ಮತಾಂತರ ನಿಷೇಧ ಕಾಯ್ದೆ: ಜನರಿಗೆ ಆತಂಕ ಬೇಡಸಿಎಂ

ಹುಬ್ಬಳ್ಳಿ, ಡಿಸೆಂಬರ್ 12: ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಜನರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಅವರು ಇಂದು ಹುಬ್ಭಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಹಿಂದು, ಕ್ರಿಶ್ಚಿಯನ್, ಇಸ್ಲಾಂ ಹಾಗೂ ಸಿಖ್ ಧರ್ಮಗಳು ಸಂವಿಧಾನದಲ್ಲಿ ಗುರುತಿಸಲಾಗಿರುವ ಧರ್ಮಗಳಾಗಿದ್ದು, ಅವರ ಪ್ರಾರ್ಥನೆ, ಆಚರಣೆಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ಭರವಸೆ ನೀಡಿದ ಮುಖ್ಯಮಂತ್ರಿಗಳು, ಬಡತನದ ದುರುಪಯೋಗ ಪಡೆದು, ಆಸೆ, ಆಮಿಷಗಳನ್ನು ಒಡ್ಡಿ ಮತಾಂತರ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಮತಾಂತರದ ವಿಷಯ ಇಂದಿನದಲ್ಲ, ಈ ಬಗ್ಗೆ ಸ್ವತಂತ್ರದ ನಂತರದಲ್ಲಿ ಬಹಳ ದೊಡ್ಡ ಚರ್ಚೆಯಾಗಿದೆ. ವಿವಿಧ ರಾಜ್ಯಗಳಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇವುಗಳನ್ನು ಅವಲೋಕಿಸಿ, ಕಾನೂನು ಜಾರಿಗೆ ತರಬೇಕೆನ್ನುವುದು ಕರ್ನಾಟಕದ ಬಹುತೇಕ ಜನರ ಅಪೇಕ್ಷೆಯೂ ಆಗಿದೆ. ಈ ಹಿನ್ನೆಲೆಯಲ್ಲಿ ಕಾನೂನು ಇಲಾಖೆ ಪರಿಶೀಲನೆ ಮಾಡುತ್ತಿದೆ. ಪರಿಶೀಲನೆಯ ನಂತರ ಸಚಿವ ಸಂಪುಟ ಸಭೆಯಲ್ಲಿ ವಿಷಯ ಮಂಡನೆಯಾಗಲಿದೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ. ಬಹುತೇಕವಾಗಿ ಕಾನೂನು ಇಲಾಖೆ ಕರಡು ಕಾಯ್ದೆಗೆ ಒಪ್ಪಿಗೆ ನೀಡಿದಲ್ಲಿ ಅಧಿವೇಶನದಲ್ಲಿ ವಿಷಯ ಚರ್ಚೆಗೆ ಬರಲಿದೆ ಎಂದರು. ಮತಾಂತರ ಒಳ್ಳೆಯದಲ್ಲ ಮತಾಂತರ ಸಮಾಜಕ್ಕೆ ಒಳ್ಳೆಯದಲ್ಲ. ಬಡವರು, ದೀನದಲಿತರು ಅದಕ್ಕೆ ಒಳಗಾಗಬಾರದು. ಅವರ ಮನೆತನ, ಕುಟುಂಬದಲ್ಲಿ ಬಹಳಷ್ಟು ತೊಂದರೆಯಾಗುವುದರಿಂದ ಮತಾಂತರ ನಿಷೇಧ ಕಾಯ್ದೆಯನ್ನು ತರುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡಲಿದೆ ಎಂದರು.

Leave a Comment

Your email address will not be published. Required fields are marked *

Translate »
Scroll to Top