ಕಲ್ಬುರ್ಗಿ : ಕೆಕೆಆರ್‍ಡಿಬಿ, ನಂಜುಡಪ್ಪ ವರದಿ ಅನುಷ್ಠಾನ, ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಳ ಆಯಾಮಗಳಲ್ಲಿ ಕಲ್ಯಾಣ ಕರ್ನಾಟಕದ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ,ಮಹಿಳಾ ಸಬಲೀಕರಣ, ಪೌಷ್ಟಿಕತೆ ಕ್ಷೇತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕಲ್ಬುರ್ಗಿಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಯೋಜನೆಗಳಿಗಾಗಿ ಕೆಕೆಆರ್‍ಡಿಬಿಗೆ 3000 ಕೋಟಿ ರೂ. ಅನುದಾನ ಮೀಸಲಿದೆ. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಪೌಷ್ಟಿಕತೆ, ಮಾನವ ಸಂಪನ್ಮೂಲ ಕೌಶಲ್ಯ ಒತ್ತು ನೀಡಲಾಗುವುದು. ರಾಜ್ಯದ ಸರಾಸರಿಗಿಂತ ಕಡಿಮೆ ಸಾಧನೆ ಮಾಡಿರುವ ತಾಲ್ಲೂಕುಗಳನ್ನು ಅಭಿವೃದ್ಧಿ ಆಕಾಂಕ್ಷಿ 104 ತಾಲ್ಲೂಕುಗಳನ್ನು ಹಾಗೂ 100 ತಾಲ್ಲೂಕುಗಳನ್ನು ಆರೋಗ್ಯ ಸೇವೆ ಬಲಪಡಿಸಲು ಗುರುತಿಸಲಾಗಿದೆ. ಇದರಲ್ಲಿ ಹೆಚ್ಚು ತಾಲ್ಲೂಕುಗಳು ಕಲ್ಯಾಣ ಕರ್ನಾಟಕ ಭಾಗದಲ್ಲಿವೆ. 371 ಜೆ ಅನುಷ್ಠಾನದಲ್ಲಿನ ಸಮಸ್ಯೆಗಳನ್ನು ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಂಜುಡಪ್ಪ ವರದಿ ಅನುಷ್ಟಾನಕ್ಕೆ ಸಚಿವ ಸಂಪುಟದ ಉಪಸಮಿತಿ ಶಿಫಾರಸ್ಸು ಮಾಡಿದೆ. ಎಸ್‍ಡಿಪಿ ಯೋಜನೆ ಪ್ರಕಾರ ಹೆಚ್ಚು ಹಣವನ್ನು ನೀಡಲಾಗುವುದು. ಕಳೆದ ವರ್ಷದ ಅನುದಾನ 14192 ಕೋಟಿ ರೂ. ಜನವರಿಯಲ್ಲಿಯೇ ಬಿಡುಗಡೆ ಮಾಡಲಾಗಿದೆ. ಈ ಭಾಗದ ಯೋಜನೆಗಳಿಗೆ ಹಣದ ಕೊರತೆ ಆಗುವುದಿಲ್ಲ. ಕೆಕೆಆರ್‍ಡಿಬಿ ಕ್ರಿಯಾ ಯೋಜನೆಗಳ ಅನುಮೋದನೆಯನ್ನು ಏಪ್ರಿಲ್ 30ರೊಳಗೆ ಮಾಡಬೇಕೆಂದು ಸ್ಪಷ್ಟ ಸೂಚನೆ ನೀಡಲಾಗಿದೆ ಎಂದರು.

ಮೆಗಾ ಟೆಕ್ಸ್ ಟೈಲ್ ಪಾರ್ಕ್ :
ಕರ್ನಾಟಕ ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಕಲ್ಬುರ್ಗಿ ಹಾಗೂ ವಿಜಯಪುರಲದಲ್ಲಿ ಮೆಗಾ ಟೆಕ್ಸ್‍ಟೈಲ್ ಪಾರ್ಕ್ ಸ್ಥಾಪಿಸಲು ಕೇಂದ್ರ ಸರ್ಕಾರದಿಂದ ಮೂಲಸೌಕರ್ಯ ಸೇರಿದಂತೆ ಎಲ್ಲ ನೆರವು ಕೋರಲಾಗಿದೆ ಎಂದರು.
ಇಎಸ್‍ಐ ಆಸ್ಪತ್ರೆಗೆ ಏಮ್ಸ್ ಮಾನ್ಯತೆ :
ಕಲ್ಬುರ್ಗಿಗೆ ಇಎಸ್‍ಐ ಆಸ್ಪತ್ರೆಯನ್ನು ಧಾರವಾಡಕ್ಕೆ ತೆಗೆದುಕೊಂದು ಹೋಗುವ ಪ್ರಯತ್ನವಾಗಿದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ,ಏಮ್ಸ್ ಆಸ್ಪತ್ರೆಯ ಬೇಡಿಕೆ ಇದೆ. ಕಲ್ಬುರ್ಗಿಯಲ್ಲಿ ಮೂಲಸೌಕರ್ಯಗಳಿರುವ ಇಎಸ್‍ಐ ಆಸ್ಪತ್ರೆ ಪೂರ್ಣಪ್ರಮಾಣದ ಬಳಕೆಯಾಗಬೇಕಾದರೆ ಏಮ್ಸ್ ಆಸ್ಪತ್ರೆಯ ಮಾನ್ಯತೆ ದೊರೆತರೆ, ಗುಣಮಟ್ಟದ ಆಸ್ಪತ್ರೆಯಾಗುತ್ತದೆ ಎಂಬ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಇಡಲಾಗಿದೆ. 371 ಜೆ, ಇ,ಡಿ ಪ್ರದೇಶಗಳಲ್ಲಿ ಇಎಸ್‍ಐ ಆಸ್ಪತ್ರೆಗಳ ಸ್ಥಾಪನೆಯನ್ನು ಕಡ್ಡಾಯಗೊಳಿಸಬೇಕೆಂದು ಸಲಹೆ ನೀಡಿದ್ದೇನೆ ಎಂದರು.
2024ರೊಳಗೆ ಮನೆಮನೆಗೆ ನೀರು ಪೂರ್ಣಗೊಳಿಸುವ ಗುರಿ:
ಕಲ್ಬುರ್ಗಿ ತಾಲ್ಲೂಕುಗಳಲ್ಲಿ ಉತ್ತಮ ಮೂಲಭೂತ ಸೌಕರ್ಯ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎನ್ನುವುದಕ್ಕೆ ಉತ್ತರಿಸಿ, ಜಲಜೀವನ್ ಮಿಷನ್ ಅಡಿ ಮನೆ ಮನೆಗೆ ನೀರು ತಲುಪಿಸುವ ಕಾರ್ಯವನ್ನು ನಮ್ಮ ಪ್ರಧಾನಿಗಳು ಮಾಡಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ 25 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡಲಾಗುವುದು. 2024ರೊಳಗೆ ರಾಜ್ಯದಲ್ಲಿ ಎಲ್ಲ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ ಎಂದರು.
ಮಾಹಿತಿ ನೀಡಿದರೆ ಪೂರ್ಣ ಪ್ರಮಾಣದ ತನಿಖೆ :
ದಿಂಗಾಲೇಶ್ವರ ಸ್ವಾಮೀಜಿಗಳ ಆರೋಪದ ಬಗ್ಗೆ ಪ್ರತಿಕ್ರಯಿಸಿ, ಶ್ರೀಗಳ ಬಗ್ಗೆ ಗೌರರವಿದೆ. ಈ ಪ್ರಕರಣದಲ್ಲಿ ಅವರಿಗೆ ಯಾವ ವರ್ಷದಲ್ಲಿ ಅನುದಾನ ಬಿಡುಗಡೆಯಾಯಿತು, ಯಾರು ಕಮಿಷನ್ ಕೇಳಿದ್ದಾರೆ ಎಂಬ ವಿವರಗಳನ್ನು ಅವರು ನೀಡಿದರೆ, ಪೂರ್ಣ ಪ್ರಮಾಣದ ತನಿಖೆಯನ್ನು ಮಾಡಿಸಲಾಗುವುದು ಎಂದರು.
ಕಾನೂನು ರೀತ್ಯ ಕ್ರಮ :
ಹುಬ್ಬಳ್ಳಿ ಪ್ರಕರಣದಲ್ಲಿ ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ತೆಗೆದುಕೊಂಡಿರುವ ಕ್ರಮದಂತೆಯೇ ತೆಗೆದುಕೊಳ್ಳಲಾಗುವುದೇ ಎಂಬುದಕ್ಕೆ ಉತ್ತರಿಸಿ, ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಡಿಜಿ ಹಳ್ಳಿ ಕೆಜಿ ಹಳ್ಳೀ ಪ್ರಕರಣದಲ್ಲಿ ಆದ ನಷ್ಟಕ್ಕೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಮಿತಿ ರಚಿಸಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಶಾಂತಿ ಸೌಹಾರ್ದತೆಯಿಂದ ಸಮಸ್ಯೆಗೆ ಪರಿಹಾರ :
ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕಗಳ ಬಳಕೆ ಸಂಬಂಧ ನೋಟೀಸ್ ನೀಡಲಾಗಿದೆ. ಪೊಲೀಸ್ ಠಾಣೆ ವ್ಯಾಪ್ತಿಯಡಿ ಬರುವ ಧಾರ್ಮಿಕ ಕೇಂದ್ರಗಳ ಮೈಕ್ ಧ್ವನಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಹಾಗೂ ಶಾಂತಿ ಸೌಹಾರ್ದತೆ, ಮಾತುಕತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಲು ಸೂಚನೆ ನೀಡಲಾಗಿದೆ.