ಬೆಂಗಳೂರು: ಹಿಂದುಳಿದ ವರ್ಗಗಳಿಗೆ ಮೀಸಲಾತಿ ತಪ್ಪಲು ಕಾಂಗ್ರೆಸ್ಸೇ ಕಾರಣ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ತಿಳಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರದ ಕಾಂಗ್ರೆಸ್ ಬೆಂಬಲಿತ ಸರಕಾರವು ಸರಿಯಾಗಿ ಸಮರ್ಥನೆ ಮಾಡಿ ಹಿಂದುಳಿದ ವರ್ಗದ ಹಿತಾಸಕ್ತಿಯನ್ನು ಎತ್ತಿ ಹಿಡಿಯದ ಕಾರಣ ಹೀಗಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸತ್ಯವನ್ನು ಮುಚ್ಚಿಡುವ ಕೆಲಸ ಮಾಡುತ್ತಿದ್ದು, ಇದು ಅವರ ವ್ಯಕ್ತಿತ್ವಕ್ಕೆ ಕಳಂಕ ತರುವಂತಿದೆ ಎಂದರು.

ನಮ್ಮ ಸರಕಾರ ಹಿಂದುಳಿದ ವರ್ಗಗಳ ಪರ ಇದೆ. ದೇಶದಲ್ಲಿ ಮೊದಲ ಬಾರಿಗೆ ಸಂವಿಧಾನಬದ್ಧವಾಗಿ ಹಿಂದುಳಿದ ವರ್ಗಗಳಿಗೆ ಆಯೋಗ ರಚಿಸಿದ ಬಿಜೆಪಿ ಸರಕಾರ; ನರೇಂದ್ರ ಮೋದಿಯವರ ಸರಕಾರ. ಹಿಂದುಳಿದ ವರ್ಗಗಳ ಹಿತಾಸಕ್ತಿ ಕಾಪಾಡಲು ನಾವು ಬದ್ಧರಿದ್ದೇವೆ ಎಂದು ತಿಳಿಸಿದರು. ಮಹಾರಾಷ್ಟ್ರದ ನಿಮ್ಮದೇ ಸರಕಾರ ಮಾಡಿದ ತಪ್ಪಿನಿಂದ ಹೀಗಾಗಿದೆ ಎಂದು ಸಿದ್ದರಾಮಯ್ಯರಿಗೆ ನೆನಪು ಮಾಡುವುದಾಗಿ ತಿಳಿಸಿದರು. ನ್ಯಾಯಾಧೀಶರ ಪೀಠ ತಡೆಯಾಜ್ಞೆ ನೀಡಿದ್ದರಿಂದ ಬಿಬಿಎಂಪಿ ಚುನಾವಣೆ ಮಾಡಲು ಸಾಧ್ಯವಾಗಿಲ್ಲ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ರಾಜ್ಯಸಭೆಗೆ ಸ್ಪರ್ಧಿಸುವವರ ವಿವರವನ್ನು ಸಂಸದೀಯ ಮಂಡಳಿ ಅಂತಿಮಗೊಳಿಸಲಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ರಾಷ್ಟ್ರಗೀತೆ, ಸಂವಿಧಾನವನ್ನು ವಿವಾದದ ವಿಷಯ ಮಾಡಬಾರದು. ಅದನ್ನು ಗೌರವಿಸಬೇಕು ಎಂದು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.