ದೇವಲಾಪುರ ಗ್ರಾಮದಲ್ಲಿ ಕಂಪ್ಯೂಟರ್ ತರಬೇತಿಗೆ ಶಾಸಕ ಭೀಮಾನಾಯ್ಕ ಚಾಲನೆ

ಮರಿಯಮ್ಮನಹಳ್ಳಿ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣ ಅನಿವಾರ್ಯವಾಗಿದೆ. ಕೋವಿಡ್ ವೇಳೆ ಆನ್‌ಲೈನ್ ಶಿಕ್ಷಣಕ್ಕೆ ಒತ್ತು ನೀಡಿದ್ದೇವೆ. ಹಾಗಾಗಿ ಪ್ರತಿಯೊಬ್ಬರಿಗೂ ಕಂಪ್ಯೂಟರ್ ಜ್ಞಾನ ಅತ್ಯಅವಶ್ಯವಾಗಿದೆ ಎಂದು ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ ಹೇಳಿದರು. ಅವರು ಪಟ್ಟಣ ಸಮೀಪದ ದೇವಲಾಪುರ ಗ್ರಾಮದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ (ರಿ) ವತಿಯಿಂದ ಹಮ್ಮಿಕೊಳ್ಳಲಾಗಿರುವ ಗ್ರಾಮೀಣ ಮಕ್ಕಳಿಗೆ ಕಂಪ್ಯೂಟರ್ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಸುಸಜ್ಜಿತ ಹಾಸ್ಟೆಲ್, ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಆರೋಗ್ಯ ಕ್ಷೇತ್ರಕ್ಕೂ ಆದ್ಯತೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಎಲ್ಲರಿಗೂ ಶಿಕ್ಷಣ ದೊರೆಯಬೇಕು ಎಂದರು. ದೇವಲಾಪುರ ಗ್ರಾಮದ ಯುವಕ ಭೀಮರಾಜ ಯು. ತನ್ನ ಸ್ವಂತ ಹಣದಲ್ಲಿ ಹತ್ತು ಕಂಪ್ಯೂಟರ್‌ಗಳನ್ನು ಖರೀದಿಸಿ ಗ್ರಾಮೀಣ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ. ಮುಂಬರುವ ದಿನಗಳಲ್ಲಿ ಈ ಸಂಸ್ಥೆಗೆ ಕೈಲಾದ ಮಟ್ಟಿನ ಸಹಾಯ ಮಾಡುವೆ. ಇಂಥ ಕಾರ್ಯಕ್ಕೆ ಎಲ್ಲರೂ ಬೆಂಬಲಿಸಬೇಕು ಎಂದರು. ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷ ಭೀಮರಾಜ ಯು. ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಬೇಕು. ನಾನು ದೇವಲಾಪುರ ಗ್ರಾಮದಿಂದ ಮರಿಯಮ್ಮನಹಳ್ಳಿ, ಹೊಸಪೇಟೆಗೆ ಹೋಗಿ ಕಂಪ್ಯೂಟರ್ ಕಲಿತಿರುವೆ. ಇಂಥ ಕಷ್ಟ ನಮ್ಮ ಊರಿನ ಹುಡುಗರಿಗೆ ಬರಬಾರದು ಎಂದು ಕಂಪ್ಯೂಟರ್ ತರಬೇತಿ ನೀಡುತ್ತಿರುವೆ ಎಂದರು.

ತಾಪಂ.ಮಾಜಿ ಸದಸ್ಯ ಉಪ್ಪಾರ ಸೋಮಪ್ಪ ಮಾತನಾಡಿ, ನಾವು ಈಗ 5ಜಿ ಯುಗದಲ್ಲಿ ಇದ್ದೇವೆ. ಹಾಗಾಗಿ ಹಳ್ಳಿ, ನಗರ ಇರಲಿ. ಎಲ್ಲರಿಗೂ ಕಂಪ್ಯೂಟರ್ ಜ್ಞಾನ ಅವಶ್ಯವಾಗಿದೆ. ಹಾಗಾಗಿ ಪ್ರತಿಯೊಬ್ಬರು ಕಂಪ್ಯೂಟರ್ ಶಿಕ್ಷಣ ಪಡೆಯಬೇಕು ಎಂದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಗೋವಿಂದರ ಪರಶುರಾಮ, ಕಾರ್ಯನಿರತ ಪ್ರತಕರ್ತರ ಸಂಘದ ವಿಜಯನಗರ ಜಿಲ್ಲಾಧ್ಯಕ್ಷ ಸತ್ಯನಾರಾಯಣ, ಪತ್ರಕರ್ತರಾದ ಕೆ. ಲಕ್ಷ್ಮಣ, ವೆಂಕೋಬ ಪೂಜಾರ ನಾಯಕ, ಕೃಷ್ಣ ಎನ್. ಲಮಾಣಿ, ಸುರೇಶ್ ಚವ್ಹಾಣ್, ಮುಖಂಡ ಸತ್ಯನಾರಾಯಣ,ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ನ ಕಾರ್ಯದರ್ಶಿ ಉಷಾ ಯು.ಆರ್, ಡಣನಾಯಕನಕೆರೆ ಗ್ರಾಪಂ ಅಧ್ಯಕ್ಷೆ ಅಕ್ಕಮ್ಮ, ಉಪಾಧ್ಯಕ್ಷ ಉಪ್ಪಾರ ವೆಂಕಟೇಶ್, ಸದಸ್ಯರಾದ ಎಚ್.ರೇಣುಕಾ ಪರಶುರಾಮ, ಲಕ್ಷ್ಮೀದೇವಿ ಆನಂದ್ ಹಾಗೂ ಗ್ರಾಮದ ಯುವಕರಾದ ಶರೀಫ್, ಅಶೋಕ, ಸಿದ್ದೇಶ್ ಇತರರಿದ್ದರು.

Leave a Comment

Your email address will not be published. Required fields are marked *

Translate »
Scroll to Top