ಬೆಂಗಳೂರು: ರಾಜ್ಯದ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ಸರಕಾರವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಬೆಲೆ ಏರಿಕೆಯ ಕೊಡುಗೆಯನ್ನು ವರ್ಷದುದ್ದಕ್ಕೂ ಜನರಿಗೆ ನೀಡಿದೆ ಎಂದು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಜನರ ರಕ್ತ ಹೀರುವುದು; ಬೆಲೆ ಏರಿಕೆಯ ಬರೆ ಎಳೆಯುವುದೇ ಈ ಸರಕಾರದ ಸಾಧನೆ ಎಂದು ಟೀಕಿಸಿದರು. ಬೆಲೆ ಏರಿಕೆ ಮತ್ತು ಹಣದುಬ್ಬರದ ಗ್ಯಾರಂಟಿಯನ್ನು ಕಾಂಗ್ರೆಸ್ ಸರಕಾರ ನೀಡುತ್ತಿದೆ ಎಂದು ದೂರಿದರು.
ಹೈನುಗಾರರಿಗೆ ಹಾಲಿನ ಸಬ್ಸಿಡಿ ನೀಡಿಲ್ಲ; ರೈತರಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ನೀಡಬೇಕಾದ ಹಣ ನೀಡುತ್ತಿಲ್ಲ. ಬರ ನಿರ್ವಹಣೆಯಲ್ಲಿ ಸರಕಾರ ತನ್ನ ಪಾಲಿನ ಹಣವನ್ನೂ ನೀಡಿಲ್ಲ. ರೈತರ ಮೇಲೆ ಬಿತ್ತನೆ ಬೀಜದ ದರದಿಂದ ಆರಂಭಿಸಿ ವಿದ್ಯುತ್ತಿನ ವರೆಗೆ, ನೀರಿನ ದರವನ್ನೂ ಹೆಚ್ಚಿಸಿಕೊಂಡು ಬರುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅರ್ಧ ಲೀಟರ್ ಹಾಲಿಗೂ 2 ರೂ, ಒಂದು ಲೀಟರ್ ಹಾಲಿಗೂ 2 ರೂ. ದರ ಏರಿಸಿದೆ. ಬಡವರಿಗೆ ದೊಡ್ಡ ಹೊಡೆತ ಕೊಟ್ಟಂತಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸುವ ಕೆಲಸವನ್ನು ಬಹಳ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಭ್ರಷ್ಟ ಕಾಂಗ್ರೆಸ್ ಸರಕಾರವು ಜನವಿರೋಧಿ; ಇದು ಅಭಿವೃದ್ಧಿ ಶೂನ್ಯ ಸರಕಾರ ಎಂದು ಟೀಕಿಸಿದರು. ಬಿಜೆಪಿ ಈ ಬೆಲೆ ಹೆಚ್ಚಳವನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು. ಕೆಎಂಎಫ್, ಸರಕಾರದ ಭ್ರಷ್ಟಾಚಾರವನ್ನು ನಿಯಂತ್ರಿಸಬೇಕು ಎಂದು ಅವರು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.