ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ನ.15 ರಂದು ಚುನಾವಣೆ ನಡೆಯಲಿದ್ದು, ನೂತನ ಮೇಯರ್ ಚುನಾಯಿಸಲು ದಿನಗಣನೆ ಆರಂಭವಾಗಿದೆ. ಬಳ್ಳಾರಿ ನಗರ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮೇಯರ್ –ಉಪ ಮೇಯರ್ ಆಯ್ಕೆಯು ಅವಿರೋಧವಾಗಿ ನಡೆಯುವ ಸಾಧ್ಯತೆಗಳಿದ್ದರೂ, ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿನ ಆಕಾಂಕ್ಷಿಗಳಿರುವುದರಿಂದ, ಕೆಪಿಸಿಸಿಯು ಪಕ್ಷದ ವೀಕ್ಷಕರನ್ನು ಗುರುವಾರ ಕಳುಹಿಸಿಕೊಡಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ನಾಳೆ ಮಧ್ಯಾಹ್ನದ ವೇಳೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಕಳುಹಿಸಲಿರುವ ಚುನಾವಣಾ ವೀಕ್ಷಕರು, ಬಳ್ಳಾರಿಯಲ್ಲಿ ಕಾಂಗ್ರೆಸ್ ಮುಖಂಡರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು-ಸಂಸದರುಗಳ ಜೊತೆ ಸಭೆ ನಡೆಸಲಿದ್ದಾರೆ. ಅಂತೆಯೇ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದ ಪಾಲಿಕೆ ಸದಸ್ಯರು ಹಾಗೂ ಪಕ್ಷೇತರರಾಗಿ ಆಯ್ಕೆಯಾಗಿ, ಆನಂತರ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಪಾಲಿಕೆ ಸದಸ್ಯರುಗಳೊಂದಿಗೆ ನೇರಾ-ನೇರ ಚರ್ಚಿಸಿ, ಎಲ್ಲರ ಅಭಿಪ್ರಾಯ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಮಾಜಿ ಶಾಸಕ ಆರ್.ವಿ.ವೆಂಕಟೇಶ್ ಹಾಗೂ ರಾಜ್ಯ ಕಾಂಗ್ರೆಸ್ ಧುರೀಣ ಸೂರಜ್ಹೆಗಡೆ ಅವರು ಬಳ್ಳಾರಿ ಮೇಯರ್ – ಉಪ ಮೇಯರ್ ಆಯ್ಕೆಗಾಗಿ, ಕಾಂಗ್ರೆಸ್ ಪಕ್ಷದ ವೀಕ್ಷಕರಾಗಿ ಆಗಮಿಸಲಿದ್ದು, ಸರ್ವ ಸಮ್ಮತ ಅಭ್ಯರ್ಥಿಗಳ ಆಯ್ಕೆ ನಡೆಯುವಂತೆ ಶ್ರಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಾರಿಯ ಬಳ್ಳಾರಿ ನಗರ ಪಾಲಿಕೆಯ ಮೇಯರ್ ಹುದ್ದೆಯು ಸಾಮಾನ್ಯ ವರ್ಗಕ್ಕೆ ಹಾಗೂ ಉಪ – ಮೇಯರ್ ಹುದ್ದೆಯು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಕಾಂಗ್ರೆಸ್ ಕಾರ್ಪೊರೇಟರ್ಗಳಲ್ಲಿ ತೀವ್ರ ಪೈಪೋಟಿ ನಡೆಯಲಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್ ವೀಕ್ಷಕರು ಹಾಗೂ ಮುಖಂಡರು ಎಲ್ಲರ ಮನವೊಲಿಸಿ, ಸರ್ವ ಸಮ್ಮತ ಅಭ್ಯರ್ಥಿಯನ್ನು ಅವಿರೋಧ ಆಯ್ಕೆಯಾಗುವವಂತೆ ನೋಡಿಕೊಳ್ಳಲಿದ್ದಾರೆ ಎಂದು ಪಕ್ಷದ ಧುರೀಣರು ತಿಳಿಸಿದ್ದಾರೆ. ಮೇಯರ್- ಉಪ ಮೇಯರ್ ಚುನಾವಣೆಯ ಜೊತೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಯೂ ನ.15 ರಂದು ನಡೆಯಲಿದೆ.
ಮೇಯರ್ – ಉಪ ಮೇಯರ್ ಆಯ್ಕೆಗೆ ದಿನ ಗಣನೆ



