ಪಾಲಿಕೆ ಮೇಯರ್ ಅಭ್ಯರ್ಥಿ ಆಯ್ಕೆ ವೀಕ್ಷಕರ ಅಂಗಳಕ್ಕೆ..!

೧೧ ಜನ ಆಕಾಂಕ್ಷಿಗಳು ಪ್ರಭಂಜನ್, ಆಸೀಫ್ ನಡುವೆ ಪೈಪೋಟಿ ವೀಕ್ಷಕರ ಆಗಮನ, ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ

Kannada Nadu
ಪಾಲಿಕೆ ಮೇಯರ್ ಅಭ್ಯರ್ಥಿ ಆಯ್ಕೆ ವೀಕ್ಷಕರ ಅಂಗಳಕ್ಕೆ..!

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ನೂತನ ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೆ ನ.೧೫ ರಂದು ಚುನಾವಣೆ ನಡೆಯಲಿದ್ದು, ನೂತನ ಮೇಯರ್ ಆಯ್ಕೆಗೆ ಕ್ಷಣಗಣನೆ ಆರಂಭವಾಗಿದೆ.
ಬಳ್ಳಾರಿ ನಗರ ರಾಜಕೀಯ ವಲಯದಲ್ಲಿ ತೀವ್ರ ಆಸಕ್ತಿ ಮೂಡಿಸಿರುವ, ಮೇಯರ್-ಉಪ ಮೇಯರ್ ಆಯ್ಕೆಯು ಅವಿರೋಧವಾಗಿ ನಡೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದು, ಮೇಯರ್ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮುಂದಾ ಗಿರುವ ಪಾಲಿಕೆ ಸದಸ್ಯರು, ಈ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲು ಸಜ್ಜಾಗಿರುವುದು ಕುತೂಹಲ ಮೂಡಿಸಿದೆ.
ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಇದೀಗ ೨೦೨೫-೨೬ನೇ ಸಾಲಿಗೂ ಮೇಯರ್ ಸ್ಥಾನ ಪುನಃ ಸಾಮಾನ್ಯ ವರ್ಗಕ್ಕೆ, ಉಪಮೇಯರ್ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
ಮೇಯರ್ ಸ್ಥಾನಕ್ಕೆ ಮೂರನೇ ವಾರ್ಡ್ ಸದಸ್ಯ ಮುಂಡ್ಲೂರು ಪ್ರಭಂಜನ್‌ಕುಮಾರ್, ೨೩ನೇ ವಾರ್ಡ್ ಸದಸ್ಯ ಪಿ.ಗಾದೆಪ್ಪ, ೩೦ನೇ ವಾರ್ಡ್ ಸದಸ್ಯ ಆಸೀಫ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ತಿಳಿದುಬಂದಿದ್ದು, ಮೇಯರ್ ಆಯ್ಕೆ ಜವಾಬ್ದಾರಿ ಕೆಪಿಸಿಸಿ ನಿಯೋಜಿಸಿರುವ ವೀಕ್ಷಕರ ಮೇಲಿದೆ.
ಪಾಲಿಕೆಯಲ್ಲಿ ಸದಸ್ಯರ ಚರ್ಚೆ
ಮೇಯರ್ ಸ್ಥಾನದ ಆಕಾಂಕ್ಷಿಯಾಗಿರುವ ೩ನೇ ವಾರ್ಡ್ ಸದಸ್ಯ ಪ್ರಭಂಜನ್ ಕುಮಾರ್ ಅವರು, ಈ ಹಿಂದೆಯೂ ಎರಡು ಬಾರಿ ಮೇಯರ್ ಸ್ಥಾನವನ್ನು ತಮಗೆ ನೀಡುವಂತೆ ಶಾಸಕರಾದ ನಾರಾ ಭರತ್‌ರೆಡ್ಡಿ, ಬಿ.ನಾಗೇಂದ್ರ, ರಾಜ್ಯಸಭೆ ಸದಸ್ಯ ಡಾ|| ಸೈಯದ್ ನಾಸೀರ್ ಹುಸೇನ್ ಸೇರಿ ಪಕ್ಷದ ವೀಕ್ಷಕರು, ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದರು. ಆಗ ಕೆಲವೊಂದು ಕಾರಣಗಳಿಂದ ಬೇರೆಯವರಿಗೆ ನೀಡಿದರೂ, ಪಕ್ಷದ ನಿರ್ಣಯಕ್ಕೆ ತಲೆಬಾಗಿ ಸೈಲೆಂಟ್ ಆಗಿದ್ದರು. ಇದೀಗ ಮೇಯರ್ ಸ್ಥಾನ ಪುನಃ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಮೂರನೇ ಬಾರಿಗೂ ಪ್ರಭಂಜನ್ ಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದು, ಇದು ಇತರೆ ಆಕಾಂಕ್ಷಿಗಳಲ್ಲಿ ಅಸಮಾಧಾನ ಮೂಡಿಸಿದೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಎರಡು ಅವಧಿಗೂ ಒಂದೇ ಸಮುದಾಯದವರು ಮೇಯರ್ ಆಗಿದ್ದರು. ಇದೀಗ ಪುನಃ ಅದೇ ಸಮುದಾಯಕ್ಕೆ ನೀಡಬೇಕೇ..? ಎಂಬುದು ಕೆಲವು ಸದಸ್ಯರ ಪ್ರಶ್ನೆಯಾಗಿದೆ. ಪ್ರಭಂಜನ್ ಅವರಿಗೆ ಮೇಯರ್ ಸ್ಥಾನ ನೀಡುವಂತೆ ಬೆಂಬಲಿಸುತ್ತಿರುವ ೧೬ಕ್ಕೂ ಹೆಚ್ಚು ಸದಸ್ಯರು, ಪಾಲಿಕೆಯ ನಗರ ಶಾಸಕರ ಕಚೇರಿಯಲ್ಲಿ ಈ ಕುರಿತು ಚರ್ಚಿಸಿ ನಿರ್ಣಯ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
೧೧ ಆಕಾಂಕ್ಷಿಗಳು; ಮೇಯರ್ ಸ್ಥಾನಕ್ಕೆ ಸದಸ್ಯರಾದ ಆಸೀಫ್, ಪಿ.ಗಾದೆಪ್ಪ ಅವರು ಸಹ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಈ ಹಿಂದೆಯೂ ಮೇಯರ್ ಸ್ಥಾನಕ್ಕಾಗಿ ಸತತವಾಗಿ ಪ್ರಯತ್ನಗಳನ್ನು ಮಾಡಿದ್ದಾರೆ. ಇದೀಗ ಇವರೊಂದಿಗೆ ೨೦ನೇ ವಾರ್ಡ್ ಸದಸ್ಯ ಪೇರಂ ವಿವೇಕ್, ೮ನೇ ವಾರ್ಡ್ ಸದಸ್ಯ ರಾಮಾಂಜಿನಿ, ೬ನೇ ವಾರ್ಡ್ ಸದಸ್ಯೆ ಪದ್ಮರೋಜಾ, ೭ನೇ ವಾರ್ಡ್ ಸದಸ್ಯೆ ಉಮಾದೇವಿ ಶಿವರಾಜ್ ಸೇರಿ ಒಟ್ಟು ಮೇಯರ್ ಸ್ಥಾನದ ೧೧ ಜನ ಆಕಾಂಕ್ಷಿಗಳ ಪಟ್ಟಿಯನ್ನು ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ಅವರು, ಕೆಪಿಸಿಸಿಯಿಂದ ವೀಕ್ಷಕರಾಗಿ ಆಗಮಿಸುವ ಆರ್.ವಿ.ವೆಂಕಟೇಶ್, ಸೂರಜ್ ಹೆಗಡೆ ಅವರಿಗೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇಂದು ರಾತ್ರಿ ಅಥವಾ ನಾಳೆ ಬಳ್ಳಾರಿಗೆ ಆಗಮಿಸುವ ವೀಕ್ಷಕರು ಸ್ಥಳೀಯ ಶಾಸಕರು, ಸಂಸದರೊAದಿಗೆ ಚರ್ಚಿಸಿ, ಪಾಲಿಕೆಯ ಕಾಂಗ್ರೆಸ್ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿ ಅಂತಿಮ ನಿರ್ಣಯವನ್ನು ಕೈಗೊಳ್ಳಲಿದ್ದು, ಮೇಯರ್ ಆಗುವ ಭಾಗ್ಯ ಯಾರಿಗೆ ಒಲಿಯಲಿದೆ ಎಂಬುದನ್ನು ಇನ್ನೆರಡು ದಿನಗಳ ಕಾಲ ಕಾದು ನೋಡಬೇಕಾಗಿದೆ.

ಬಳ್ಳಾರಿ ಪಾಲಿಕೆ ಮೇಯರ್ ಸ್ಥಾನಕ್ಕೆ ಈ ಹಿಂದೆ ಎರಡು ಬಾರಿ ಆಕಾಂಕ್ಷಿಯಾಗಿದ್ದೆ. ತಮಗೆ ಅವಕಾಶ ನೀಡುವಂತೆಯೂ ಸ್ಥಳೀಯ ಶಾಸಕರಾದ ನಾರಾ ಭರತ್ ರೆಡ್ಡಿ, ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ, ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ ಸೇರಿದಂತೆ, ರಾಜ್ಯಸಭೆ ಸದಸ್ಯರು, ಕೆಪಿಸಿಸಿ ವೀಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದೆ. ಆದರೆ, ಆಗ ಕೆಲ ಕಾರಣಗಳಿಂದ ಬೇರೆಯವರಿಗೆ ಅವಕಾಶ ಕಲ್ಪಿಸಲಾಯಿತು. ಪಕ್ಷದ ನಿರ್ಣಯಕ್ಕೆ ತಲೆಬಾಗಿ ನಾನು ಸೈಲೆಂಟ್ ಆಗಿದ್ದೆ. ಇದೀಗ ಮೂರನೇ ಬಾರಿಗೂ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರಿಂದ ಈಗಲಾದರೂ ನನಗೆ ಮೇಯರ್ ಸ್ಥಾನವನ್ನು ನೀಡುವಂತೆ ವರಿಷ್ಠರು, ವೀಕ್ಷಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ನಮ್ಮ ಕುಟುಂಬ ಆರಂಭದಿAದಲೂ ಕಾಂಗ್ರೆಸ್ ಕುಟುಂಬವಾಗಿದ್ದು, ನನಗೆ ಟಿಕೇಟ್ ಸಿಗದಿದ್ದಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು, ಪುನಃ ಕಾಂಗ್ರೆಸ್ ಪಕ್ಷದಲ್ಲೇ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದ್ದೇನೆ. ಮೇಲಾಗಿ ೧೬ಕ್ಕೂ ಹೆಚ್ಚು ಸದಸ್ಯರು ನನ್ನ ಬೆಂಬಲಿಸುತ್ತಿರುವುದರಿAದ ಈ ಬಾರಿಯಾದರೂ ನನಗೆ ಮೇಯರ್ ಸ್ಥಾನವನ್ನು ನೀಡಬೇಕು ಎಂದು ವರಿಷ್ಠರಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ.
– ಎಂ.ಪ್ರಭAಜನ್ ಕುಮಾರ್, ಪಾಲಿಕೆ ೩ನೇ ವಾರ್ಡ್ ಸದಸ್ಯರು, ಬಳ್ಳಾರಿ

ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಸ್ಥಾನದ ಆಕಾಂಕ್ಷಿಗಳಾಗಿರುವ ೧೧ ಜನರ ಪಟ್ಟಿಯನ್ನು ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ಪ್ರಶಾಂತ್ ಅವರು ಕಳುಹಿಸಿದ್ದಾರೆ. ಈ ನಿಟ್ಟಿನಲ್ಲಿ ಸ್ಥಳೀಯ ಶಾಸಕ ನಾರಾ ಭರತ್‌ರೆಡ್ಡಿ, ಬಿ.ನಾಗೇಂದ್ರ, ರಾಜ್ಯಸಭೆ ಸದಸ್ಯ ಡಾ. ಸೈಯದ್ ನಾಸೀರ್ ಹುಸೇನ್ ಅವರೊಂದಿಗೆ ಚರ್ಚಿಸಲಾಗುವುದು. ಜೊತೆಗೆ ಪಾಲಿಕೆಯ ಕಾಂಗ್ರೆಸ್ ಸದಸ್ಯರ ಅಭಿಪ್ರಾಯವನ್ನೂ ಸಂಗ್ರಹಿಸಿ ಅಂತಿಮ ನಿರ್ಧಾರ ತೆಗೆದುಕೋಳ್ಳುತ್ತೇವೆ.
– ಆರ್.ವಿ.ವೆಂಕಟೇಶ್, ವೀಕ್ಷಕರು, ಕೆಪಿಸಿಸಿ

 

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";