ಸಾಧನೆಗೊಂದು ಸಲಾಂ: ಪ್ರಗತಿ ಶಾಲೆಯ ವಿದ್ಯಾರ್ಥಿನಿ ಚೈತನ್ಯ ಗೆ ಅಭಿನಂದನೆಗಳ ಸುರಿಮಳೆ

ದೇವನಹಳ್ಳಿ: 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆದಿದ್ದು, ನಮ್ಮ ಪ್ರಗತಿ ಶಾಲೆಗೆ ಇದೇ ಪ್ರಥಮ ಬಾರಿಗೆ ವಿದ್ಯಾರ್ಥಿನಿ ಚೈತನ್ಯ 625 ಕ್ಕೆ 625 ಅಂಕ ಗಳಿಸುವ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ ಎಂದು ಪ್ರಗತಿ ವಿದ್ಯಾ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಎಸ್. ಕೃಪಾಶಂಕರ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಪ್ರಗತಿ ಶಾಲಾ ಆವರಣದಲ್ಲಿ ವಿದ್ಯಾರ್ಥಿನಿ ಚೈತನ್ಯಳಿಗೆ ಅಭಿನಂದನೆ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿ, ವಿದ್ಯಾರ್ಥಿನಿಯ ಸಾಧನೆಯ ಹಿಂದೆ ಶಿಕ್ಷಕರ ಮತ್ತು ಪೋಷಕರ ಶ್ರಮವಿದ್ದು, ಈ ಸಾಧನೆಗೆ ಹಿಂದಿನ ಪ್ರೋತ್ಸಾಹಕ್ಕೆ ಅವರಿಗೂ ಶಾಲಾ ಆಡಳಿತ ಮಂಡಳಿ ಅಭಿನಂದಿಸುವುದಾಗಿ ತಿಳಿಸಿದರು.

ಪ್ರಗತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸತೀಶ್ ಕುಮಾರ್ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ಚೈತನ್ಯ ರವರಿಗೆ ಅಭಿನಂದನೆ ಸಲ್ಲಿಸಿ ಮುಂದಿನ ಪ್ರಥಮ ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾಭ್ಯಾಸವನ್ನು ನಮ್ಮ ಸಂಸ್ಥೆಯಲ್ಲಿ ಉಚಿತವಾಗಿ ನೀಡುವುದಾಗಿ ತಿಳಿಸಿದರು. ಅಭಿನಂದನೆ ಸ್ವೀಕರಿಸಿದ ವಿದ್ಯಾರ್ಥಿನಿ ಚೈತನ್ಯ ಮಾತನಾಡಿ, ನನ್ನ ಈ ಸಾಧನೆಗೆ ನನ್ನ ಪೋಷಕರು, ಶಿಕ್ಷಕರು ಮತ್ತು ಸ್ನೇಹಿತರು ತುಂಬಾ ಸಹಕಾರ ನೀಡಿದ್ದಾರೆ. ಮುಂಜಾನೆ 3 ಗಂಟೆಗೆ ಎದ್ದು ಇಷ್ಟಪಟ್ಟು ಓದುತ್ತಿದೆ. ಶಾಲೆಗಳಲ್ಲೂ ಶಿಕ್ಷಕರು ಯಾವುದೇ ಬೇಜಾರಿಲ್ಲದೇ ನಮ್ಮ ಅನುಮಾನಗಳನ್ನು ಪರಿಹರಿಸುತ್ತಿದ್ದರು. ಪರೀಕ್ಷೆ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರಿದ್ದರು ಪರೀಕ್ಷೆಯನ್ನು ಶಾಂತ ರೀತಿಯಲ್ಲಿ ಎದುರಿಸಿದೆ. ಅದರ ಪ್ರತಿಫಲವಾಗಿ ಮೊದಲನೆ ಸ್ಥಾನಗಳಿಸಿದ್ದೇನೆ ಎಂದು ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ಶ್ರೀ ನಗರೇಶ್ವರಸ್ವಾಮಿ ಎಜುಕೇಶನ್ ಟ್ರಸ್ಟ್ ನ ಆಡಳಿತ ಮಂಡಳಿ ವತಿಯಿಂದ ಚೈತನ್ಯ ರವರನ್ನು ಆತ್ಮೀಯವಾಗಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಪ್ರಗತಿ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ರಜತಾ ಕೃಪಾಶಂಕರ್, ಮುಖ್ಯಶಿಕ್ಷಕ ವಿ.ಬಸವರಾಜು, ಪ್ರಕಾಶ್, ಪ್ರಾಂಶುಪಾಲ ಬಿ.ಎನ್.ರಮೇಶ್, ಸುರೇಶ್, ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಹಾಗೂ ಪ್ರಗತಿ ಶಿಕ್ಷಣ ಸಂಸ್ಥೆಯ ಶಿಕ್ಷಕ ವೃಂದ ಇದ್ದರು.

Leave a Comment

Your email address will not be published. Required fields are marked *

Translate »
Scroll to Top