ ಜೊತೆಗೆ ಒಟ್ಟಾರೆ ಜೀವನ ಗುಣಮಟ್ಟವು ಸುಧಾರಣೆ ಕಾಣುತ್ತದೆ ಎಂದು ನ್ಯಾ. ಸಂತೋಷ ಹೆಗ್ಡೆ ಹೇಳಿದರು.
ವೈಯಕ್ತಿಕ ಆರೋಗ್ಯ ಆರೈಕೆ, ಚಿಕಿತ್ಸೆ ಮತ್ತು ಪರಿಹಾರಗಳ ಅಗತ್ಯತೆ ದೇಶದಲ್ಲಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಕಾವೇರಿ ಆಸ್ಪತ್ರೆಯು ಎಐ ಆಧಾರಿತ ಜೀವನಶೈಲಿ ರೋಗಗಳು ವಿಭಾಗ ಆರಂಭಿಸಿರುವುದು ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಒದಗಿಸಿರುವ ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ದೀರ್ಘಕಾಲಿನ ಶ್ವಾಸಕೋಶ ಸಂಬಂಧಿಸಿದ ಕಾಯಿಲೆಗಳು ದೇಶದಲ್ಲಿ ಶೇ. 60ಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣವಾಗುತ್ತಿವೆ. ಆದರೆ, ರೋಗ ನಿಯಂತ್ರಣ, ಆರೈಕೆ ಸೇವಾ ವ್ಯವಸ್ಥೆಗಳ ಲಭ್ಯತೆ ಸೀಮಿತವಾಗಿದ್ದು, ಶೇ.10ರಷ್ಟು ಜನರು ರೋಗ ತಗುಲುವ ಮೊದಲೇ ತಪಾಸಣೆ ಅಥವಾ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾವೇರಿ ಸಮೂಹ ಆಸ್ಪತ್ರೆಯ ಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾದ ಡಾ. ಎಸ್. ಚಂದ್ರಕುಮಾರ್ ಮಾತನಾಡಿ, ಕಾವೇರಿ ಆಸ್ಪತ್ರೆಯ ಹೊಸ ವಿಭಾಗವು ಆರೋಗ್ಯ ನಿರ್ವಹಣೆಯಲ್ಲಿ ಸಮಗ್ರ ರೋಗ ಪತ್ತೆ ಮತ್ತು ಚಿಕಿತ್ಸಾ ಕ್ರಮವನ್ನು ಒದಗಿಸುತ್ತದೆ. ಆಧುನಿಕ ತಂತ್ರಜ್ಞಾನಗಳಾದ ಕೃತಕ ಬುದ್ಧಿಮತ್ತೆ ಮತ್ತು ಮಾಹಿತಿ ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳನ್ನು ಜೀವನಶೈಲಿ ಆಧಾರದ ಮೇಲೆ ಆರಂಭದಲ್ಲೇ ಪತ್ತೆ ಹಚ್ಚಿ ಅವುಗಳ ನಿರ್ವಹಣೆ ಮತ್ತು ಗಂಭೀರ ಸ್ವರೂಪ ಪಡೆಯದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಗುತ್ತದೆ. ಜೀವನ ಶೈಲಿಯಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು, ಅವುಗಳನ್ನು ನಿಯಂತ್ರಿಸುವುದು ಮತ್ತು ಪುನಃ ಬಾರದಂತೆ ತಡೆಯುವುದು ಬಹು ಮುಖ್ಯವಾಗಿದೆ. ನೂತನ ವಿಭಾಗದಲ್ಲಿ ಈ ರೀತಿಯ ಚಿಕಿತ್ಸಾ ಕ್ರಮಗಳಿವೆ ಎಂದು ತಿಳಿಸಿದರು.
ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಸ್. ವಿಜಯಭಾಸ್ಕರ್ ಮಾತನಾಡಿ, ನಮ್ಮ ಇತ್ತೀಚಿನ ವಿಶ್ಲೇಷಣೆ ಪ್ರಕಾರ ಡಯಾಬಿಟಿಸ್ ಅನ್ನು ತಡೆಯುವಲ್ಲಿ ಮತ್ತು ನಿರ್ವಹಣೆಯಲ್ಲಿ ಆರಂಭಿಕ ರೋಗ ಪತ್ತೆ ಮತ್ತು ಚಿಕಿತ್ಸಾ ಕ್ರಮಗಳು ಬಹಳ ಅನುಕೂಲವಾಗುತ್ತವೆ. ಅಧ್ಯಯನದ ಪ್ರಕಾರ, ಇನ್ಸುಲಿನ್ ಪಡೆಯುತ್ತಿದ್ದವರ ಪೈಕಿ ಶೇ.53 ರಷ್ಟು ರೋಗಿಗಳು ಇನ್ಸುಲಿನ್ ಪಡೆಯುವುದನ್ನು ನಿಲ್ಲಿಸಿದ್ದಾರೆ. ಶೇ.30%ರಷ್ಟು ರೋಗಿಗಳಲ್ಲಿ ಇನ್ಸುಲಿನ್ ಡೋಸ್ ಪ್ರಮಾಣ ಕಡಿಮೆಯಾಗಿದೆ. ಅಲ್ಲದೆ ಹೃದಯ ಸಂಬಂಧಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಲ್ಲಿ ಶೇ. 50ರಷ್ಟು ಸುಧಾರಣೆ ಕಾಣಿಸಿದೆ. ಕಿಡ್ನಿ ರೋಗ ನಿರ್ವಹಣೆ ಕಾರ್ಯಕ್ರಮದಲ್ಲಿ ಆಸ್ಪತ್ರೆಗೆ ಪದೇ ಪದೇ ಭೇಟಿ ನೀಡುವ ಪ್ರಮಾಣ ಶೇ.50ರಷ್ಟು ಕಡಿಮೆಯಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ರೋಗಿಗಳಿಗೆ ಉತ್ತಮ ಆರೈಕೆ ಮತ್ತು ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈಗ ಕಾವೇರಿ ಆಸ್ಪತ್ರೆಯಲ್ಲಿ ಆರಂಭವಾಗುತ್ತಿರುವ ಜೀವನ ಶೈಲಿ ಆಧಾರಿತ ರೋಗಗಳು ವಿಭಾಗವು ಅನೇಕ ಮಾದರಿಯ ಸೇವೆಗಳನ್ನು ನೀಡಲಿದೆ ಎಂದು ತಿಳಿಸಿದರು.
ಜೀವನ ಶೈಲಿ ರೋಗಗಳು ವಿಭಾಗದ ಮುಖ್ಯಸ್ಥರಾದ ಡಾ. ರಾಜಕುಮಾರ್ ಚನ್ನಬಸವಯ್ಯ ಮಾತನಾಡಿ, ನಮ್ಮ ಎಐ ಆಧಾರಿತ ಚಿಕಿತ್ಸಾ ವಿಭಾಗವು ಡಯಾಬಿಟಿಸ್ ನಿಯಂತ್ರಣ ಕಾರ್ಯಕ್ರಮಗಳು, ತೂಕ ನಿಯಂತ್ರಣ ಪರಿಹಾರ ಕ್ರಮಗಳು, ಹೈಪರ್ ಟೆನ್ಷನ್ ಮತ್ತು ಹೃದಯ ಆರೈಕೆ, ಪಿಸಿಓಎಸ್ ನಿರ್ವಹಣೆ, ಅಸ್ತಮಾ, ಕಿಡ್ನಿ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಆರೈಕೆ, ಪರಿಹಾರ ಮತ್ತು ಚಿಕಿತ್ಸೆಯನ್ನು ನೀಡಲಿದೆ. ರೋಗಿಗಳಿಗೆ ಅವರ ಆರೋಗ್ಯ ಸಮಸ್ಯೆ ಮತ್ತು ಅಗತ್ಯಕ್ಕೆ ತಕ್ಕಂತೆ ಪೌಷ್ಟಿಕ ಆಹಾರ, ವ್ಯಾಯಾಮ ಯೋಜನೆಗಳು, ಔಷಧಿ ಸೇವನೆ ಕುರಿತು ಸಲಹೆ ನೀಡಲಾಗುತ್ತದೆ. ದಿನದ 24 ತಾಸು ಕಾಲ ರೋಗಿಗಳು ಧರಿಸಿರುವ ಉಪಕರಣಗಳ ಮೂಲಕ ಆರೋಗ್ಯ ನಿರ್ವಹಣೆ, ಮೇಲ್ವಿಚಾರಣೆ ಮಾಡಲಾಗುತ್ತದೆ. ಅದಕ್ಕಾಗಿ ವೈದ್ಯರು, ಪ್ರಯೋಗಾಲಯ ತಜ್ಞರು ಸೇರಿದಂತೆ ಅಗತ್ಯ ವೈದ್ಯಕೀಯ ತಂಡಗಳು ನಿಯಮಿತವಾಗಿ ಪರಿಶೀಲನೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.