ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಹೊಟ್ಟೆ ತುಂಬಿದೆ : ಎಸ್ ಮಧು ಬಂಗಾರಪ್ಪ

ಶಿರಸಿ : ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ಹೊಟ್ಟೆ ತುಂಬಿದೆ. ಆದರೆ ಬೇರೆಯವರು ಬಂದು ಊಟ ಮಾಡುವಷ್ಟು ತಟ್ಟೆಯಲ್ಲಿ ಊಟವಿದೆ. ಕಾರಣ ಪಕ್ಷದ ಹಿತದೃಷ್ಟಿಯಿಂದ ಬೇರೆ ಪಕ್ಷದ ನಾಯಕರು ಬಂದಲ್ಲಿ ಸ್ವಾಗತ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವರಾದ ಎಸ್ ಮಧು ಬಂಗಾರಪ್ಪ ಹೇಳಿದರು.‌

ಶಿರಸಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬರುವ ಶಾಸಕರು, ಮಾಜಿ ಶಾಸಕರು ಬರಲು ಸ್ವಾಗತ. ಅಸಮಧಾನ ಇದ್ದಲ್ಲಿ ಅದನ್ನು ಹಿರಿಯ ನಾಯಕರು ಬಗೆಹರಿಸುತ್ತಾರೆ. ಕೆಲವೊಮ್ಮೆ ಅನಿವಾರ್ಯವಾಗಿ ಪಕ್ಷ ಸೇರ್ಪಡೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.‌

 

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಕಾರವಾರ ಮತ್ತು ಶಿವಮೊಗ್ಗ ಕ್ಷೇತ್ರವನ್ನು ನೂರಕ್ಕೆ ನೂರರಷ್ಟು ಗೆಲ್ಲುತ್ತೇವೆ. ಇದರ ಜೊತೆಗೆ ಜಿಲ್ಲಾ ಪಂಚಾಯತ್, ತಾಲೂಕಾ ಪಂಚಾಯತಕ್ಕೆ ನಾವು ತಯಾರಾಗಿದ್ದು, ಖಂಡಿತ ಕಾಂಗ್ರೆಸ್ ಹೆಚ್ಚಿನ ಕಡೆ ಗೆಲುವು ಸಾಧಿಸಲಿದೆ ಎಂದರು.‌

ಪ್ರಧಾನಿಗಳು ದೇಶಕ್ಕೆ ತಂದೆಯಿದ್ದಂತೆ. ಸಂತೋಷದ ಸಮಯದಲ್ಲಿ ಇಸ್ರೋ ಭೇಟಿಗೆ ರಾಜ್ಯಕ್ಕೆ ಬಂದಂತೆ ಕಷ್ಟದಲ್ಲಿ ಇರುವ ಮಣಿಪುರಕ್ಕೆ ಯಾಕೆ ಹೋಗಿಲ್ಲ ? ಎನ್ನುವುದಕ್ಕೆ ಬಿಜೆಪಿಯ ಯಾವೊಬ್ಬ ನಾಯಕ ಅಥವಾ ಕಾರ್ಯಕರ್ತ ಉತ್ತರಿಸಲಿ. ಜೊತೆಗೆ ಮೋದಿ ರಾಜ್ಯಕ್ಕೆ ಬಂದಾಗ ಬಿಜೆಪಿ ನಾಯಕರನ್ನು ಇಡಬೇಕಾದ ಜಾಗದಲ್ಲಿ ಇಟ್ಟಿದ್ದಾರೆ. ವಿರೋಧ ಪಕ್ಷದ ನಾಯಕನೂ ಇಲ್ಲದ ಬಿಜೆಪಿ ಮೋದಿ ಹೆಸರಲ್ಲಿ ಮತ ಕೇಳಿದ್ದರು. ಈಗ ಅದೇ ಮೋದಿ ಇವರನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಕೆಲಸ ಇಲ್ಲದ ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಯ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ ಸರ್ಕಾರ ಬಂದು ಕೇವಲ 100 ದಿನದಲ್ಲಿ ನಾವು ಹೇಳಿದ್ದ ಗ್ಯಾರಂಟಿಯನ್ನು ಅನುಷ್ಠಾನ ಮಾಡಲಾಗಿದೆ. ದೇಶದಲ್ಲೇ ಯೋಜನೆಯ ಬಗ್ಗೆ ಮಾತನಾಡುವ ರೀತಿ ಜಾರಿಗೆ ತರಲಾಗಿದೆ. ಕಾರಣ ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ನಿಲ್ಲಿಸಿ ಸರ್ಕಾರದ ಯೋಜನೆಗಳನ್ನು ಬೆಂಬಲಿಸಲಿ ಎಂದರು.

 

ಮುಂದಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಕರನ್ನು ‌ನೇಮಕ ಮಾಡಿಕೊಳ್ಳುವ ಬಗ್ಗೆ ಯೋಚಿಸಲಾಗುತ್ತಿದೆ ಎಂದರು. ಶೆ.70, 80 ರಷ್ಟು ಸಮಸ್ಯೆ ನೀಗಿಸುವಷ್ಟು ಮಾಡಲಾಗುತ್ತಿದೆ. ಜೊತೆಗೆ ಶಾಲೆಯಲ್ಲಿ ಕೊಠಡಿ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತದೆ ಎಂದು ಹೇಳಿದರು. ‌ಈ ವೇಳೆ ಶಿರಸಿ – ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ಇದ್ದರು.‌

Facebook
Twitter
LinkedIn
WhatsApp
Telegram
Tumblr
Email

Leave a Comment

Your email address will not be published. Required fields are marked *

Translate »
Scroll to Top