ಮಾರ್ಚ್‌ 31 ರ ಒಳಗಾಗಿ ಬಾಗೇಪಲ್ಲಿ 24 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿ ಪೂರ್ಣಗೊಳಿಸಿ

ಅಧಿಕಾರಿಗಳಿಗೆ ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಗಡವು

ಮಾಜಿ ಮುಖ್ಯಮಂತ್ರಿ ವೀರಪ್ಪಮೋಯ್ಲಿ ಹಾಗೂ ಹೊಸಕೋಟೆ ಶಾಸಕರೊಂದಿಗೆ ಚರ್ಚೆ

ಹೊಸಕೋಟೆ ತಾಲ್ಲೂಕಿನ ಕೆರೆಗಳಿಗೆ ಸಂಬಂಧಿಸಿದ ಸಂಸ್ಕರಿಸಿದ ತ್ಯಾಜ್ಯ ನೀರನ್ನ ತುಂಬಿಸುವ ಏತ ನೀರಾವರಿ ಯೋಜನೆಯ ಬಗ್ಗೆ ಚರ್ಚೆ

ಬೆಂಗಳೂರು:  ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಕೆರೆಗಳಿಗೆ ಸಂಬಂಧಿಸಿದ ಸಂಸ್ಕರಿಸಿದ ತ್ಯಾಜ್ಯ ನೀರನ್ನ ತುಂಬಿಸುವ ಏತ ನೀರಾವರಿ ಯೋಜನೆಯ ವ್ಯಾಪ್ತಿಯಲ್ಲಿರುವ ಬಾಗೇಪಲ್ಲಿಯ 24 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ಮಾರ್ಚ್‌ 31 ರೊಳಗಾಗಿ ಮುಗಿಸುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀ ಎನ್.ಎಸ್‌ ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು. 

 

ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್‌ ಎಸ್‌ ಬೋಸರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೋಯ್ಲಿ, ಹೊಸಕೋಟೆ ಶಾಸಕರಾದ ಶರತ್‌ ಬಚ್ಚೇಗೌಡ ಭಾಗವಹಿಸಿದ್ದರು.  ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಕೆರೆಗಳಿಗೆ ಸಂಬಂಧಿಸಿದ ಸಂಸ್ಕರಿಸಿದ ತ್ಯಾಜ್ಯ ನೀರನ್ನ ತುಂಬಿಸುವ ಏತ ನೀರಾವರಿ ಯೋಜನೆಯ ಬಗ್ಗೆ ಸಭೆಯಲ್ಲಿ ವಿಸ್ತ್ರುತ ಚರ್ಚೆ ನಡೆಸಲಾಯಿತು. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡ ಸಚಿವರು ಕಾಮಾಗಾರಿಗಳ ಪ್ರಗತಿಯ ಬಗ್ಗೆ ಜನಪ್ರತಿನಿಧಿಗಳಿಗೆ ವಿವರಿಸಿದರು. 

ಮಾಜಿ ಮುಖ್ಯಮಂತ್ರಿ ವೀರಪ್ಪಮೋಯ್ಲಿ ಮಾತನಾಡಿ, ಸಂಸ್ಕರಿಸಿದ ತ್ಯಾಜ್ಯ ನೀರನ್ನ ಕೆರೆಗಳಿಗೆ ತುಂಬಿಸುವ ಏತ ನೀರಾವರಿ ಯೋಜನೆಯಿಂದಾಗಿ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಬಹಳಷ್ಟು ಅನುಕೂಲವಾಗಿದೆ. ಅಂತರ್ಜಲ ಹೆಚ್ಚಳವಾಗಿದ್ದು, ರೈತರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಬಾಗೇಪಲ್ಲಿಯ 24 ಮತ್ತು ಹೊಸಕೋಟೆ ಭಾಗದ 43 ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಚುರುಕುಗೊಳಿಸಬೇಕಾದಂತಹ ಅವಶ್ಯಕತೆಯಿದೆ. ಈ ಕಾಮಗಾರಿ ಈಗಾಗಲೇ ಮುಗಿಯಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿಗಳು ವೇಗವನ್ನು ಪಡೆದುಕೊಳ್ಳದೇ ಇರುವುದರ ಬಗ್ಗೆ ಕಾಳಜಿ ವ್ಯಕ್ತಪಡಿಸಿದರು.

ಮಾರ್ಚ್‌ 31 ರೊಳಗಾಗಿ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಗಡುವು:

 

ಬಾಗೇಪಲ್ಲಿಯ 24 ಕೆರೆಗಳಿಗೆ ನೀರು ತುಂಬಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನ ಚುರುಕುಗೊಳಿಸಬೇಕು. ಗುತ್ತಿಗೆದಾರರು ಕಾಲಮಿತಿಯಲ್ಲಿ ಕಾಮಗಾರಿಯನ್ನು ಮುಗಿಸುವಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಸಮರೋಪಾದಿಯಲ್ಲಿ ಕಾಮಗಾರಿಗಳನ್ನು ಕೈಗೊಂಡು ಮಾರ್ಚ್‌ 21, 2024 ರೊಳಗಾಗಿ ಕೆರೆ ತುಂಬಿಸುವ ಕಾರ್ಯದ ಉದ್ಘಾಟನೆಯಾಗಬೇಕು. ಈ ನಿಟ್ಟಿನಲ್ಲಿ ಸಿದ್ದತೆಗಳನ್ನು ಕೈಗೊಳ್ಳುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಅಧಿಕಾರಿಗಳಿಗೆ ಗಡುವು ನೀಡಿದರು. 

ಕಲುಷಿತ ನೀರು ಕೆರೆಗಳಿಗೆ ಸೇರದಂತೆ ಕ್ರಮವಹಿಸಿ:

ಕಲುಷಿತ ನೀರು ಕೆರೆಗಳಿಗೆ ಸೇರದಂತೆ ಕ್ರಮವನ್ನು ವಹಿಸಬೇಕಾದ ಜವಾಬ್ದಾರಿಯ ಆಯಾ ಸ್ಥಳೀಯ ಸಂಸ್ಥೆಗಳ ಮೇಲಿದೆ. ಆದರೆ, ಈ ಬಗ್ಗೆ ನಮ್ಮ ಇಲಾಖೆ ಅಧಿಕಾರಿಗಳೂ ಕೂಡಾ ಗಮನ ಹರಿಸಬೇಕಾದ ಅಗತ್ಯವಿದೆ. ಸಂಸ್ಕರಿತ ತ್ಯಾಜ್ಯ ನೀರಿನ ಪರಿಶೀಲನೆ ಮಾಡುವುದು ಮತ್ತು ಕಲುಷಿತ ನೀರು ಕೆರೆ ಸೇರದಂತೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊಸಕೋಟೆ ತಾಲ್ಲೂಕಿನ 43 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು ಭರ್ತಿಗೆ ಗಡುವು:

ಹೊಸಕೋಟೆ ತಾಲ್ಲೂಕಿನ 43 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು ತುಂಬಿಸುವ ಏತ ನೀರಾವರಿಯ ಕಾಮಗಾರಿ ಎರಡು ಹಂತದಲ್ಲಿ ನಡೆಯುತ್ತಿದೆ. ಮೇಡೇಹಳ್ಳಿ ಮತ್ತು ಕಾಡು ಬೀಸನಹಳ್ಳಿ ಭಾಗದ ಕಾಮಾಗಾರಿಯನ್ನು ಸೆಪ್ಟೆಂಬರ್‌ 15 ರ ಒಳಗಾಗಿ ಮುಗಿಸಿ ಟ್ರಯಲ್‌ ರನ್‌ ಪ್ರಾರಂಭ ಮಾಡಬೇಕು. ಅಲ್ಲದೇ ಕೆಆರ್‌ ಪುರಂನ ವ್ಯಾಪ್ತಿಯಲ್ಲಿನ ಕಾಮಗಾರಿಗಳನ್ನ ಅಕ್ಟೋಬರ್‌ 30 ರೊಳಗಾಗಿ ಮುಗಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

 

ಸಭೆಯಲ್ಲಿ ಹೊಸಕೋಟೆ ಶಾಸಕರಾದ ಶರತ್‌ ಬಚ್ಚೇಗೌಡ,  ಸಣ್ಣ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿ ಯತೀಶ್‌ ಚಂದ್ರ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top